"ಚಾನಲ್ ಮುಖ್ಯಸ್ಥ ರೂಮ್ ಬುಕ್ ಮಾಡ್ತೀನಿ ಬಾ ಎಂದು ಕರೆದ"; ಕಹಿ ಅನುಭವ ಬಿಚ್ಚಿಟ್ಟ ವರಲಕ್ಷ್ಮಿ
ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಮದುವೆ ಇತ್ತೀಚೆಗೆ ನಿಶ್ಚಯವಾಗಿತ್ತು. ನಟ ಶರತ್ ಕುಮಾರ್ ಹಾಗೂ ನಟಿ ರಾಧಿಕಾ ಶರತ್‌ಕುಮಾರ್ ಪುತ್ರಿ ವರಲಕ್ಷ್ಮಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಮಾಣಿಕ್ಯ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ಮಿಂಚಿದ್ದರು. ಇನ್ನುಳಿದಂತೆ ತಮಿಳು, ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ಆಕೆ ಮಿಂಚಿದ್ದಾರೆ.
ಕೆಲ ವರ್ಷಗಳ ಹಿಂದೆ ತಮಗಾದ ಕಹಿ ಅನುಭವದ ಬಗ್ಗೆ ವರಲಕ್ಷ್ಮಿ ಶರತ್‌ಕುಮಾರ್ ಬಹಿರಂಗವಾಗಿ ಮಾತನಾಡಿದ್ದರು. ಇದೀಗ ಆ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಇನ್ನು ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದ ಬಂದರೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಇದೇ ಕಾರಣಕ್ಕೆ ಸಾಕಷ್ಟು ಅವಕಾಶಗಳು ನನ್ನ ಕೈತಪ್ಪಿದವು ಎಂದು ಆಕೆ ಹೇಳಿಕೊಂಡಿದ್ದಾರೆ. ಸ್ಟಾರ್ ನಟನ ಮಗಳಾಗಿದ್ದರೂ ತಮ್ಮ ಸಿನಿಜರ್ನಿ ಅಷ್ಟು ಸುಲಭವಾಗಿರಲಿಲ್ಲ ಎಂದು ಆಕೆ ತಿಳಿಸಿದ್ದಾರೆ. "ಒಮ್ಮೆ ಒಂದು ದೊಡ್ಡ ಚಾನೆಲ್ ಹೆಡ್ ಕೆಲಸದ ವಿಚಾರವಾಗಿ ನಮ್ಮ ಮನೆಗೆ ಬಂದಿದ್ದರು. ಕೆಲಸ ಮುಗಿದ ಮೇಲೆ ಮತ್ತೆ ಭೇಟಿ ಆಗೋಣ ಎಂದರು. ನಾನು ಯಾಕೆ ಎಂದು ಕೇಳಿದೆ. ಬೇರೆ ವಿಚಾರಕ್ಕೆ ಎಂದರು.
ಬೇರೆ ವಿಚಾರ ಅಂದ್ರೆ ಏನು ಸರ್? ಎಂದು ಕೇಳಿದೆ. ಇಲ್ಲ ಈಗ ನಿಮ್ಮ ಮೂಡ್ ಚೆನ್ನಾಗಿ ಇಲ್ಲ. ರೂಮ್ ಬುಕ್ ಮಾಡೋದಾ? ಎಂದು ಕೇಳಿದರು. ನನಗೆ ಅಚ್ಚರಿ ಆಯಿತು. ನಾನು ಖ್ಯಾತ ನಟನ ಮಗಳು. ನಮ್ಮ ಮನೆಗೆ ಬಂದಿದ್ದೀಯಾ. ನನ್ನ ಬಳಿಯೇ ಈ ರೀತಿ ನಡೆದುಕೊಳ್ಳುತ್ತೀಯಾ? ಕೇಳುತ್ತೀಯಾ? ಅಂದ್ರೆ ಬೇರೆ ಯುವತಿಯರ ಜೊತೆ ಹೇಗೆ ನಡೆದುಕೊಳ್ಳುತ್ತೀಯಾ? ಎಂದು ನಾನು ದೂರು ದಾಖಲಿಸಿದೆ.
ಆತನ ವಿರುದ್ಧ ಕೇಸ್ ದಾಖಲಾಗಿ ಬಳಿಕ ಆತನನ್ನು ಆ ಸಂಸ್ಥೆಯ ಕೆಲಸದಿಂದ ಕಿತ್ತು ಹಾಕಿದರು. ಬಳಿಕ ನಾನು ಸೇವ್ ಶಕ್ತಿ ಎನ್ನುವ ಎನ್‌ಜಿಓ ಆರಂಭಿಸಿದೆ. ಮಹಿಳೆಯರ ರಕ್ಷಣೆಗಾಗಿ ಆ ಎನ್‌ಜಿಓ ಇದೆ ಎಂದು ವರಲಕ್ಷ್ಮಿ ಶರತ್‌ಕುಮಾರ್ ವಿವರಿಸಿದ್ದಾರೆ. ಬಹಳ ಸಿನಿಮಾಗಳಿಂದ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಆಕೆ ಬಹಳ ವೃತ್ತಿಪರಳು. ಇಂತಹ ವಿಚಾರಗಳಿಗೆ ಒಪ್ಪಲ್ಲ ಎಂದು ಅವಕಾಶ ಕೊಡಲಿಲ್ಲ. ಆ ರೀತಿ ಮಾತನಾಡಿರುವ ವಾಯ್ಸ್ ನೋಟ್ ನಾನೇ ಕೇಳಿದ್ದೇನೆ ಎಂದು ಹೇಳಿದ್ದಾರೆ.

ಕಠಿಣ ಪರಿಶ್ರಮ ಇದ್ದರೆ ಅವಕಾಶಗಳು ಸಿಗುತ್ತವೆ. ಚಿತ್ರರಂಗದಲ್ಲಿ ಕೂಡ ಅದು ಸಾಧ್ಯವಿದೆ ಎಂದು ವರಲಕ್ಷ್ಮಿ ಶರತ್‌ಕುಮಾರ್ ಹೇಳಿದ್ದಾರೆ. ಇನ್ನು ನನ್ನ ಬಗ್ಗೆ ಯಾವುದೇ ಗಾಸಿಪ್‌ಗಳು ಇಲ್ಲ. ವಿಶಾಲ್ ಜೊತೆಗಿನ ಗಾಸಿಪ್ ಬಹಳ ಹಳೆಯದಾಯಿತು. ಅದರಲ್ಲಿ ಗಾಸಿಪ್ ಏನು ಇಲ್ಲ, ನಾವಿಬ್ಬರು ಜೊತೆಗಿದ್ದೆವು. ಬಳಿಕ ದೂರಾದೆವು. ಆತ ತನ್ನ ಜೀವನ ಸಾಗಿಸುತ್ತಿದ್ದಾನೆ, ನಾನು ನನ್ನ ಜೀವನದಲ್ಲಿ ಬ್ಯುಸಿಯಾಗಿದ್ದೇನೆ ಎಂದಿದ್ದಾರೆ.
'ಶಬರಿ' ಎನ್ನುವ ತೆಲುಗು ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಈ ಚಿತ್ರದಲ್ಲಿ ತಾಯಿ ತನ್ನ ಮಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವ ಕಥೆಯಿದೆ. ಸೈಜಲಾಜಿಕಲ್ ಥ್ರಿಲ್ಲರ್ ಅಂಶಗಳಿವೆ. ನಾನು ಚಿಕ್ಕಂದಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದೆ. ಅದು ನನ್ನ ಜೀವನದಲ್ಲಿ ಮರೆಯಲಾಗದ ಗಾಯವಾಗಿ ಉಳಿದುಬಿಟ್ಟಿದೆ ಎಂದು ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











