ಅಂದು ದರ್ಶನ್.. ಈಗ ರೋಬೊ ಶಂಕರ್: ಹೋಂ ಟೂರ್ ತಂದಿಟ್ಟ ಎಡವಟ್ಟು, ಪ್ರಕರಣ ದಾಖಲು
ಕಳೆದ ತಿಂಗಳು ನಟ ದರ್ಶನ್ ಅವರ ಮೈಸೂರಿನ ಫಾರ್ಮ್‌ಹೌಸ್ ಮೇಲೆ ಮೈಸೂರು ಅರಣ್ಯ ಸಂಚಾರದ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಅನುಮತಿ ಇಲ್ಲದೇ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಸಾಕಿದ್ದ ಪಕ್ಷಿಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದರು. ನಟ ದರ್ಶನ್ ಮಾಡಿದ್ದ ಫಾರ್ಮ್‌ಹೌಸ್ ಟೂರ್ ವಿಡಿಯೋ ಇದಕ್ಕೆಲ್ಲಾ ಕಾರಣವಾಗಿತ್ತು. ಇದೇ ರೀತಿಯ ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ.
ಡಬ್ಲ್ಯುಪಿಎನ ಶೆಡ್ಯೂಲ್ 2ರ ಅಡಿಯಲ್ಲಿ ಬರುವ 4 ಬಾರ್ ಹೆಡೆಡ್ ಬಾತುಗಳನ್ನು ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ನಂತರ ನ್ಯಾಯಾಲಯದ ಅನುಮತಿ ಪಡೆದು ಅರಣ್ಯಾಧಿಕಾರಿಗಳು ಮೈಸೂರು ಸಮೀಪದ ಕೆರೆಗಳಲ್ಲಿ ಪಕ್ಷಿಗಳನ್ನು ಬಿಟ್ಟಿದ್ದರು. ಅಪರೂಪದ ಪಕ್ಷಿಗಳನ್ನು ಸಾಕಿದ್ದಕ್ಕಾಗಿ ನಟ ದರ್ಶನ್, ಪತ್ನಿ ವಿಜಯ ಲಕ್ಷ್ಮಿ ಹಾಗೂ ಫಾರ್ಮ್‌ಹೌಸ್ ವ್ಯವಸ್ಥಾಪಕ ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತಮಿಳು ಹಾಸ್ಯ ನಟ ರೋಬೊ ಶಂಕರ್ ಕೂಡ ಕೆಲ ದಿನಗಳ ಹಿಂದೆ ತಮ್ಮ ಮನೆಯ ಹೋಮ್ ಟೂರ್ ವಿಡಿಯೋ ಮಾಡಿದ್ದರು. ಈ ವೇಳೆ ತಾವು ಸಾಕಿದ್ದ ಅಲೆಕ್ಸಾಂಡ್ರೈನ್ ಗಿಳಿಗಳನ್ನು ರೋಬೊ ಶಂಕರ್ ತೋರಿಸಿದ್ದರು. ಆ ಹೋಂ ಟೂರ್ ವಿಡಿಯೋ ಈಗ ನಟನಿಗೆ ಸಂಕಷ್ಟ ತಂದಿಟ್ಟಿದೆ.

ರೋಬೊ ಶಂಕರ್‌ಗೆ 2.5 ಲಕ್ಷ ದಂಡ
ತಮಿಳುನಾಡು ವನ್ಯ ಜೀವಿ ಸಂರಕ್ಷಣಾ ಇಲಾಖೆಯ ಅಧಿಕಾರಿಯ ಮಾಹಿತಿ ಪ್ರಕಾರ, ಈ ಗಿಳಿಯನ್ನು ಸಾಕಬಾರದು ಎನ್ನುವುದು ನಟ ರೋಬೊ ಶಂಕರ್‌ಗೆ ಗೊತ್ತಿರಲಿಲ್ಲ. ಆದರೆ ಇಲ್ಲಿ ಅನುಮತಿಯ ಪ್ರಶ್ನೆ ಬರುವುದಿಲ್ಲ. ಈ ರೀತಿ ಪಕ್ಷಿಗಳನ್ನು ಮನೆಯಲ್ಲಿ ಸಾಕುವುದು ತಪ್ಪು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪಕ್ಷಿಗಳನ್ನು ರಕ್ಷಿಸಲಾಗಿದೆ ಎಂದಿದ್ದಾರೆ. ಅಂದಹಾಗೆ ಈ ಅಪರೂಪದ ಗಿಳಿಗಳನ್ನು ಸಾಕಿದ್ದಕ್ಕಾಗಿ ನಟ ರೋಬೊ ಶಂಕರ್‌ಗೆ 2.5 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸ್ನೇಹಿತರು ಕೊಟ್ಟ ಗಿಳಿಗಳು
ರೋಬೋ ಶಂಕರ್ ಹೋಂ ಟೂರ್ ವಿಡಿಯೋ ಬಂದು ಬಹಳ ದಿನಗಳಾಗಿತ್ತು. ಅವರ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಈ ಗಿಳಿಗಳನ್ನು ಸಾಕಿದ್ದಾರೆ. ಆದರೆ ಪ್ರಾಣಿ ಪ್ರೇಮಿಯೊಬ್ಬರು ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿದೇಶಕ್ಕೆ ಫ್ಯಾಮಿಲಿ ಸಮೇತ ಪ್ರವಾಸ ಹೋಗಿದ್ದ ಶಂಕರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಪಕ್ಷಿಗಳನ್ನು ನಾನು ಹಣ ಕೊಟ್ಟು ಕೊಂಡುಕೊಂಡಿಲ್ಲ. ಬದಲಿಗೆ ಸ್ನೇಹಿತರೊಬ್ಬರು ವಿದೇಶಕ್ಕೆ ಹೋಗುವಾಗ ಈ ಪಕ್ಷಿಗಳನ್ನು ಕೊಟ್ಟು ಹೋಗಿದ್ದರು. ಸಾಕುತ್ತಿದ್ದೆವು ಎಂದಿದ್ದಾರೆ.

ಜಾಗೃತಿ ಮೂಡಿಸುತ್ತಾರಂತೆ ಶಂಕರ್
ಯಾವ ಪ್ರಾಣಿ ಪಕ್ಷಿಗಳನ್ನು ಸಾಕಬೇಕು, ಯಾವುದನ್ನು ಅನುಮತಿ ಪಡೆದು ಸಾಕಬೇಕು. ಯಾವುದನ್ನು ಸಾಕುವುದು ನಿಷಿದ್ಧ ಎನ್ನುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಪ್ರಾಣಿ ಪಕ್ಷಿಗಳನ್ನು ನೋಡಿ ಖುಷಿಯಿಂದ ಸಾಕಿಬಿಡುತ್ತಾರೆ. ಕೆಲವೊಮ್ಮೆ ಈ ರೀತಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇದೇ ವಿಚಾರವಾಗಿ ತಮಿಳುನಾಡು ವನ್ಯ ಜೀವಿ ಸಂರಕ್ಷಣಾ ಇಲಾಖೆಯ ಅಧಿಕಾರಿಗಳನ ಜೊತೆ ಮಾತನಾಡಿರುವ ನಟ ರೋಬೊ ಶಂಕರ್, ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. 1997ರಲ್ಲಿ ಚಿತ್ರರಂಗಕ್ಕೆ ಬಂದ ಶಂಕರ್ ಮಾರಿ, ಪುಲಿ, ವಿಶ್ವಾಸಂ, ಇರುಂಬು ತಿರೈ, ಕೋಬ್ರಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಿಮಿಕ್ರಿ ಆರ್ಟಿಸ್ಟ್ ಆಗಿ ಸ್ಯಾಂಡಪ್ ಕಾಮೆಡಿಯನ್ ಆಗಿ

ದರ್ಶನ್‌ಗೆ ಈ ಬಗ್ಗೆ ಮಾಹಿತಿ ಇರಲಿಲ್ಲ?
ಅಂದಹಾಗೆ ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಆಸ್ಟ್ರಿಚ್, ಎಮು, ಕಪ್ಪು ಹಂಸ ಸೇರಿದಂತೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಕೆಲ ಪಕ್ಷಿಗಳನ್ನು ಅನುಮಪತಿ ಪಡೆದು ಸಾಕಲು ಅನುಮತಿ ಇದೆ. ಆದರೆ ಬಾರ್ ಹೆಡೆಡ್ ಹೆಬ್ಬಾತುಗಳನ್ನು ಸಾಕುವಂತಿಲ್ಲ. ಸಂದರ್ಶನದ ವೇಳೆ ದರ್ಶನ್ ಈ ಬಾತುಕೋಳಿಗಳ ಬಗ್ಗೆಯೂ ಮಾತನಾಡಿದ್ದರು. ಆ ವಿಡಿಯೋದಿಂದಲೇ ಮೈಸೂರು ಅರಣ್ಯ ಸಂಚಾರದ ದಳದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಡಬ್ಲ್ಯುಪಿಎಯ ಶೆಡ್ಯೂಲ್ 2ರಲ್ಲಿ ಬಾರ್ ಹೆಡ್ ಬಾತುಗಳನ್ನು ಸೇರಿಸಿರುವುದು ದರ್ಶನ್ ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿತ್ತು.


Click it and Unblock the Notifications











