ಮರುಮಾತನಾಡದೇ 5 ಕೋಟಿ ಹಣ ನೀಡಿ, ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ ಲೇಡಿ ಸೂಪರ್ ಸ್ಟಾರ್...!
ಬಹುಭಾಷಾ ತಾರೆ- ಲೇಡಿ ಸೂಪರ್ ಸ್ಟಾರ್ ನಯನತಾರಗೆ ಬದುಕಿನಲ್ಲಿ ಒಮ್ಮೆಯಾದರೂ ಆಕ್ಷನ್-ಕಟ್ ಹೇಳಬೇಕೆಂಬ ಆಸೆ ಅನೇಕ ನಿರ್ದೇಶಕರಲ್ಲಿದೆ. ಕೇವಲ ಕಾಲಿವುಡ್‌ನಲ್ಲಿ ಅಷ್ಟೇ ಅಲ್ಲ ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿ ಸ್ಯಾಂಡಲ್ವುಡ್‌ನಲ್ಲಿಯೂ ಇಂತಹ ಭಾವನೆ ಹೊಂದಿರುವ ಅನೇಕ ನಿರ್ದೇಶಕರಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಈಗೀಗ ನಯನತಾರಾ ವಿರುದ್ಧ ತಿರುಗಿ ಬೀಳುವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಚಂದ್ರಮುಖಿ ಚಿತ್ರದ ನಿರ್ಮಾಪಕರು ಸದ್ಯದ ಉದಾಹರಣೆ.
ಹೌದು, ತಮ್ಮ ಒಪ್ಪಿಗೆ ಇಲ್ಲದೇ ತಮ್ಮ ನಾನುಂ ರೌಡಿ ಧನ್ ಚಿತ್ರದ ತುಣುಕನ್ನು ತಮ್ಮ ಸಾಕ್ಷ್ಯ ಚಿತ್ರ ಬಿಯಾಂಡ್ ದಿ ಫೇರಿ ಟೇಲ್‌ನಲ್ಲಿ ಉಪಯೋಗಿಸಿದ್ದಕ್ಕೆ ನಯನತಾರ ವಿರುದ್ಧ ಧನುಷ್ ಕಾನೂನು ಸಮರ ಸಾರಿದ ಬೆನ್ನಲ್ಲೇ ಈಗ ಚಂದ್ರಮುಖಿ ನಿರ್ಮಾಪಕರು ನಯನತಾರಾ ವಿರುದ್ಧ ಸಿಡಿದಿದ್ದಾರೆ. ಲೀಗಲ್ ನೋಟಿಸ್ ಕಳಿಸಿದ್ದಾರೆ. ತಮ್ಮ ಅಪ್ಪಣೆ ಇಲ್ಲದೇ ನಯನತಾರ ಮತ್ತು ನೆಟ್‌ಫ್ಲಿಕ್ಸ್ ಸಂಸ್ಥೆ ಚಂದ್ರಮುಖಿ ಚಿತ್ರದ ಕ್ಲಿಪಿಂಗ್‌ನ ಉಪಯೋಗಿಸಿದ್ಧಾರೆ ಎಂದು ಚಿತ್ರದ ನಿರ್ಮಾಪಕರಾದ ರಾಮ್‌ಕುಮಾರ್ ಗಣೇಶನ್ ಮತ್ತು ಪ್ರಭು ಕಾನೂನು ಸಮರ ಸಾರಿದ್ದಾರೆ. ಮಾಡಿರುವ ಈ ತಪ್ಪಿಗೆ ಒಂದಲ್ಲ, ಎರಡಲ್ಲ, ಐದು ಕೋಟಿ ಹಣವನ್ನು ನಯನತಾರ ನಮಗೆ ನೀಡಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ. ನಿರ್ಮಾಪಕರ ಈ ಬೇಡಿಕೆಗೆ ನಯನತಾರ ಇನ್ನು ಉತ್ತರವನ್ನು ನೀಡಬೇಕಿದೆ.

ಅಂದ್ಹಾಗೇ 2005ರಲ್ಲಿ ತೆರೆಗೆ ಬಂದಿದ್ದ ಚಂದ್ರಮುಖಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಜೊತೆ ನಯನತಾರ ತೆರೆ ಹಂಚಿಕೊಂಡಿದ್ದರು. ಜ್ಯೋತಿಕಾ ನಾಗವಲ್ಲಿ ಪಾತ್ರವನ್ನು ನಿರ್ವಹಿಸಿದ್ದರು. ಇನ್ನೂ ನಯನತಾರ ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ದರು. ನಾಲ್ಕು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ನಯನತಾರಗೆ ಸಿಗಬೇಕಿದ್ದ ಹೆಸರು, ಜನಪ್ರಿಯತೆ ಸಿಕ್ಕಿರಲಿಲ್ಲ. ಚಂದ್ರಮುಖಿ ಚಿತ್ರದಲ್ಲಿ ದುರ್ಗಾ ಪಾತ್ರಕ್ಕೆ ನಯನತಾರ ಜೀವ ತುಂಬಿದ್ದೇ ತಡ ಅನೇಕರ ಕಣ್ಣು ನಯನತಾರ ಮೇಲೆ ಬಿದ್ದಿತ್ತು.
ಅಲ್ಲಿಂದಾಚೆ ಹಿಂದೆ ತಿರುಗಿ ನೋಡದ ನಯನತಾರ ಒಂದಾದ ಮೇಲೊಂದು ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದರು. ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಕೂಡ ಅಲಂಕರಿಸಿದರು. ಇಂತಹ ಚಿತ್ರದ ತುಣುಕನ್ನು ಬಳಸಿಕೊಳ್ಳುವ ಮೊದಲು ತಮಗೆ ಹೆಸರು ಕೀರ್ತಿ ಬರಲು ಕಾರಣವಾದ ನಿರ್ಮಾಪಕರನ್ನು ಸೌಜನ್ಯಕ್ಕಾದರೂ ನಯನತಾರ ಕೇಳಬೇಕಿತ್ತು. ನೆನೆಯಬೇಕಿತ್ತು. ಆದರೆ ನಯನತಾರ ನಿರ್ಮಾಪಕರ ಪರವಾನಗಿಯನ್ನು ಪಡೆಯದೇ ಚಂದ್ರಮುಖಿ ದೃಶ್ಯಗಳನ್ನು ತಮ್ಮ ಡಾಕ್ಯೂಮೆಂಟರಿಯಲ್ಲಿ ಬಳಸಿಕೊಂಡಿದ್ದಾರೆ. ಚಂದ್ರಮುಖಿ ನಿರ್ಮಾಪಕರ ಅಸಮಾಧಾನ-ಅಸಹನೆ-ಆಕ್ರೋಶಕ್ಕೆ ಇದೇ ಪ್ರಮುಖ ಕಾರಣ.
ಇನ್ನುಳಿದಂತೆ ನಯನತಾರ ಮೇಲೆ ಕಾನೂನು ಕ್ರಮ ಜರುಗಿಸಿರುವ ಧನುಷ್ ಮೂರು ಸೆಕೆಂಡ್‌ನ ವಿಶ್ಯುವಲ್ ಬಳಿಸಿದ್ದಕ್ಕೆ ಹತ್ತು ಕೋಟಿಯ ಪರಿಹಾರವನ್ನು ನಯನತಾರ ಅವರಲ್ಲಿ ಕೇಳಿದ್ಧಾರೆ. ಇನ್ನು 'ನಾನುಂ ರೌಡಿ ಧನ್' ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು. ಈ ವೇಳೆ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಸುಮಾರು ಏಳು ವರ್ಷಗಳ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ವೈವಾಹಿಕ ಜೀವನದ ಅತ್ಯಮೂಲ್ಯ ಸಿನಿಮಾ ಆಗಿದ್ದರಿಂದ 'ನಾನುಂ ರೌಡಿ ಧನ್' ದೃಶ್ಯ ಬಳಸಲು ಧನುಷ್ ಬಳಿ ಅನುಮತಿ ಕೇಳಿದ್ದರು. ಆದರೆ, ಧನುಷ್ ಎರಡು ವರ್ಷವಾದರೂ ಅನುಮತಿ ನೀಡಲಿಲ್ಲ ಎಂದು ನಯನತಾರಾ ಆರೋಪ ಮಾಡಿದ್ದರು. ಸದ್ಯ ಚಂದ್ರಮುಖಿ ನಿರ್ಮಾಪಕರು ಕಳುಹಿಸಿರುವ ಲೀಗಲ್ ನೋಟಿಸ್‌ಗೆ ನಯನತಾರ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications