ತಂದೆ-ಮಗನ ಬಾಂಧವ್ಯದ ಕಥೆ; 'ಟೂರಿಸ್ಟ್ ಫ್ಯಾಮಿಲಿ' ನಿರ್ದೇಶಕನ ತಮಿಳು ಚಿತ್ರದಲ್ಲಿ ಶಿವಣ್ಣ?
'ಜೈಲರ್' ಚಿತ್ರದ ನರಸಿಂಹ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟನೆ ನೋಡಿ ಪರಭಾಷಿಕರು ದಂಗಾಗಿದ್ದರು. ಒಂದೆರಡು ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದ ಸೆಂಚುರಿ ಸ್ಟಾರ್ ಅಕ್ಷರಶಃ ಮ್ಯಾಜಿಕ್ ಮಾಡಿದ್ದರು. ಬಳಿಕ ತಮಿಳು, ತೆಲುಗಿನಿಂದ ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬರ್ತಿದೆ. ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ತಿದ್ದಾರೆ.
ಈಗಾಗಲೇ ತೆಲುಗಿನ 'ಪೆದ್ದಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಜೂನ್ 4ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇನ್ನು ತೆಲುಗಿನ 'ಗುಮ್ಮಡಿ ನರಸಯ್ಯ' ಬಯೋಪಿಕ್ ಸಿನಿಮಾ ಚಿತ್ರೀಕರಣ ನಡೀತಿದೆ. 'ಜೈಲರ್- 2' ಚಿತ್ರದಲ್ಲಿ ಮತ್ತೆ ನರಸಿಂಹ ಆಗಿ ಅಬ್ಬರಿಸಿ ಬಂದಿದ್ದಾರೆ. ಇದೆಲ್ಲದರ ನಡುವೆ ಈಗ ಮತ್ತೊಂದು ತಮಿಳು ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಾರೆ ಎನ್ನಲಾಗ್ತಿದೆ.

'ಟೂರಿಸ್ಟ್ ಫ್ಯಾಮಿಲಿ' ಸಿನಿಮಾ ಮೂಲಕ ಯುವ ನಿರ್ದೇಶಕ ಅಬಿಶಾನ್ ಜೀವಿಂತ್ ಭರವಸೆ ಮೂಡಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸದ್ದು ಮಾಡಿತ್ತು. ಬಳಿಕ 'ವಿತ್ ಲವ್' ಎಂಬ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಈ ರೊಮ್ಯಾಂಟಿಕ್ ಸಿನಿಮಾ ಕೂಡ ಸಂಚಲನ ಸೃಷ್ಟಿಸಿತ್ತು. ಇದೀಗ ಮತ್ತೆ ಅಬಿಶಾನ್ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಒಂದು ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಜೊತೆಗೆ ತಾವೇ ನಟಿಸುವ ಪ್ರಯತ್ನದಲ್ಲಿದ್ದಾರೆ.
ಅಬಿಶಾನ್ ನಿರ್ದೇಶಿಸಿ ನಟಿಸಲಿರುವ ಹೊಸ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ತಂದೆ- ಮಗನ ಬಾಂಧವ್ಯದ ಕಥೆ ಇದಾಗಿದ್ದು ಸೆಂಚುರಿ ಸ್ಟಾರ್ ಮಗನ ಪಾತ್ರದಲ್ಲಿ ಅಬಿಶಾನ್ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಚೆನ್ನೈನಲ್ಲೇ ಹುಟ್ಟಿ ಅಲ್ಲೇ ಓದಿ ಬೆಳೆದವರು ಶಿವರಾಜ್‌ಕುಮಾರ್. ಹಾಗಾಗಿ ತಮಿಳುನಾಡು, ತಮಿಳು ಸಿನಿಮಾಗಳ ಬಗ್ಗೆ ಅವರಿಗೆ ಅಭಿಮಾನ ಇದೆ. 'ಜೈಲರ್' ಬಳಿಕ ತಮಿಳಿನಿಂದ ಸಾಕಷ್ಟು ಅವಕಾಶಗಳು ಬರ್ತಿವೆ. ಒಳ್ಳೆ ಕಥೆ ಸಿಕ್ಕರೆ ಕಂಡಿತ ನಟಿಸ್ತೀನಿ ಎಂದು ಅವ್ರು ಹೇಳ್ತಾ ಬರ್ತಿದ್ದಾರೆ.
ಶಿವರಾಜ್‌ಕುಮಾರ್ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಿವೆ. ಹೊಸ ಪ್ರತಿಭೆಗಳನ್ನು ಸದಾ ಹುರಿದುಂಬಿಸುತ್ತಾರೆ. ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ತುಡಿತ ಅವರಲ್ಲಿದೆ. ವಯಸ್ಸು 60 ದಾಟಿದ್ರು ಯುವಕರನ್ನು ನಾಚಿಸುವಷ್ಟು ಎನರ್ಜಿ ಅವರಲ್ಲಿದೆ. ಕ್ಯಾನ್ಸರ್ ಚಿಕಿತ್ಸೆ ಬಳಿಕ ಬಹಳ ಬೇಗ ಚಿತ್ರೀಕರಣಕ್ಕೆ ಮರಳಿದ್ದರು. ಮುಂದೆ ಒಂದೊಂದಾಗಿ ಶಿವಣ್ಣ ನಟನೆಯ ಸಿನಿಮಾಗಳು ಬಿಡುಗಡೆಯಾಗಲಿದೆ.
'45' ಸಿನಿಮಾ ಮೂಲಕ ಕೊನೆಯದಾಗಿ ಸೆಂಚುರಿ ಸ್ಟಾರ್ ಪ್ರೇಕ್ಷಕರ ಮುಂದೆ ಬಂದಿದ್ದರು. 'ಡ್ಯಾಡ್' ಎಂಬ ಸಿನಿಮಾ ಮುಗಿಸಿದ್ದಾರೆ. '666 ಆಪರೇಷ್ ಡ್ರೀಮ್ ಥಿಯೇಟರ್', 'ಎ ಫಾರ್ ಆನಂದ್' ಎಂಬ ಸಿನಿಮಾಗಳು ಅವರ ಕೈಯಲ್ಲಿದೆ. ಪವನ್ ಒಡೆಯರ್ ನಿರ್ದೇಶನದ 'ಬೇಲ್' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಒಂದು ಸಿನಿಮಾ ಕೂಡ ಘೋಷಣೆಯಾಗಿದೆ.


Click it and Unblock the Notifications