ಲಾಭ ಹಂಚಿಕೊಂಡ 'ಜೈಲರ್' ನಿರ್ಮಾಪಕ: ರಜನಿಕಾಂತ್ ಬಳಿಕ ನಿರ್ದೇಶಕ ನೆಲ್ಸನ್‌ಗೂ ಐಷಾರಾಮಿ ಕಾರು, ಹಣ!
ಆಗಸ್ಟ್ 10 ರಂದು ಬಿಡುಗಡೆಯಾದ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರವು ಭಾರೀ ಹಿಟ್ ಆಗುತ್ತಿದೆ. ಒಟಿಟಿಗೆ ಬರಲು ಸಿದ್ಧವಾಗಿದ್ದರೂ ಕೂಡ ಇನ್ನೂ ಸಿನಿಮಾ ಮಂದಿರಗಳಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ. ನಟ ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 600 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದ್ದು, ಇನ್ನು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಕೋಟ್ಯಾಂತರ ರೂಪಾಯಿ ಲಾಭ ಮಾಡುತ್ತಿರುವ ಕಾರಣ ಸನ್ ಪಿಕ್ಚರ್ಸ್ ಲಾಭವನ್ನು ಹಂಚಿಕೊಳ್ಳುತ್ತಿದೆ. ಜೈಲರ್ ನಿರ್ಮಾಪಕ ಕಲಾನಿಧಿ ಮಾರನ್ ನಟ ರಜನಿಕಾಂತ್ ಅವರಿಗೆ ಲಾಭದಿಂದ ಒಂದು ಪಾಲನ್ನು ಚೆಕ್ ಮೂಲಕ ಮತ್ತು ಹೊಚ್ಚ ಹೊಸ BMW X7 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿತ್ತು.

ನಿರ್ದೇಶಕ ನೆಲ್ಸನ್‌ಗೂ ಸಿಕ್ತು ಭರ್ಜರಿ ಗಿಫ್ಟ್!
ನಿರ್ಮಾಪಕ ಕಲಾನಿಧಿ ಮಾರನ್ ಕೇವಲ ನಟ ರಜನಿಕಾಂತ್‌ಗೆ ಮಾತ್ರವಲ್ಲದೇ 'ಜೈಲರ್' ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರಿಗೂ ಭರ್ಜರಿ ಉಡುಗೊರೆ ನೀಡಿದ್ದಾರೆ. ನೆಲ್ಸನ್ ಅವರಿಗೆ ಸನ್ ಪಿಕ್ಚರ್ಸ್ ಮುಖ್ಯಸ್ಥ ಕಲಾನಿಧಿ ಮಾರನ್ ಚೆಕ್ ನೀಡಿದ್ದಾರೆ. ಎಷ್ಟು ಮೊತ್ತದ ಚೆಕ್ ನೀಡಲಾಗಿದೆ ಎಂಬುದನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಆದರೆ, ಸುಮಾರು 10 ಕೋಟಿ ನೀಡಿದ್ದಾರೆ ಎಂಬ ವರದಿಗಳಿವೆ.
ಚೆಕ್ ನೀಡುತ್ತಿರುವ ಫೋಟೋ ಹಂಚಿಕೊಂಡಿರುವ ಸನ್ ಪಿಕ್ಚರ್ಸ್ ಟ್ವಿಟರ್ ಹ್ಯಾಂಡಲ್, " ಕಲಾನಿಧಿ ಮಾರನ್ ಅವರು ನೆಲ್ಸನ್ ದಿಲೀಪ್ ಕುಮಾರ್ ಅವರನ್ನು ಅಭಿನಂದಿಸಿ, ಚೆಕ್ ಹಸ್ತಾಂತರಿಸಿದ್ದಾರೆ. ಮೆಗಾ ಬ್ಲಾಕ್‌ಬಸ್ಟರ್ ಜೈಲರ್ ಯಶಸ್ಸಿನ ಸಂಭ್ರಮಾಚರಣೆ ಆಚರಿಸಿದ್ದಾರೆ" ಎಂದಿದೆ.
ಇದಲ್ಲದೆ ನೆಲ್ಸನ್ ಅವರಿಗೆ ಹಣದ ಜೊತೆಗೆ ಐಷಾರಾಮಿ ಕಾರನ್ನೂ ಉಡುಗೊರೆಯಾಗಿ ನೀಡಿದ್ದಾರೆ. ನಟ ರಜನಿಕಾಂತ್ ಅವರಿಗೆ ನೀಡಿದಂತೆ ಬಿಎಂಡಬ್ಲು, ಪೋರ್ಶೆ ಸೇರಿದಂತೆ ಹಲವು ಕಾರುಗಳಲ್ಲಿ ಒಂದನ್ನು ತೆಗೆದುಕೊಳ್ಳುವಂತೆ ಅವಕಾಶ ನೀಡಲಾಗಿತ್ತು. ಕಪ್ಪು ಬಣ್ಣದ ದುಬಾರಿ ಪೋರ್ಶೆ ಕಾರನ್ನು ನೆಲ್ಸನ್ ಆರಿಸಿಕೊಂಡಿದ್ದಾರೆ. ಈ ಕಾರನ್ನು ಸಕತ್ ಆಗಿ ತೋರಿಸಿರುವ ಮತ್ತು ಕೀಯನ್ನು ಕಲಾನಿಧಿ ಮಾರನ್ ನೆಲ್ಸನ್ ಅವರಿಗೆ ನೀಡುತ್ತಿರುವ ವಿಡಿಯೋವನ್ನು ಸನ್ ಪಿಕ್ಚರ್ಸ್ ಹಂಚಿಕೊಂಡಿದೆ.
ಆಗಸ್ಟ್ 31 ರಂದು, ಸನ್ ಪಿಕ್ಚರ್ಸ್ ಸಿಇಒ ಕಲಾನಿಧಿ ಮಾರನ್ ಅವರು ಚೆನ್ನೈನ ಪೋಯಸ್ ಗಾರ್ಡನ್ ಮನೆಯಲ್ಲಿ ತಲೈವಾ ಅವರನ್ನು ಭೇಟಿಯಾಗಿದ್ದರು. 'ಜೈಲರ್' ನ ಅದ್ಭುತ ಯಶಸ್ಸಿನ ಕಾರಣ ಅವರಿಗೆ ಭಾರೀ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು. ಜೊತೆಗೆ ಐಷಾರಾಮಿ BMW X7 ಅನ್ನು ಉಡುಗೊರೆಯಾಗಿ ನೀಡಿದ್ದರು. ಕಲಾನಿತಿ ಮಾರನ್ ಅವರು ಹೊಚ್ಚಹೊಸ ಕಾರಿನ ಕೀಯನ್ನು ರಜನಿಕಾಂತ್‌ಗೆ ಹಸ್ತಾಂತರಿಸುವ ವೀಡಿಯೊವನ್ನು ಸನ್ ಪಿಕ್ಚರ್ಸ್ ಹಂಚಿಕೊಂಡಿದೆ.

'ಜೈಲರ್' ಬಗ್ಗೆ
ರಜನಿಕಾಂತ್ ಇತ್ತೀಚೆಗೆ ತಮ್ಮ 'ಜೈಲರ್' ಚಿತ್ರದ ಯಶಸ್ಸನ್ನು ತಮ್ಮ ತಂಡದೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಇದೊಂದು ಕಮರ್ಷಿಯಲ್ ಆಕ್ಷನ್ ಎಂಟರ್‌ಟೈನರ್ ಆಗಿದ್ದು ಆಗಸ್ಟ್ 10 ರಂದು ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು 22 ದಿನಗಳಲ್ಲಿ ಭಾರತದಲ್ಲಿ 328 ಕೋಟಿಗೂ ಹೆಚ್ಚು ಗಳಿಸಿದೆ. ವಿಶ್ವದಾದ್ಯಂತ 650 ಕೋಟಿ ರೂಪಾಯಿ ಗಳಿಸುವತ್ತ ಸಾಗುತ್ತಿದೆ.
ಚಿತ್ರದಲ್ಲಿ ವಿನಾಯಕನ್, ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣವಾಗುತ್ತಿರುವವರಿಗೆ ಉಡುಗೊರೆ ನೀಡುತ್ತಿರುವ ನಿರ್ಮಾಪಕರು ಈ ನಟರಿಗೂ ಗಿಫ್ಟ್ ನೀಡುತ್ತಾರಾ ಎಂಬ ಕುತೂಹಲದಲ್ಲಿದ್ದಾರೆ ಅಭಿಮಾನಿಗಳು.


Click it and Unblock the Notifications











