ಸನಾತನ ನಿರ್ಮೂಲನೆ ಅಂದ್ರೆ ಯಾರೂ ದೇವಸ್ಥಾನಕ್ಕೆ ಹೋಗಬಾರ್ದು ಅಂತ ಅಲ್ಲ; ಉದಯನಿಧಿ ಸ್ಟಾಲಿನ್ ಸ್ಪಷ್ಟನೆ
ಸನಾತನ ಧರ್ಮದ ಬಗ್ಗೆ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಸರ್ಕಾರ ರಚನೆ ಮಾಡಿದ್ದು ಡಿಎಂಕೆ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದೆ. ಸದನದಲ್ಲಿ ಮಾತನಾಡುತ್ತಾ ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.
ಉದಯನಿಧಿ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಹೇಳಿಕೆಯನ್ನು ಕೆಲವರು ಸಮರ್ಥಿಸಿಕೊಂಡರೆ ಬಹುತೇಕ ವಿರೋಧಿಸುತ್ತಿದ್ದಾರೆ. ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. 3 ವರ್ಷಗಳ ಹಿಂದೆ ಕೂಡ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿ ಅವರು ವಿವಾದ ಹುಟ್ಟು ಹಾಕಿದ್ದರು. ಉದಯನಿಧಿ ಹೇಳಿಕೆ ನೀಡುವಾಗ ಎದುರಲ್ಲೇ ಇದ್ದ ಸಿಎಂ ವಿಜಯ್ ಯಾಕೆ ಪ್ರತಿಕ್ರಿಯಿಸಲಿಲ್ಲ ಎನ್ನುವ ಚರ್ಚೆ ನಡೀತಿದೆ.

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಉದಯನಿಧಿ ಸ್ಟಾಲಿನ್ ಹೇಳಿಕೆ ಬೆನ್ನಲ್ಲೇ ಅವರ ತಾಯಿ ದುರ್ಗಾ ಸ್ಟಾಲಿನ್ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೊಗಳು ವೈರಲ್ ಆಗಿತ್ತು. ಮೊದಲು ನಿಮ್ಮ ಮನೆಯಲ್ಲಿ ಒಪ್ಪಿಸು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ತಿರುಗೇಟು ನೀಡಿದ್ದರು. ಇದೆಲ್ಲದರ ಬಳಿಕ ಸ್ವತಃ ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗೂ ಉತ್ತರಿಸಿದ್ದಾರೆ.
"ನಾನು ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡುವಾಗ, "ಜನರನ್ನು ವಿಭಜಿಸುವ ಪದ್ಧತಿ(ಸನಾತನ)ಯನ್ನು ನಿರ್ಮೂಲನೆ ಮಾಡಬೇಕು" ಎಂದು ಹೇಳಿದ್ದೆ. ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ. ನಾನು ಇದಕ್ಕೆಲ್ಲಾ ಹೆದರಲ್ಲ. ಪ್ರತಿರೋಧದ ನಡುವೆ ದ್ರಾವಿಡ ಚಳುವಳಿ ಬೆಳೆದಿದೆ. ನಾನು ಒಂದು ಸಣ್ಣ ವಿವರಣೆಯನ್ನು ನೀಡಲು ಬಯಸುತ್ತೇನೆ. ಸನಾತನವನ್ನು ನಿರ್ಮೂಲನೆ ಮಾಡಬೇಕು ಅಂದ್ರೆ ಯಾರೂ ದೇವಸ್ಥಾನಕ್ಕೆ ಹೋಗಬಾರದು ಅಂತ ಅಲ್ಲ" ಎಂದಿದ್ದಾರೆ.
ದೇವಾಲಯದಲ್ಲಿ ಮಾತ್ರವಲ್ಲ, ಸಮಾಜದಲ್ಲಿಯೂ ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು ಎಂದರ್ಥ.ನಾನು ಮೇಲ್ಜಾತಿ ಮತ್ತು ಕೆಳಜಾತಿಯ ವಿಭಜನೆಯನ್ನು ತೊಡೆದುಹಾಕಲು ಬಯಸುತ್ತೇನೆ ಎಂದು ಹೇಳಿದ್ದೆ. ಪೆರಿಯಾರ್, ಅಂಬೇಡ್ಕರ್, ಅಣ್, ಕರುಣಾನಿಧಿ ಇದೇ ತತ್ವವನ್ನು ಮಾತನಾಡಿದ್ದರು. ನಾವು ಯಾರ ದೇವರ ನಂಬಿಕೆಯನ್ನು ವಿರೋಧಿಸುವುದಿಲ್ಲ. ಆದರೆ ಅಸಮಾನತೆ ಮತ್ತು ದಬ್ಬಾಳಿಕೆಯನ್ನು ಬಲವಾಗಿ ವಿರೋಧಿಸೋಣ. 'ಎಲ್ಲಾ ಜೀವಗಳ ಹಿತದೃಷ್ಟಿಯಿಂದ' ಎಂದು ವಳ್ಳುವರ್ ಹೇಳಿದ್ದು ನಮ್ಮ ಮಾರ್ಗ" ಎಂದು ಉದಯನಿಧಿ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಉದಯನಿಧಿ ಸ್ಟಾಲಿನ್ ಮಾಧ್ಯಮಗಳ ಜೊತೆ ಮಾತನಾಡಿ "ನಾನು ಹಿಂದೂ ಧರ್ಮ ಮಾತ್ರ ಅಂತ ಹೇಳಿಲ್ಲ, ಎಲ್ಲಾ ಧರ್ಮಗಳಲ್ಲಿ ಜಾತಿಯ ಹೆಸರಿನಲ್ಲಿ ವಿಭಜಿಸಿದರೆ, ಮೇಲು- ಕೀಳು ಎಂದು ನೋಡಿದರೆ ಅದನ್ನು ನಿರ್ಮೂಲನೆ ಮಾಡಬೇಕು ಅಂತ ಹೇಳಿದ್ದೀನಿ" ಎಂದು ವಿವರಣೆ ನೀಡಿದ್ದಾರೆ.
ಸನಾತನ ಧರ್ಮದ ಬಗ್ಗೆ ಟಿವಿಕೆ ಶಾಸಕ ಹಾಗೂ ತಮಿಳುನಾಡು ಮುಸ್ಲಿಂ ಲೀಗ್‌ನ ಸ್ಥಾಪಕ ಅಧ್ಯಕ್ಷ ಮಧರ್ ಬದ್ರುದ್ದೀನ್ (ವಿಎಂಎಸ್ ಮುಸ್ತಫಾ) ಹೇಳಿಕೆ ಕೂಡ ವಿದಾದದ ಕಿಡಿ ಹಚ್ಚಿದೆ. "ನಾವು ಪೆರಿಯಾರ್, ಅಂಬೇಡ್ಕರ್ ಅವರನ್ನು ಅನುಸರಿಸುತ್ತೀವಿ, ನಾವು ಕೂಡ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಬಂದಿದ್ದೇವೆ" ಎಂದಿದ್ದಾರೆ. ಸದ್ಯ ಇಂತಹ ಹೇಳಿಕೆಗಳು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಟಿವಿಕೆ ಶಾಸಕ ವಿಎಂಎಸ್ ಮುಸ್ತಫಾ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಉದಯನಿಧಿ ಸ್ಟಾಲಿನ್ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಬಳಿಕ ತಾತ, ಅಪ್ಪನ ಹಾದಿಯಲ್ಲಿ ರಾಜಕೀಯರಂಗ ಪ್ರವೇಶಿಸಿದರು. ತಮಿಳುನಾಡು ಹಿಂದಿನ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿ ಬಳಿಕ ಉಪಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ವಿರೋಧ ಪಕ್ಷದ ಸ್ಥಾನ ವಹಿಸಿಕೊಳ್ಳುತ್ತಿದ್ದಂತೆ ಸದನದಲ್ಲಿ ಮಾತನಾಡಿ ಟಿವಿಕೆ ಪಕ್ಷಕ್ಕೆ ಕೌಂಟರ್ ಕೊಟ್ಟಿದ್ದರು. ನಾವೇ ನಿಮಗಿಂತ ಸೀನಿಯರ್, ನಮ್ಮ ಸಲಹೆ ಸೂಚನೆ ಪಡೆದುಕೊಳ್ಳಿ ಎಂದಿದ್ದರು.


Click it and Unblock the Notifications