Aishwarya Rajinikanth: ರಜನೀಕಾಂತ್ ಮಗಳ ಕೊರಳಲ್ಲಿ ಶಿಲುಬೆ! ಧರ್ಮ ಬದಲಿಸಿದರೇ?
ರಜನೀಕಾಂತ್ ಮಗಳು ಐಶ್ವರ್ಯಾ ರಜನೀಕಾಂತ್ ಇತ್ತೀಚೆಗೆ ಬಹುವಾಗಿ ಸುದ್ದಿಯಲ್ಲಿದ್ದಾರೆ ಅದಕ್ಕೆ ಕಾರಣ ನಟ ಧನುಶ್ ಜೊತೆಗಿನ ವಿಚ್ಛೇಧನ.
ನಟ ಧನುಶ್ ಹಾಗೂ ರಜನೀಕಾಂತ್ ಪುತ್ರಿ ಐಶ್ವರ್ಯಾ ತಮ್ಮ ಬಹು ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿ ದೂರಾಗಿದ್ದಾರೆ. ವಿಚ್ಛೇಧನದ ಬಳಿಕ ಧನುಶ್ ನಟನೆಯಲ್ಲಿ ಬ್ಯುಸಿಯಾಗಿದ್ದರೆ ಐಶ್ವರ್ಯಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ ಇದೀಗ ಐಶ್ವರ್ಯಾ ಮತ್ತೆ ಸುದ್ದಿಗೆ ಬಂದಿರುವುದು ಬೇರೆಯದ್ದೇ ಕಾರಣಕ್ಕೆ. ಎರಡು ದಿನದ ಹಿಂದಷ್ಟೆ ನಟಿ ಐಶ್ವರ್ಯಾ ಹೋಳಿ ಹಬ್ಬ ಆಚರಿಸಿದ್ದು ಅದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರಗಳಲ್ಲಿ ಐಶ್ವರ್ಯಾ ತಮ್ಮ ಕೊರಳಲ್ಲಿ ಶಿಲುಬೆ ಧರಿಸಿರುವುದನ್ನು ಅಭಿಮಾನಿಗಳು ಗಮನಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.

ಅಧ್ಯಾತ್ಮದ ಒಲವುಳ್ಳ ರಜನೀಕಾಂತ್
ನಟ ರಜನೀಕಾಂತ್ ಅಧ್ಯಾತ್ಮದ ಬಗ್ಗೆ ಬಹಳ ಒಲವಿಟ್ಟುಕೊಂಡಿರುವ ವ್ಯಕ್ತಿ. ಹಿಂದು ಸಾಧು-ಸಂತರ ಬಗ್ಗೆ ಅಪಾರ ಗೌರವ. ಆಗಾಗ್ಗೆ ಹಿಮಾಲಯಕ್ಕೆ ಹೋಗಿ ಬಾಬಾರ ದರ್ಶನ ಮಾಡಿಕೊಂಡು ಬರುತ್ತಾರೆ. ಈ ಸಮಯದಲ್ಲಿ ಮಗಳು ಐಶ್ವರ್ಯಾ ಸಹ ಆಗಾಗ್ಗೆ ತಂದೆಯ ಜೊತೆ ಹೋಗುವುದುಂಟು. ರಜನೀಕಾಂತ್ ಮಾತ್ರವಲ್ಲ ಐಶ್ವರ್ಯಾರ ಮಾಜಿ ಪತಿ ಧನುಶ್ ಸಹ ಧರ್ಮಾಸಕ್ತರು. ಸದಾ ತಮ್ಮ ಕೊರಳಲ್ಲಿ ರುದ್ರಾಕ್ಷ ಧಾರಣೆ ಮಾಡುತ್ತಾರೆ. ಶಬರಿಮಲೆ ಯಾತ್ರೆಯನ್ನು ತಪ್ಪಿಸುವುದಿಲ್ಲ. ಹೀಗಿದ್ದಾಗ ಐಶ್ವರ್ಯಾ ಏಕೆ ಕ್ರಿಶ್ಚಿಯನ್ ಧರ್ಮೀಯರು ಧರಿಸುವ ಶಿಲುಬೆ ಧರಿಸಿದ್ದಾರೆ ಎಂಬ ಅನುಮಾನ ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿದೆ.

ಫ್ಯಾಷನ್‌ಗಾಗಿ ಧರಿಸಿದ್ದಾರೆಯೇ?
ಇದಕ್ಕೆ ಹಲವರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಐಶ್ವರ್ಯಾ ರಜನೀಕಾಂತ್ ಸಹ ಹಿಂದು ಧರ್ಮದಲ್ಲಿ ಅಪಾರ ನಂಬಿಕೆ ಉಳ್ಳವರು ಆದರೆ ಫ್ಯಾಷನ್‌ಗಾಗಿಯಷ್ಟೆ ಶಿಲುಬೆ ಧರಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು 'ಫ್ರೀ ಥಿಂಕರ್' ಆಗಿರುವ ಐಶ್ವರ್ಯಾ, ಸರ್ವಧರ್ಮದಲ್ಲಿ ಆಸ್ತೆ ಉಳ್ಳವರಾಗಿದ್ದು ಅದೇ ಕಾರಣಕ್ಕಾಗಿ ಶಿಲುಬೆಯನ್ನು ಧರಿಸಿದ್ದಾರೆ ಎಂದು ವಾದಿಸಿದ್ದಾರೆ.

ಮಗಳಿಗಾಗಿ ಚರ್ಚ್‌ಗೆ ಭೇಟಿ ನೀಡಿದ್ದ ರಜನೀಕಾಂತ್
ಅಸಲಿ ಕತೆ ಬೇರೆಯೇ ಇದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಐಶ್ವರ್ಯಾಗೆ ಆರೋಗ್ಯ ಹದಗೆಟ್ಟಿತ್ತು. ಆಗ ನಟ ರಜನೀಕಾಂತ್ ಬೆಂಗಳೂರಿನ ವಿವೇಕನಗರದ ಇನ್‌ಫೆಂಟ್ರಿ ಚರ್ಚ್‌ಗೆ ಹರಕೆ ಮಾಡಿಕೊಂಡಿದ್ದರು. ಮಗಳಿಗೆ ಗುಣವಾದ ಬಳಿಕ ಅಕ್ಟೋಬರ್ 11 ರಂದು ಚರ್ಚ್‌ಗೆ ಭೇಟಿ ನೀಡಿದ ರಜನೀಕಾಂತ್ ಹರಕೆ ತೀರಿಸಿದ್ದರು. ಅದೇ ಸಮಯದಲ್ಲಿ ನೀಡಲಾಗಿದ್ದ ಶಿಲುಬೆಯನ್ನು ಐಶ್ವರ್ಯಾ ಧರಿಸಿದ್ದಾರೆ ಎನ್ನಲಾಗುತ್ತಿದೆ. ರಜನೀಕಾಂತ್ ಸಣ್ಣವರಿದ್ದಾಗಿನಿಂದಲೂ ಆ ಚರ್ಚ್‌ಗೆ ಭೇಟಿ ನೀಡುತ್ತಾರೆ. ಮನೆಯಲ್ಲಿ ಯಾರಿಗೇ ಆರೋಗ್ಯ ವ್ಯತ್ಯಯವಾದರೂ ಆ ಚರ್ಚ್‌ಗೆ ಹರಕೆ ಕಟ್ಟಿಕೊಳ್ಳುತ್ತಾರೆ.

ನಿರ್ದೇಶನದತ್ತ ಹೊರಳಿದ ಐಶ್ವರ್ಯಾ
ನಟ ಧನುಶ್ ರಿಂದ ವಿಚ್ಛೇಧನ ಪಡೆದ ಐಶ್ವರ್ಯಾ ನಿರ್ದೇಶನದ ಕಡೆ ಗಮನ ಹರಿಸಿದ್ದಾರೆ. ಧನುಷ್ ಅಭಿನಯದ '3' ಚಿತ್ರದ ಮೂಲಕವೇ ಐಶ್ವರ್ಯಾ ರಜನಿಕಾಂತ್ ನಿರ್ದೇಶಕಿಯ ಪಟ್ಟಕ್ಕೆ ಏರಿದ್ದು. ಬಳಿಕ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. 'ವಾಯಿ ರಾಜ ವಾಯಿ', 'ಸಿನಿಮಾ ವೀರನ್' ಎನ್ನುವ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ 2017ರ ಬಳಿಕ ಐಶ್ವರ್ಯಾ ಯಾವುದೇ ಸಿನಿಮಾ ಮಾಡಿಲ್ಲ. ಈಗ ಮತ್ತೆ ನಿರ್ದೇಶನದ ಕಡೆ ಗಮನ ಹರಿಸಿದ್ದು ಸಿಂಭು ನಟನೆಯ ಸಿನಿಮಾ ನಿರ್ದೇಶನ ಮಾಡುವ ಸಾಧ್ಯತೆ ಇದೆ.


Click it and Unblock the Notifications











