'ಥುನಿವು' ಸಿನಿಮಾ ನೋಡಲು ಅವಕಾಶ ಸಿಗದ್ದಕ್ಕೆ ಥಲಾ ಅಜಿತ್ ಅಭಿಮಾನಿ ಆತ್ಮಹತ್ಯೆ!
ಅಭಿಮಾನ ಇರಬೇಕು ಆದರೆ ಅಂಧಾಭಿಮಾನ ಇರಬಾರದು. ಕೆಲವೊಮ್ಮೆ ಅದೇ ಅಭಿಮಾನ ಪ್ರಾಣವನ್ನೇ ತೆಗೆದು ಬಿಡುತ್ತದೆ. ಅಭಿಮಾನಿಗಳು ಬ್ಯಾನರ್ ಕಟ್ಟಲು ಹೋಗಿ ಬಿದ್ದು ಸತ್ತಿರುವುದು, ವಿದ್ಯುತ್ ತಗುಲು ಕೊನೆಯುಸಿರೆಳೆದಿರುವುದು, ಹೀಗೆ ಸಾಕಷ್ಟು ದುರಂತಗಳು ನಡೆದಿವೆ. ಇತ್ತೀಚೆಗೆ ತಮಿಳು ನಟ ಅಜಿತ್ ನಟನೆಯ 'ಥುನಿವು' ಸಿನಿಮಾ ರಿಲೀಸ್ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬ ಚಲಿಸುತ್ತಿದ್ದ ಲಾರಿ ಮೇಲಿಂದ ಬಿದ್ದು ಅಸುನೀಗಿದ್ದ ಘಟನೆ ಕೂಡ ನಡೆದಿತ್ತು. ಇದೀಗ ಮತ್ತೊಬ್ಬ ಅಭಿಮಾನಿ ಇದೇ ರೀತಿ ಅಂಧಾಭಿಮಾನದಿಂದ ಆತ್ಮಹತ್ಯೆ ಮಾಡಿರುವುದಾಗಿ ವರದಿಯಾಗಿದೆ.

ತಮಿಳುನಾಡಿನ ತೂತುಕುಡಿಯ ಅಜಿತ್ ಅಭಿಮಾನಿ ವೀರಬಾಗು ಆತ್ಯಹತ್ಯೆ ಮಾಡಿಕೊಂಡು ದುರ್ದೈವಿ ಎಂದು ತಿಳಿದು ಬಂದಿದೆ. ವೀರಬಾಗು ಎಂದಬ ಅಜಿತ್ ಅಭಿಮಾನಿ ಚಿತ್ರಮಂದಿರದಲ್ಲಿ ತನಗೆ ಸಿನಿಮಾ ನೋಡಲು ಅವಕಾಶ ಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ. ಇತ್ತೀಚೆಗೆ ವೀರಬಾಗು ಫ್ಯಾಮಿಲಿ ಸಮೇತ 'ಥುನಿವು' ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಹೋಗಿದ್ದಾನೆ. ಆದರೆ ಆತ ಕಂಠಪೂರ್ತಿ ಕುಡಿದಿದ್ದರಿಂದ ಥಿಯೇಟರ್ ಒಳಗೆ ಪ್ರವೇಶಿಸಲು ಅನುಮತಿ ಸಿಕ್ಕಿಲ್ಲ. ಅಷ್ಟೇ ಅಲ್ಲದೇ ಕುಡಿದು ಬಂದಿದ್ದಕ್ಕಾಗಿ ಕುಟುಂಬ ಸದಸ್ಯರ ಎದುರೇ ಆತನನ್ನು ಥಿಯೇಟರ್ ಸಿಬ್ಬಂದಿ ಅವಮಾನಿಸಿದ್ದರಂತೆ. ಇದರಿಂದ ಬೇಸರಗೊಂಡ ಆತ ಕುಟುಂಬ ಸದಸ್ಯರನ್ನು ಮಾತ್ರ ಸಿನಿಮಾ ನೋಡಲು ಕಳುಹಿಸಿ ಬೇಸರದಿಂದ ಮನೆಗೆ ಮರಳಿದ್ದಾನೆ.

ಕುಟುಂಬ ಸದಸ್ಯರು 'ಥುನಿವು' ಸಿನಿಮಾ ವೀಕ್ಷಿಸಿ ಮನೆಗೆ ತೆರಳಿದಾಗ ಶಾಕ್ ಕಾದಿತ್ತು. ವೀರಬಾಗು ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದನು ಎಂದು ವರದಿಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೃತ್ತಿಯಲ್ಲಿ ಆತ ಆಟೋ ಡ್ರೈವರ್ ಆಗಿದ್ದನು. ಅಜಿತ್ ನಟನೆಯ 'ಥುನಿವು' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಆಗಿ ಭರ್ಜರಿ ಸದ್ದು ಮಾಡ್ತಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಎಲ್ಲದಕ್ಕೂ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಅಭಿಮಾನ ಇರಬೇಕು, ಅಂಧಾಭಿಮಾನ ಬೇಡವೇ ಬೇಡ.


Click it and Unblock the Notifications











