ಚಳಿ, ಮಳೆ ಲೆಕ್ಕಿಸದೇ ಬೈಕ್ ಏರಿ 3 ದೇಶ ಸುತ್ತಿ ಬಂದ ಅಜಿತ್: ವರ್ಷಾಂತ್ಯಕ್ಕೆ ಮತ್ತೆ ವಿಶ್ವ ಪರ್ಯಟನೆ
ತಮಿಳು ನಟ ಅಜಿತ್ ಬೈಕ್, ಕಾರ್ ಕ್ರೇಜ್ ಬಗ್ಗೆ ಗೊತ್ತೇಯಿದೆ. ಪದೇ ಪದೇ ಅಭಿಮಾನಿಗಳ ಪ್ರೀತಿಯ ಥಲಾ ಬೈಕ್ ಏರಿ ಸವಾರಿ ಹೊರಟು ಬಿಡುತ್ತಾರೆ. ಇತ್ತೀಚೆಗೆ ಬೈಕ್ ಏರಿ ಲಾಡಕ್‌ಗೆ ಹೋಗಿದ್ದ ಅಜಿತ್ ಕನ್ನಡದ ಬೈಕ್ ಸವಾರರೊಬ್ಬರು ಬೈಕ್ ರಿಪೇರಿ ಮಾಡಲು ಸಹಾಯ ಮಾಡಿದ್ದರು. ಈ ವಿಚಾರವನ್ನು ಆ ಬೈಕರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಬಹಳ ವರ್ಷಗಳಿಂದ ನಟ ಅಜಿತ್ ಬೈಕ್‌ನಲ್ಲಿ ವಿಶ್ವ ಪರ್ಯಟನೆ ಕನಸು ಕಂಡಿದ್ದರು. 'ಥುನಿವು' ಸಿನಿಮಾ ಶೂಟಿಂಗ್ ಮುಗಿಸಿದ ಬೆನ್ನಲ್ಲೇ ಮ್ಯಾಪ್ ಸಿದ್ಧಪಡಿಸಿ ಬೈಕ್ ಏರಿ ಹೊರಟ್ಟಿದ್ದರು. ಇದೀಗ ಮೊದಲ ಹಂತವಾಗಿ ಭಾರತ ನೇಪಾಳ ಹಾಗೂ ಭೂತಾನ್ ದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಈ ಬಗ್ಗೆ ನಟ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಸದ್ಯ 'ವಿದಾಮುಯರ್ಚಿ' ಚಿತ್ರವನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ಮುಗಿಸಿ 2ನೇ ಹಂತದ ಬೈಕ್ ಪ್ರವಾಸ ಕೈಗೊಳ್ಳಲಿದ್ದಾರೆ.

"ಬಹಳ ಸವಾಲಿನ ಭೂಪ್ರದೇಶಗಳಲ್ಲಿ ಅಜಿತ್ ಬೈಕ್ ಸವಾರಿ ಮಾಡಿದ್ದಾರೆ. ಅದೇ ರೀತಿ ಈ ಹಾದಿಗಳಲ್ಲಿ ಹವಾಮಾನ ವೈಪರಿತ್ಯ ಪರಿಸ್ಥಿತಿಯನ್ನು ಎದುರಿಸಿದರು. ಅಜಿತ್ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸವಾರಿ ಮಾಡಿದ್ದಾರೆ. ನೇಪಾಳ ಹಾಗೂ ಭೂತಾನ್ ದೇಶಗಳಲ್ಲೂ ಸಂಚರಿಸಿ ಬಂದಿದ್ದಾರೆ. ಅವರ ಮುಂದಿನ ವಿಶ್ವ ಪರ್ಯಟನೆ ನವೆಂಬರ್‌ನಲ್ಲಿ ಶುರುವಾಗಲಿದೆ" ಎಂದು ಬರೆದುಕೊಂಡಿದ್ದಾರೆ. ಅಜಿತ್ ಯಾವ ಮಾರ್ಗದಲ್ಲಿ ಎಲ್ಲೆಲ್ಲಿ ಸುತ್ತಾಡಿದ್ದಾರೆ ಎನ್ನುವ ಮ್ಯಾಪ್ ಅನ್ನು ಕೂಡ ಹಂಚಿಕೊಂಡಿದ್ದಾರೆ.


Click it and Unblock the Notifications











