ಕರೂರು ಕಾಲ್ತುಳಿತ ಪ್ರಕರಣಕ್ಕೆ ವಿಜಯ್ ಒಬ್ರೇ ಕಾರಣ ಅಲ್ಲ; ನಟ ಅಜಿತ್
ತಮಿಳು ನಟ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಟಿವಿಕೆ ಪಕ್ಷ ಸಂಘಟನೆಗಾಗಿ ಸಮಾವೇಶ, ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಕರೂರಿನಲ್ಲಿ ನಡೆದ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಬಗ್ಗೆ ನಟ ಅಜಿತ್ ಪ್ರತಿಕ್ರಿಯಿಸಿದ್ದಾರೆ.
ಅಜಿತ್ ಹಾಗೂ ವಿಜಯ್ ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇಬ್ಬರ ಸಿನಿಮಾಗಳ ನಡುವೆ ಪೈಪೋಟಿ ಇರುತ್ತದೆ. ಇಬ್ಬರು ಬಹಿರಂಗವಾಗಿ ಇತ್ತೀಚಿನ ವರ್ಷಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ ಆದರೂ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ. ಇನ್ನು ಡಿಎಂಕೆ ಸೇರಿದಂತೆ ಕೆಲ ರಾಜಕೀಯ ಪಕ್ಷಗಳನ್ನು ಅಜಿತ್ ಅವರನ್ನು ಸೆಳೆಯುವ ಪ್ರಯತ್ನ ಮಾಡಿದ್ದವು. ಆದರೆ ರಾಜಕೀಯದಿಂದ ಅವರು ದೂರವೇ ಉಳಿದಿದ್ದಾರೆ.

ಸಿನಿಮಾ, ಬೈಕ್, ಕಾರ್ ಇಷ್ಟೇ ಅಜಿತ್ ಲೈಫ್ ಎನ್ನುವಂತಾಗಿದೆ. ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವುದು ತೀರ ವಿರಳ. ತಮ್ಮದೇ ಸಿನಿಮಾ ಪ್ರಚಾರ ಮಾಡುವುದಿಲ್ಲ. ಇನ್ನು ಮಾಧ್ಯಮ ಸಂದರ್ಶನಗಳಿಂದ ದೂರವೇ ಉಳಿಯುತ್ತಾರೆ. ಬಹಳ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ಅಜಿತ್ ಮಾತನಾಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ ಸಾಕಷ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಬಲ ಏನು ಎಂದು ತೋರಿಸಲು ನಾವು ಜನಸಮೂಹವನ್ನು ಒಟ್ಟುಗೂಡಿಸುವ ಗೀಳನ್ನು ಹೊಂದಿದ್ದೇವೆ. ಇದು ಕೊನೆಗೊಳ್ಳಬೇಕು ಎಂದು ಅಜಿತ್ ಹೇಳಿದ್ದಾರೆ. ಅಭಿಮಾನಿಗಳಿಂದಲೇ ನಾನು ಇವತ್ತು ನನ್ನ ಜೀವನ ಚೆನ್ನಾಗಿದೆ. ಆದರೆ ಪ್ರೀತಿ ಹಾಗೂ ಅಟೆಂಷನ್ ಬಗ್ಗೆಯೂ ಗಮನ ಹರಿಸಬೇಕು. ಸಂಭ್ರಮಾಚರಣೆ ಹೆಸರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸುವುದು, ಚಿತ್ರಮಂದಿರದ ಪರದೆ ಹರಿದು ಹಾಕುವುದು ಎಲ್ಲವೂ ನಿಲ್ಲಬೇಕು" ಎಂದಿದ್ದಾರೆ.
ಮಾತು ಮುಂದುವರೆಸಿರುವ ನಟ ಅಜಿತ್ "ನಾನು ಯಾರನ್ನೂ ದೂಷಿಸಲು ಪ್ರಯತ್ನಿಸುತ್ತಿಲ್ಲ, ಆದರೆ ನಾನು ಹೇಳಿದಂತೆ, ಈ ಕಾಲ್ತುಳಿತ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಘಟನೆಗೆ ಆ ವ್ಯಕ್ತಿ (ವಿಜಯ್) ಮಾತ್ರ ಜವಾಬ್ದಾರನಲ್ಲ. ನಾವೆಲ್ಲರೂ ಜವಾಬ್ದಾರರು. ನಾವು ಜನಸಂದಣಿಯ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದೇವೆ. ಇದು ಇಡೀ ಚಲನಚಿತ್ರೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ" ಎಂದು ಅಜಿತ್ ಹೇಳಿದ್ದಾರೆ.
"ಕ್ರಿಕೆಟ್ ಪಂದ್ಯ ವೀಕ್ಷಿಸಲು ಸಾಕಷ್ಟು ಜನ ಹೋಗ್ತಾರೆ. ಇದೆಲ್ಲವೂ ಅಲ್ಲಿ ನಡೆಯುವುದನ್ನು ನೀವು ನೋಡುವುದಿಲ್ಲ, ಅಲ್ಲವೇ? ಇದು ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ನಡೆಯುತ್ತಿದೆ? ಇದು ಸೆಲೆಬ್ರಿಟಿಗಳು, ಸಿನಿಮಾ ವ್ಯಕ್ತಿಗಳ ವಿಚಾರದಲ್ಲಿ ಮಾತ್ರ ಯಾಕೆ ನಡೆಯುತ್ತಿದೆ? ಹಾಗಾದರೆ, ಏನಾಗುತ್ತದೆ? ನಿಜ ಹೇಳಬೇಕೆಂದರೆ, ಹಾಲಿವುಡ್ ನಟರು ಅಥವಾ ನಾವು ಇದನ್ನು ಬಯಸುವುದಿಲ್ಲ. ನಮಗೆ ಅಭಿಮಾನಿಗಳ ಪ್ರೀತಿ ಬೇಕು ಮತ್ತು ಅದಕ್ಕಾಗಿ ನಾವು ಶ್ರಮಿಸುತ್ತೇವೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬೇರೆ ಮಾರ್ಗಗಳಿವೆ" ಎಂದು ಅಜಿತ್ ವಿವರಿಸಿದ್ದಾರೆ.
ನಟ ಅಜಿತ್ ಇತ್ತೀಚೆಗೆ ಸಿನಿಮಾ ಮಾಡುವ ವೇಗ ತಗ್ಗಿಸಿದ್ದಾರೆ. ಈಗಾಗಲೇ 63 ಸಿನಿಮಾಗಳಲ್ಲಿ ಅವರು ನಟಿಸಿದ್ದು ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ವರ್ಷ ಅವರು ನಟಿಸಿದ 'ವಿಡಾಮುಯರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿತ್ತು. ಒಂದು ಸಿನಿಮಾ ಸೋತು ಮತ್ತೊಂದು ಸಿನಿಮಾ ಗೆದ್ದಿತ್ತು. ಎರಡು ವರ್ಷಗಳ ಹಿಂದೆ ಅಜಿತ್ ನಟಿಸಿದ್ದ 'ಥುನಿವು' ಸಿನಿಮಾ ಬಿಡುಗಡೆ ಆಗಿತ್ತು. ಫಸ್ಟ್ ಡೇ ಸಿನಿಮಾ ಸೆಲೆಬ್ರೇಷನ್ ವೇಳೆ ಅಭಿಮಾನಿಯೊಬ್ಬ ಚಲಿಸುತ್ತಿದ್ದ ಟ್ರಕ್ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು.


Click it and Unblock the Notifications











