ಸ್ಪೇನ್‌ನಲ್ಲಿ ಪಲ್ಟಿಯಾಗಿ ಬಿದ್ದ ಅಜಿತ್ ಕಾರು, ರೇಸಿಂಗ್ ವೇಳೆ ಎರಡು ಬಾರಿ ಅಪಘಾತಕ್ಕೀಡಾದ ಸೂಪರ್ ಸ್ಟಾರ್..!
ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವ ಅಜಿತ್ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ನಟ. ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿರುವ ಅಜಿತ್ ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ಭಾರತೀಯ ಚಿತ್ರರಂಗದ ಏಕೈಕ ಹೀರೋ ಕೂಡ ಹೌದು.
ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ. ಇಂಥಾ ಅಜಿತ್ ಕುಮಾರ್ ಸದ್ಯ ಚಿತ್ರರಂಗದಿಂದ ದೂರವಾಗಿ ತಮ್ಮ ಸಂಪೂರ್ಣ ಗಮನವನ್ನು ತಮ್ಮ ನೆಚ್ಚಿನ ಕಾರ್ ರೇಸ್ ಮೇಲೆ ಹರಿಸಿದ್ದಾರೆ. ಸ್ಪೇನ್‌ನಲ್ಲಿ ನಡೆಯುತ್ತಿರುವ ಸ್ಪಿಂಟ್ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾರೆ. ಇದೇ ಸಮಯದಲ್ಲಿ ಅಜಿತ್ ಅವರ ಕಾರು ಕಾರು ರಣಭೀಕರ ಅಪಘಾತಕ್ಕೀಡಾಗಿದೆ. ಎರಡು ಮೂರು ಬಾರಿ ಪಲ್ಟಿ ಹೊಡೆದಿದೆ.

ಐದನೇ ಸುತ್ತಿನಲ್ಲಿ 14ನೇ ಸ್ಥಾನವನ್ನು ಪಡೆದ ಅಜಿತ್ ಆ ನಂತರ ಆರನೇ ಸುತ್ತಿನಲ್ಲಿ ಅಪಘಾತಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್ ಅಜಿತ್ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಅಜಿತ್ ಅವರ ಬಲಗೈ ಬಂಟ ಸುರೇಶ್ ಚಂದ್ರ ಮಾಹಿತಿಯನ್ನು ಹಂಚಿಕೊಂಡಿದ್ದು ರೇಸ್ ಟ್ರ್ಯಾಕ್‌ನಲ್ಲಿ ಮತ್ತೊಂದು ಕಾರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಜಿತ್ ಕಾರು ಪಲ್ಟಿಯಾಗಿದೆ ಎಂದಿದ್ದಾರೆ. ಆರನೇ ಸುತ್ತಿನಲ್ಲಿ ಎರಡು ಬಾರಿ ಅಜಿತ್ ಕಾರು ಅಪಘಾತಕ್ಕೊಳಗಾಗಿದೆ ಎಂದು ಹೇಳಿದ್ದಾರೆ. ಅಪಘಾತಕ್ಕೀಡಾದ ನಂತರವೂ ಕೂಡ ಕುಗ್ಗದ ಅಜಿತ್ ಮತ್ತೆ ರೇಸ್ ಟ್ರ್ಯಾಕ್‌ಗೆ ಮರಳಿದ್ದರು ಎಂದು ಹೇಳಿದ್ದಾರೆ.
ಸದ್ಯ ಅಜಿತ್ ಕಾರು ಪಲ್ಟಿ ಹೊಡೆಯುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ. ಅನೇಕರು ಕಾರ್ ರೇಸ್ ಸಹವಾಸ ಬೇಡ ನಿಮ್ಮ ಪಾಡಿಗೆ ನೀವು ನಿಮಗೆ ಇಷ್ಟ ಬಂದಾಗ ಚಿತ್ರಗಳನ್ನು ಮಾಡಿಕೊಂಡು ನಮ್ಮೆಲ್ಲರನ್ನು ಮನರಂಜಿಸಿ ಅಷ್ಟೇ ಸಾಕು ಎನ್ನುತ್ತಿದ್ದಾರೆ. ಅಂದ್ಹಾಗೇ ಅಜಿತ್ ಕಾರು ಅಪಘಾತಕ್ಕೀಡಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಅಜಿತ್ ಕಾರು ಅಪಘಾತಕ್ಕೀಡಾಗಿತ್ತು.
ದುಬೈನಲ್ಲಿ 24 ಗಂಟೆಗಳ ಕಾಲ ನಡೆಯಲಿರುವ 24H 2025 ಕಾರ್ ರೇಸ್‌ನಲ್ಲಿ ಭಾಗವಹಿಸಲು ರೇಸ್ ಟ್ರ್ಯಾಕ್‌ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಅಜಿತ್ ಕುಮಾರ್ ಅವರ ಕಾರು ರಣಭೀಕರ ಅಪಘಾತಕ್ಕೀಡಾಗಿತ್ತು. ಈ ಘಟನೆ ನಡೆದಾಗ ಅವರು 180 ಕಿ.ಮೀ ವೇಗದಲ್ಲಿ ಅಜಿತ್ ಕಾರು ಚಾಲನೆ ಮಾಡುತ್ತಿದ್ದರು. ಆ ನಂತರ ಫೋರ್ಚುಗಲ್‌ನಲ್ಲಿ ಕಾರ್ ರೇಸ್‌ನಲ್ಲಿ ಭಾಗವಹಿಸಿದಾಗ ಕೂಡ ಅಜಿತ್ ಕಾರಿನ ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್ ಆಗಿತ್ತು. ಆ ನಂತರ ಮಾತನಾಡಿದ್ದ ಅಜಿತ್ ಚಿಕ್ಕ ಆಕ್ಸಿಡೆಂಟ್ ನಮಗೇನು ಆಗಿಲ್ಲ ಕಾರ್ ರೇಸ್‌ನಲ್ಲಿ ಗೆಲ್ಲುತ್ತೇವೆ, ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದರು.
ಉಳಿದಂತೆ 2010ರ ನಂತರ ಅಜಿತ್ ಕಾರ್ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ. ಇನ್ನೂ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದನ್ನು ಬಿಟ್ಟರೆ, ಚಿತ್ರಕ್ಕೆ ಸಂಬಂಧಿಸಿದ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಅಜಿತ್ ಅಭಿನಯದ ವಿದಾ ಮುಯರ್ಚಿ ಬಿಡುಗಡೆಯಾಗಿದ್ದು ಗುಡ್ ಬ್ಯಾಡ್ ಅಗ್ಲಿ ಚಿತ್ರ ಬಿಡುಗಡೆಯಾಗಬೇಕಿದೆ.


Click it and Unblock the Notifications











