ಅಭಿಮಾನಿಗಳು ಆತಂಕದಲ್ಲಿ.. 'ಅಜಿತ್' ಫುಟ್ಬಾಲ್ ಗ್ರೌಂಡ್ ನಲ್ಲಿ ; ವಿಕ್ಷಿಪ್ತ ನಟನ ವಿಡಿಯೋ ವೈರಲ್ ..!
ತಮಿಳು ಚಿತ್ರರಂಗದ ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವವರು ಅಜಿತ್.
ಯಾರೊಂದಿಗೂ ಬೆರೆಯದೆ, ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡು, ಸಿನಿಮಾ ಚಿತ್ರೀಕರಣ ಬಿಟ್ಟು ಬೇರೆ ಯಾವ ಸಭೆ ಸಮಾರಂಭಗಳಲ್ಲಿ ಭಾಗವಹಿಸದ ಅಜಿತ್, ಮೊನ್ನೆಯ ದಿನ ಆಸ್ಪತ್ರೆಗೆ ದಾಖಲಾದಾಗ ಅವರ ಅಭಿಮಾನಿಗಳಲ್ಲಿ ಸಹಜವಾಗಿ ಆತಂಕ ಮನೆ ಮಾಡಿತ್ತು. ಮಿದುಳಿನ ಸರ್ಜರಿಗೆ ಒಳಗಾಗಲಿದ್ದಾರೆ ಎಂಬ ಸುಳ್ಳು ಸುದ್ದಿ, ಅಭಿಮಾನಿಗಳ ನಿದ್ದೆಗೆ ಕೊಳ್ಳಿಯನ್ನ ಇಟ್ಟಿತ್ತು. ಕಳೆದ 48 ಘಂಟೆಗಳಿಂದ ಇವರ ಅಭಿಮಾನಿ ಬಳಗ ಇವರ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನೂ ಮಾಡುತ್ತಿತ್ತು.
ಆದರೆ ಇದ್ಯಾವುದರ ಪರಿವೆ ಇಲ್ಲದ, ವಿಕ್ಷಿಪ್ತ ಸ್ವಭಾವದ ನಟ ಅಜಿತ್ ತಮ್ಮ ಪಾಡಿಗೆ ಎದ್ದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ತಮ್ಮ ಮಗನ ಶಾಲೆಯ ಆವರಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ, ಅಜಿತ್ ಅವರ ಪುತ್ರ ಅದ್ವಿಕ್ ಗೆ ತಂದೆಯಂತೆ ಬಣ್ಣಗಳ ಮೇಲೆ ಮೋಹ ಇಲ್ಲ. ಬದಲಿಗೆ ಫುಟ್ಬಾಲ್ ಅಂದರೆ ಹುಚ್ಚು. ಕಾಲ್ಚೆಂಡಿನ ಸಮರವನ್ನ ಇಷ್ಟ ಪಡುವ ಅದ್ವಿಕ್ ಕಳೆದ ವರ್ಷ ಚೆನ್ನೈ ಕ್ಲಬ್ ನಡೆಸಿದ ಜೂನಿಯರ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. ಫೈನಲ್ ನಲ್ಲಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಅಜಿತ್ ಹಾಗೂ ಶಾಲಿನಿ ಅವರ ಹೃದಯವನ್ನ ಹೆಮ್ಮೆಯಿಂದ ಉಬ್ಬಿ ಹೋಗುವಂತೆ ಮಾಡಿದ್ದರು ಅದ್ವಿಕ್.
ಇಂಥಹ ಅದ್ವಿಕ್ ಎಂದಿನಂತೆ ಶಾಲೆಯಲ್ಲಿ ಫುಟ್ಬಾಲ್ ನ ಬೆನ್ನು ಹತ್ತಿದ್ದಾರೆ. ಆಟವನ್ನೂ ಆಡ್ತಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ನಂತರ ಅಜಿತ್, ಮಗನ ಇದೇ ಆಟವನ್ನ ಕಣ್ತುಂಬಿಕೊಳ್ಳಲು ಮಗನ ಶಾಲೆಗೆ ತೆರಳಿದ್ದಾರೆ. ತೀರಾ ಸಾಮಾನ್ಯರಂತೆ ಹುಲ್ಲು ಹಾಸಿನ ಮೇಲೆ ಕುಳಿತು ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಹರಟೆ ಹೊಡೆದಿದ್ದಾರೆ. ಮಗನ ಆಟವನ್ನ ನೋಡಿದ್ದಾರೆ. ಪುಟ್ಬಾಲ್ ಹಾಗೂ ಮಗನ ಮೇಲೆ ಅಜಿತ್ ಗೆ ಇರುವ ಪ್ರೀತಿಯ ಸಂಕೇತದಂತೆ ಇರುವ ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೂ ಅಭಿಮಾನ ಅನ್ನುವುದೇ ಹಾಗೇ. ನೆಚ್ಚಿನ ನಟ ತಮ್ಮ ಅಭಿಮಾನಕ್ಕೆ ಬೆಲೆ ಕೊಡಲಿ ಕೊಡದೇ ಇರಲಿ ಇದ್ಯಾವುದನ್ನೂ ತಲೆಕೆಡಿಸಿಕೊಳ್ಳದೇ, ಬೆಲೆ ಎಷ್ಟೇ ಇರಲಿ ಟಿಕೆಟ್ ತೆಗೆದುಕೊಂಡು ಅಭಿಮಾನಿಗಳು ತಮ್ಮ ಇಷ್ಟದ ಹೀರೋ ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಿ ರಣಕೇಕೆ ಹಾಕುತ್ತಾರೆ. ಇದಕ್ಕೆ ಜ್ವಲಂತ ಉದಾಹರಣೆ ಅಂತಿರುವ ಅಜಿತ್ ಅಭಿಮಾನಿಗಳು, ಅಜಿತ್ ಅವರ ಈ ವಿಡಿಯೋ ನೋಡಿ ಸಂಭ್ರಮ ಪಡ್ತಿದ್ದಾರೆ. ತಮ್ಮೆಲ್ಲ ಸಂಕಟ ಪಕ್ಕಕ್ಕೆ ಇಟ್ಟು ಅಜಿತ್ ಅವರ ನೆಮ್ಮದಿಯನ್ನ ನೋಡಿ ನಿಟ್ಟುಸಿರು ಬಿಡುತ್ತಿದ್ದಾರೆ.

ಮಿಕ್ಕಂತೆ ಸದ್ಯಕ್ಕೆ ಕುಶಲವಾಗಿ ಕ್ಷೇಮವಾಗಿ ಇರುವ ಅಜಿತ್ ಮಿಜಿಲ್ ತಿರುಮೇನಿ ನಿರ್ದೇಶನದ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲಿಯೇ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟಿನಲ್ಲಿ ತಾನಾಯಿತು, ತನ್ನ ಸಿನಿಮಾ ಆಯಿತು, ತನ್ನ ಕುಟುಂಬವಾಯಿತು ಎಂದು ಅಜಿತ್ ಇದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಹೇಗಾದರೂ ಇದ್ದುಕೊಳ್ಳಲಿ, ವರ್ಷಕ್ಕೊಂದು ಸಿನಿಮಾ ಮಾಡಿದರೆ ಸಾಕು ಎನ್ನುತ್ತಿದ್ದಾರೆ. ಬೇಡವೆಂದರೂ ಅಭಿಮಾನಿಗಳು ಅಜಿತ್ ಬೆನ್ನು ಬೀಳುತ್ತಾರೆ, ಸಿನಿಮಾಗಳನ್ನು ಗೆಲ್ಲಿಸುತ್ತಾರೆ. ಅದಕ್ಕೆ ಕಾರಣ ಅಜಿತ್ ಅವರಲ್ಲಿನ ಅಸಾಧಾರಣ ಪ್ರತಿಭೆ. ಇಂತಹ ಪ್ರತಿಭಾವಂತ ಸದ್ಯಕ್ಕೆ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಅನ್ನುವುದು ಸದ್ಯದ ಬ್ರೇಕಿಂಗ್ ನ್ಯೂಸ್.


Click it and Unblock the Notifications











