'ಕಡವುಲೆ... ಅಜಿತೇ' ಎಂದು ನನ್ನ ಕರೆಯಬೇಡಿ, ತಮ್ಮ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಂಡ ಅಜಿತ್...!
ತಮಿಳು ಚಿತ್ರರಂಗದ ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವವರು ಅಜಿತ್. ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿರುವ ಅಜಿತ್ ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ನಟ ಎಂದರೆ ಅದು ತಪ್ಪಲ್ಲ.
ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ.

ಇಂಥಾ ಅಜಿತ್ ತನಗೆ ಯಾರು ಬೇಡ ಎಂದು ನೂರಾರು ಬಾರಿ ಹೇಳಿದರು ಕೂಡ ಇವರನ್ನು ಆರಾಧಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ತನಗೆ ಯಾವ ಅಭಿಮಾನಿ ಸಂಘ ಇಲ್ಲ ಎಂದು ಅಜಿತ್ ಹೇಳಿದರು ಕೂಡ ಇವರನ್ನು ಮನದಲ್ಲಿಯೇ ಪೂಜಿಸುವವರಿಗೆ ಕೇವಲ ಚೆನ್ನೈನಲ್ಲಿ ಮಾತ್ರ ಅಲ್ಲ ಭಾರತದಲ್ಲೇ ಬರ ಇಲ್ಲ. ಹೇಗಾದರೂ ಇರಲಿ ವರ್ಷಕ್ಕೊಂದು ಸಿನಿಮಾ ಮಾಡಲಿ ಎಂದು ಇವರನ್ನು ಇಷ್ಟ ಪಡುವವರು ಆಶಿಸುತ್ತಾರೆ. ಅಜಿತ್ ಒಪ್ಪಲಿ ಬಿಡಲಿ ಆದರೆ ನಾನು ಅಜಿತ್ ಅಭಿಮಾನಿ ಎಂದು ಹೇಳುತ್ತಾರೆ. ಕೆಲವೊಮ್ಮೆ ಘೋಷ ವಾಕ್ಯವನ್ನು ಕೂಗುತ್ತಾರೆ. ಆದರೆ ಈಗ ಅಜಿತ್‌ಗೆ ಇದರಿಂದ ಕೂಡ ತೊಂದರೆಯಾಗುತ್ತಿದೆ. ಹೀಗಾಗಿಯೇ ಪತ್ರವೊಂದನ್ನು ತಮ್ಮ ಪಿಆರ್‌ಓ ಸುರೇಶ್ ಚಂದ್ರ ಮೂಲಕ ಜಾರಿ ಮಾಡಿದ್ದಾರೆ ಅಜಿತ್.
ಹೌದು, ಅಸಲಿಗೆ ಕೆಲ ದಿನಗಳಿಂದ ಅಜಿತ್ ಅವರ ಅಭಿಮಾನಿಗಳು ''ಕಡವುಲೆ ಅಜಿತೆ'' ಎಂಬ ಘೋಷವಾಕ್ಯ ಕೂಗಲು ಶುರು ಮಾಡಿದ್ದರು. ಎಲ್ಲೆಂದರಲ್ಲಿ ಈ ಘೋಷವಾಕ್ಯ ಕೂಗುವ ಮೂಲಕ ತಮ್ಮ ಅಭಿಮಾನದ ಪ್ರದರ್ಶನ ಮಾಡುತ್ತಿದ್ದರು. ಆದರೆ ಇದರಿಂದ ಈಗ ಅಜಿತ್‌ಗೆ ನೋವಾಗಿದೆ. ಮನಸು ವಿಚಲಿತವಾಗಿದೆ. ಯಾಕೆಂದರೆ 'ಕಡವುಲೆ' ಎಂದರೆ ತಮಿಳಿನಲ್ಲಿ 'ದೇವರು' ಎಂಬ ಅರ್ಥ ಬರುತ್ತೆ.
ಹೀಗಾಗಿಯೇ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ ''ಕಡವುಲೆ ಅಜಿತೆ'' ಎಂಬ ಘೋಷವಾಕ್ಯವನ್ನು ಈ ಕೂಡಲೇ ಕೂಗುವುದನ್ನು ನಿಲ್ಲಿಸಿ ಎಂಬ ಮನವಿಯನ್ನು ಪತ್ರದ ಮೂಲಕ ಅಜಿತ್ ಮಾಡಿದ್ದಾರೆ. ನನ್ನನ್ನೂ ನನ್ನ ಹೆಸರಿಂದ ಮಾತ್ರ ಕರೆಯಿರಿ ನನಗೆ ಅದು ಮಾತ್ರ ಇಷ್ಟವಾಗುತ್ತೆ ಎಂದು ಹೇಳಿದ್ದಾರೆ. ಮುಂದುವರೆದು ನನ್ನ ಹೆಸರನ್ನು ಕೂಗುವುದನ್ನು ಬಿಟ್ಟು ಕಷ್ಟ ಪಟ್ಟು ಕೆಲಸ ಮಾಡಿ, ಯಾರನ್ನೂ ನೋಯಿಸದೇ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ, ಕಾನೂನು ಪಾಲಿಸುವ ನಾಗರೀಕರಾಗಿ ಬದುಕಿ ಎಂದು ಕೂಡ ಹೇಳಿದ್ದಾರೆ ಅಜಿತ್.
ಇನ್ನುಳಿದಂತೆ ಅಜಿತ್ ಅಭಿನಯದ ''ವಿದಾಮುಯರ್ಚಿ'' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟೀಸರ್ ಆಗಲೇ ಅನೇಕರನ್ನು ಹುಚ್ಚೆಬ್ಬಿಸಿದೆ. ಆದರೂ ಈ ಚಿತ್ರ 90ರ ದಶಕದಲ್ಲಿ ಬಂದ ಹಾಲಿವುಡ್ ಚಿತ್ರ 'ಬ್ರೇಕ್‌ಡೌನ್'ನ ಯಥಾವತ್ತು ನಕಲು ಆಗಿರಬಹುದು ಎನ್ನುವ ಅನುಮಾನ ಅನೇಕರಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃತಿ ಚೌರ್ಯದ ಆರೋಪದಡಿ ಹಾಲಿವುಡ್ ನಿರ್ಮಾಣ ಸಂಸ್ಥೆ ವಿದಾಮುಯರ್ಚಿ ನಿರ್ಮಾಣ ಸಂಸ್ಥೆಗೆ ನೋಟಿಸ್ ಕೂಡ ಜಾರಿ ಮಾಡಿದೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ಈ ಚಿತ್ರವನ್ನು ಹೊರತು ಪಡಿಸಿದರೆ ಅಜಿತ್ ''ಗುಡ್ ಬ್ಯಾಡ್ ಅಗ್ಲಿ'' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅಜಿತ್ ಅಭಿನಯದ 63ನೇ ಚಿತ್ರವಾಗಿದ್ದು ಪುಷ್ಪ ಚಿತ್ರವನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.


Click it and Unblock the Notifications











