ಮೊದಲ ದಿನವೇ ವಿಡಾಮುಯರ್ಚಿ ಚಿತ್ರತಂಡಕ್ಕೆ ಆಘಾತ...!
ಒಂದು ಚಿತ್ರದ ಹಿಂದೆ ಹತ್ತಾರು ಕಥೆಗಳಿರುತ್ತವೆ, ವ್ಯಥೆಗಳಿರುತ್ತವೆ. ಸಿನಿಮಾ ನಿರ್ಮಾಣ ಸಿನಿಮಾವೊಂದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಿದಷ್ಟು ಸುಲಭವಲ್ಲ. ಇಲ್ಲಿ ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು ಚಿತ್ರವನ್ನು ಮಾಡುವ ನಿರ್ಮಾಪಕರಿದ್ದಾರೆ. ಜೀವವನ್ನೇ ಬಸಿದು ನಿರ್ದೇಶನ ಮಾಡುವ ನಿರ್ದೇಶಕರಿದ್ದಾರೆ .
ತಮ್ಮ ಚಿತ್ರಕ್ಕೆ ತಿಂಗಳಾನುಗಟ್ಟಲೆ ಕುಳಿತು ಸ್ಕ್ರಿಪ್ಟು, ಪ್ಲ್ಯಾನಿಂಗು, ನೂರಾರು ದಿನಗಳ ಚಿತ್ರೀಕರಣವನ್ನು ಮಾಡಿ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಅನೇಕರು ಇಲ್ಲಿ ದುಡಿಯುತ್ತಾರೆ. ಆದರೆ ಈಗೀಗ ಯಾವ ಭಯ ಇಲ್ಲದೇ ಈಗಷ್ಟೇ ಬಿಡುಗಡೆಯಾದ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವುದು, ಪೈರಸಿಯನ್ನು ಮಾಡುವ ಲೀಕಾಸುರರ ಹಾವಳಿ ಹೆಚ್ಚಾಗಿದೆ.

ಈ ತರಹದ ವಿದ್ಯಮಾನ ಚಿತ್ರದ ಮಾರುಕಟ್ಟೆಗೆ ಗಳಿಕೆಗೆ ಪೆಟ್ಟು ನೀಡಬಹುದು ಎಂಬ ಅರಿವು ಇದ್ದರೂ ಕೂಡ ಅರಿವು ಇಲ್ಲದಂತೆ ಸೋಶಿಯಲ್ ಮೀಡಿಯಾದಲ್ಲಿ ಇಡೀ ಚಿತ್ರವನ್ನು ಅಪ್‌ಲೋಡ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಕಿಡಿಗೇಡಿಗಳು ಚಿತ್ರವನ್ನು ಸೆರೆ ಹಿಡಿದು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ. ಇದಕ್ಕೆ ಇನ್ನೊಂದು ಜ್ವಲಂತ ಉದಾಹರಣೆಯಂತೆ ಇಂದು ಬಿಡುಗಡೆಯಾದ ತಲಾ ಅಜಿತ್ ಅಭಿನಯದ 'ವಿಡಾಮುಯರ್ಚಿ' ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.
ಚಿತ್ರದ HD, 1080p, 720p ಮತ್ತು 480p ಪ್ರಿಂಟ್‌ಗಳನ್ನು ಆನ್‌ಲೈನ್‌ನಲ್ಲಿ ಕಿರಾತಕರು ಲೀಕ್ ಮಾಡಿದ್ದು ಅನಧಿಕೃತ ವೆಬ್ ಸೈಟ್‌ಗಳ ಮೂಲಕ ಪ್ರಿಂಟ್‌ನ್ನು ಸದ್ಯ ಶೇರ್ ಮಾಡಲಾಗುತ್ತಿದೆ. ಈ ಮೂಲಕ ಚಿತ್ರದ ಗಳಿಕೆಯನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಇನ್ನು, ಪೈರಸಿ ಇಂದು ನಿನ್ನೆಯ ಸಮಸ್ಯೆಯಲ್ಲ. ಅನೇಕ ವರ್ಷಗಳಿಂದ ಚಿತ್ರರಂಗಕ್ಕೆ ಅಂಟಿಕೊಂಡಿರುವ ಪೀಡೆ ಇದು. ಇದರ ಜಾಡನ್ನು ಇನ್ನೂ ಭೇದಿಸಲು ಸಾಧ್ಯವಾಗದಿರುವುದು ವಿಪರ್ಯಾಸ.
ಕೇವಲ ಸಂಪೂರ್ಣ ಚಿತ್ರದ ಪ್ರಿಂಟ್ ಮಾತ್ರವಲ್ಲದೇ, ಚಿತ್ರದ ಕೆಲ ಪ್ರಮುಖ ಸನ್ನಿವೇಶಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಚಿತ್ರದ ಮೇಲೆ ಅಜಿತ್ ಅವರ ಅಭಿಮಾನಿಗಳಿಗೆ, ಸಾಮಾನ್ಯ ಚಿತ್ರಪ್ರೇಮಿಗಳಿಗೆ ಇರುವ ಕುತೂಹಲಕ್ಕೆ ತಣ್ಣೀರು ಎರಚುತ್ತಿದ್ದಾರೆ. ಕ್ಲಿಪ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಯಾವ ಭಯ ಆತಂಕ ಇಲ್ಲದೇ ಯೂಟ್ಯೂಬ್‌ಗೆ ಕೂಡ ಅಪ್ಲೋಡ್ ಮಾಡುತ್ತಿದ್ದಾರೆ.
ದುಷ್ಕರ್ಮಿಗಳ ಈ ಕೃತ್ಯದಿಂದ ಸಹಜವಾಗಿ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ಅಪಾಯವನ್ನು ಮೊದಲೇ ಅರಿತಿದ್ದ ಚಿತ್ರತಂಡ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪೈರಸಿ ಮಾಡಬೇಡಿ ಎಂಬ ಮನವಿಯನ್ನು ಮಾಡಿತ್ತು. ಪೈರಸಿ ಲಿಂಕ್‌ಗಳನ್ನು ರಿಪೋರ್ಟ್ ಮಾಡುವಂತೆ ಕೇಳಿಕೊಂಡಿತ್ತು. ಆದರೂ ಕೂಡ ವಿಡಾಮುಯಾರ್ಚಿ ಚಿತ್ರದ ಪೈರೇಟೆಡ್ ಕಾಪಿ ಡಿಜಿಟಲ್ ಪ್ರಪಂಚದಲ್ಲಿ ಇಟ್ಟಾಡುತ್ತಿದೆ.
ಇನ್ನುಳಿದಂತೆ ಚಿತ್ರದಲ್ಲಿ ಅಜಿತ್ ಕುಮಾರ್ ಜೊತೆ ತ್ರಿಶಾ, ಅರ್ಜುನ್ ಸರ್ಜಾ, ರೆಜಿನಾ ಕಸೆಂದ್ರಾ ಇದ್ದಾರೆ.ಓಂ ಪ್ರಕಾಶ್ ಛಾಯಾಗ್ರಹಣ ಮತ್ತು ಅನಿರುದ್ಧ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಗಿಳ್ ತಿರುಮೇನಿ ಚಿತ್ರವನ್ನು ನಿರ್ದೇಶಿಸಿದ್ಧಾರೆ. ಮೊದಲ ದಿನ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ ಎನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ.
Disclaimer: Filmibeat Kannada ಪೈರಸಿಯನ್ನು ಬೆಂಬಲಿಸುವುದಿಲ್ಲ, ಪೈರಸಿಯ ಪ್ರಚಾರ ಮಾಡುವುದಿಲ್ಲ. 1957ರ ಸಿನಿಮಾಟೋಗ್ರಾಫ್ ಕಾಯ್ದೆ ಮತ್ತು 1957 ರ ಹಕ್ಕುಸ್ವಾಮ್ಯ ಕಾಯ್ದೆಯಡಿಯಲ್ಲಿ ಪೈರಸಿ ಮಾಡುವುದು ಕ್ರಿಮಿನಲ್ ಅಪರಾಧ. ಯಾವುದೇ ರೂಪದಲ್ಲಿ ಪೈರಸಿಯಲ್ಲಿ ಭಾಗವಹಿಸುವುದರಿಂದ ಅಥವಾ ಪ್ರೋತ್ಸಾಹಿಸುವುದರಿಂದ ದೂರವಿರಲು ನಾವು ಓದುಗರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.


Click it and Unblock the Notifications










