ಪ್ರಶಾಂತ್ ನೀಲ್- ಥಲಾ ಅಜಿತ್ ಭೇಟಿಯಾಗಿದ್ದು ನಿಜ; ಇಲ್ಲಿದೆ ಅಧಿಕೃತ ಮಾಹಿತಿ
ಪ್ರಶಾಂತ್ ನೀಲ್ ಹಾಗೂ ತಮಿಳು ನಟ ಅಜಿತ್ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡ್ತಿದೆ. ಕಳೆದೆರಡು ದಿನಗಳಿಂದ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಥಲಾ ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಥ್ರಿಲ್ಲಾಗಿದ್ದಾರೆ.
ಈಗಾಗಲೇ 'ಸಲಾರ್-2' ಹಾಗೂ 'NTR31' ಸಿನಿಮಾಗಳನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ನಟ ಅಜಿತ್ 'ವಿಡಾಮುಯರ್ಚಿ' ಹಾಗೂ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದಲ್ಲ ಎರಡು ಸಿನಿಮಾ ಬರುತ್ತದೆ. ಇತ್ತೀಚೆಗೆ ಇಬ್ಬರೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು.

ಅಜಿತ್ ಮುಂದಿನ ಚಿತ್ರಕ್ಕೆ ನೀಲ್ ಆಕ್ಷನ್ ಕಟ್ ಹೇಳ್ತಾರೆ. ಬಳಿಕ ಮತ್ತೊಂದು ಚಿತ್ರಕ್ಕೂ ಸಾರಥ್ಯ ವಹಿಸುತ್ತಾರೆ. ಆ ಚಿತ್ರಕ್ಕೆ 'KGF-3' ಕಥೆ ಲಿಂಕ್ ಆಗುತ್ತದೆ. ಆ ಮೂಲಕ ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್ ಸಿದ್ಧವಾಗಲಿದೆ. ಮುಂದಿನ ವರ್ಷವೇ ಮೊದಲ ಸಿನಿಮಾ ಶುರುವಾಗುತ್ತದೆ. ಇನ್ನು ಈ 2 ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದೆ ಎನ್ನಲಾಗಿತ್ತು. ಈ ಬಗ್ಗೆ ನಟ ಅಜಿತ್ ಮ್ಯಾನೇಜರ್ ಸುರೇಶ್ ಚಂದ್ರ ಪ್ರತಿಕ್ರಿಯಿಸಿದ್ದಾರೆ.
"ಈ ವದಂತಿಗಳೆಲ್ಲಾ ಆನ್‌ಲೈನ್‌ನಲ್ಲಿ ಹಬ್ಬಿರುವುದು. ಇದು ನಿಜವಲ್ಲ. ಅಜಿತ್ ಸರ್ ಮತ್ತು ಪ್ರಶಾಂತ್ ನೀಲ್ ಭೇಟಿಯಾಗಿರುವುದು ನಿಜ. ಅವರು ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದರು. ಇಬ್ಬರೂ ಪರಸ್ಪರ ಗೌರವವನ್ನು ಹೊಂದಿದ್ದಾರೆ. ಆದರೆ ಅವರು ಭೇಟಿಯಾದಾಗ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಯಾವುದೇ ಚರ್ಚೆ ಆಗಲಿಲ್ಲ"
"ಪ್ರಶಾಂತ್ ನೀಲ್ ಸರ್ ಅವರೊಂದಿಗೆ ಅಜಿತ್ ಅವರನ್ನು ನೋಡಲು ನಾನು ಇಷ್ಟಪಡುತ್ತೇನೆ. ಆದರೆ ಸದ್ಯದಲ್ಲಿ ಅಂತಹ ಯಾವುದೇ ಸಾಧ್ಯತೆ ಇಲ್ಲ" ಎಂದು ಸುರೇಶ್ ಚಂದ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಥಲಾ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಪ್ರಶಾಂತ್ ನೀಲ್- ಅಜಿತ ಕಾಂಬಿನೇಷನ್ ಎನ್ನುವುದೇ ಬಹಳ ಕುತೂಹಲ ಮೂಡಿಸಿತ್ತು. ಈಗ ಎಲ್ಲದ್ದಕ್ಕೂ ಫುಲ್‌ಸ್ಟಾಪ್ ಬಿದ್ದಿದೆ.
'KGF' ಸರಣಿ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಶಾಂತ್ ನೀಲ್ ಕ್ರೇಜ್ ಶುರುವಾಗಿದೆ. ಬಾಲಿವುಡ್ ಸ್ಟಾರ್ ನಟರು ನೀಲ್ ನಿರ್ದೇಶನದಲ್ಲಿ ನಟಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. 'ಉಗ್ರಂ' ಸಾರಥಿ ಕೂಡ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದು ಪರಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ 'ಸಲಾರ್' ಕತೆ ಹೇಳಲು ಆರಂಭಿಸಿದ್ದಾರೆ. ತಾರಕ್ ಜೊತೆ ಮತ್ತೊಂದು ಚಿತ್ರವನ್ನು ಘೋಷಿಸಿದ್ದಾರೆ. 'ಸಲಾರ್-2' ಹಾಗೂ 'NTR31' ಬಳಿಕ ನೀಲ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವುದು ಗೊತ್ತಿಲ್ಲ.


Click it and Unblock the Notifications











