ಅಪರೂಪದ ಮನವಿ ಮಾಡಿದ ಅಜಿತ್: ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
ದಕ್ಷಿಣ ಭಾರತ ಚಿತ್ರರಂಗದಲ್ಲಿ ಎಲ್ಲ ಸ್ಟಾರ್ ನಟರಿಗೆ ಅಭಿಮಾನಿಗಳು ಬಿರುದುಗಳನ್ನು ನೀಡಿರುತ್ತಾರೆ. ಆ ಬಿರುದಿನಿಂದಲೇ ತಮ್ಮ ಮೆಚ್ಚಿನ ನಟರನ್ನು ಸಂಭೋಧಿಸುತ್ತಾರೆ. ಖುಷಿ ಪಡುತ್ತಾರೆ.
ಪುನೀತ್ ರಾಜ್‌ಕುಮಾರ್‌ಗೆ ಪವರ್ ಸ್ಟಾರ್, ಶಿವರಾಜ್ ಕುಮಾರ್‌ಗೆ ಹ್ಯಾಟ್ರಿಕ್ ಹೀರೋ, ದರ್ಶನ್‌ಗೆ ಚಾಲೆಂಜಿಂಗ್ ಸ್ಟಾರ್, ರಜನೀಕಾಂತ್‌ಗೆ ಸೂಪರ್ ಸ್ಟಾರ್, ಚಿರಂಜೀವಿಗೆ ಮೆಗಾಸ್ಟಾರ್ ಹೀಗೆ ಒಬ್ಬೊಬ್ಬ ನಟನಿಗೆ ಒಂದೊಂದು ಬಿರುದು.
ತಮಿಳುನಾಡಿನಲ್ಲಂತೂ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟನ ಮೇಲೆ ಅತಿಯಾದ ಪ್ರೀತಿ, ಭಕ್ತಿ, ವ್ಯಾಮೋಹ. ಅಲ್ಲಿ ಸ್ಟಾರ್‌ವಾರ್‌ಗಳು ಸಹ ತುಸು ಹೆಚ್ಚೆ. ಇಂಥಹಾ ಸನ್ನಿವೇಶದಲ್ಲಿ ನಟ ಅಜಿತ್ ತಮ್ಮ ಅಭಿಮಾನಿಗಳ ಬಳಿ ಮನವಿಯೊಂದನ್ನು ಮಾಡಿದ್ದು, ಈ ಮನವಿ ಯಾಕೋ ಅಜಿತ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

ನನ್ನನ್ನು 'ತಲಾ' ಎಂದು ಕರೆಯಬೇಡಿ: ಅಜಿತ್ ಮನವಿ
ಅಜಿತ್ ಅನ್ನು 'ತಲಾ ಅಜಿತ್' ಎಂದು ಕರೆಯುವ ರೂಢಿ ಅಭಿಮಾನಿಗಳಿಗೆ. ಆದರೆ ಇಂದು ತಮ್ಮ ಅಭಿಮಾನಿಗಳು, ಮಾಧ್ಯಮದವರು ಹಾಗೂ ಚಿತ್ರರಂಗದವರಿಗೆ ಮನವಿ ಮಾಡಿರುವ ಅಜಿತ್, ಇನ್ನು ಮುಂದೆ ತಮ್ಮನ್ನು ತಲಾ ಅಜಿತ್ ಎಂದು ಕರೆಯದಿರುವಂತೆ ಕೋರಿಕೊಂಡಿದ್ದಾರೆ. ತಮ್ಮನ್ನು ಅಜಿತ್, ಅಜಿತ್ ಕುಮಾರ್ ಅಥವಾ ಸರಳವಾಗಿ ಎಂದು ಕರೆಯಿರಿ ಸಾಕು ನನ್ನ ಹೆಸರಿನ ಮುಂದಿರುವ ತಲಾ ಬಿರುದನ್ನು ತೆಗೆದುಹಾಕಿ, ಹಾಗೂ ಇನ್ನು ಮುಂದೆಯೂ ಯಾವುದೇ ಬಿರುದು ಸೇರಿಸಬೇಡಿ'' ಎಂದು ಮನವಿ ಮಾಡಿದ್ದಾರೆ.

2001ರಲ್ಲಿ ಅಜಿತ್‌ಗೆ ತಲಾ ಬಿರುದು ನೀಡಲಾಗಿತ್ತು
ಅಜಿತ್‌ಗೆ 2001 ನೇ ವರ್ಷದಲ್ಲಿ ತಲಾ ಎಂಬ ಬಿರುದನ್ನು ಅಭಿಮಾನಿಗಳು ನೀಡಿದ್ದರು. ಅಜಿತ್ ನಟನೆಯ 'ದೀನ' ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಅಜಿತ್ ನಿರ್ವಹಿಸಿದ್ದ ಪಾತ್ರದ ಹೆಸರು ತಲಾ ಧೀನದಯಾಳ್ ಎಂದಾಗಿತ್ತು. ಆ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅಜಿತ್ ಅನ್ನು ಅಭಿಮಾನಿಗಳು ತಲಾ ಅಜಿತ್ ಎಂದೇ ಕರೆಯಲು ಆರಂಭಿಸಿದರು. ಸಿನಿಮಾಗಳಲ್ಲಿ, ಮಾಧ್ಯಮಗಳಲ್ಲಿಯೂ ಅಜಿತ್ ಹೆಸರಿನ ಮುಂದೆ ತಲಾ ಎಂದು ಸೇರಿಸುವುದು ಸಾಮಾನ್ಯ ಎಂಬಂತಾಗಿತ್ತು. ಆದರೆ ಅಜಿತ್ ಅವರೇ ಈಗ ತಮ್ಮ ಹೆಸರಿನ ಮುಂದೆ 'ತಲಾ' ಸೇರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಅಭಿಮಾನಿಗಳ ಅಸಮಾಧಾನ
ತಲಾ ಎಂದರೆ ನಾಯಕ, ಲೀಡರ್ ಎಂದು ಅರ್ಥ. ರಜನೀಕಾಂತ್ ಅನ್ನು ತಲೈವಾ ಎಂದು ಕರೆಯುವುದುಂಟು. ತಮಿಳು ಚಿತ್ರರಂಗದಲ್ಲಿ ಅಜಿತ್ ಅವರ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲಾಗುವ ನಟ ವಿಜಯ್ ಅವರನ್ನು ದಳಪತಿ ವಿಜಯ್ ಎಂದೇ ಕರೆಯಲಾಗುವುದು. ಇದೀಗ ಅಜಿತ್ ತಲಾ ಬಿರುದನ್ನು ತೆಗೆದು ಹಾಕಿ ಎಂದಿರುವುದು ಅಜಿತ್ ಅಭಿಮಾನಿಗಳಿಗೆ ತೀವ್ರ ಅಸಮಾಧಾನ ಉಂಟು ಮಾಡಿದ್ದರೆ, ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ವಿಜಯ್ ಅಭಿಮಾನಿಗಳು ಅಜಿತ್ ಅನ್ನು ಹೀನಾಯವಾಗಿ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಹಲವರು ಅಜಿತ್ ಮಾಡಿರುವ ನಿರ್ಣಯವನ್ನು ಬೆಂಬಲಿಸಿದ್ದಾರೆ. ಎಲ್ಲ ನಟರು ತಮ್ಮ ಸ್ಟಾರ್‌ಡಮ್ ಹೆಚ್ಚಾಗಲಿ ಎಂದುಕೊಳ್ಳುವಾಗ ಅಜಿತ್ ಅಂಥ ಸ್ಟಂಟ್‌ಗಳಿಂದ ದೂರ ಉಳಿಯುವ ನಿರ್ಧಾರ ಮಾಡಿರುವುದು ಬಹಳ ಗಟ್ಟಿಯಾದ ನಿರ್ಧಾರ ಎಂದಿದ್ದಾರೆ.

ಸರಳವಾಗಿ ಬದುಕಲು ಇಷ್ಟಪಡುವ ವ್ಯಕ್ತಿ
ಸ್ಟಾರ್ ಆಗಿದ್ದರೂ ಸಹ ಅಜಿತ್ ಸರಳವಾಗಿ ಬದುಕಲು ಇಷ್ಟಪಡುವ ವ್ಯಕ್ತಿ. ಸೈಕಲ್ ರೈಡ್ ಮಾಡುವುದು, ಜನರೊಟ್ಟಿಗೆ ಸಾಲಿನಲ್ಲಿ ನಿಂತು ಮತದಾನ ಮಾಡುವುದು. ಹೀಗೆ ಸಾಮಾನ್ಯನಂತೆ ಬದುಕಲು ಇಷ್ಟಪಡುವ ವ್ಯಕ್ತಿ ಅಜಿತ್. ಕೆಲ ತಿಂಗಳ ಹಿಂದೆ ನಡೆದ ತಮಿಳುನಾಡು ಚುನಾವಣೆ ಸಮಯದಲ್ಲಿ ತಾವು ಪತ್ನಿಯೊಂದಿಗೆ ಮತಗಟ್ಟೆ ಬಳಿ ಸಾಲಿನಲ್ಲಿ ನಿಂತಿದ್ದ ಚಿತ್ರ ತೆಗೆದಿದ್ದ ಅಭಿಮಾನಿಯ ಮೊಬೈಲ್ ಅನ್ನು ಕಸಿದುಕೊಂಡಿದ್ದರು ಅಜಿತ್. ಅಷ್ಟೇ ಅಲ್ಲ ತಮ್ಮ ಹೆಸರಿನಲ್ಲಿದ್ದ ಅಭಿಮಾನಿ ಸಂಘವನ್ನು ಸಹ ನಿರ್ಲಿಪ್ತಗೊಳಿಸಿದರು. ಸಾಮಾನ್ಯವಾಗಿ, ಸರಳವಾಗಿ ಬದುಕಬೇಕೆಂಬ ಸಂದೇಶ ನೀಡಲೆಂದೇ ಹೆಸರಿನ ಮುಂದಿರುವ ಬಿರುದನ್ನು ಅಜಿತ್ ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











