'ವಿದಾಮುಯಾರ್ಚಿ' ಟೀಸರ್ ಆರ್ಭಟ; ಇದು ಹಾಲಿವುಡ್ ಚಿತ್ರದ ರೀಮೇಕಾ?
ಸೌತ್ ಸಿನಿದುನಿಯಾದಲ್ಲಿ ಹಾಲಿವುಡ್ ರೇಂಜ್ ಸಿನಿಮಾಗಳ ನಿರ್ಮಾಣ ಆಗುತ್ತಿದೆ. ಅಷ್ಟೇ ಅಲ್ಲ, ಹಾಲಿವುಡ್ ಸಿನಿಮಾಗಳನ್ನೇ ರೀಮೆಕ್ ಮಾಡಲಾಗುತ್ತಿದೆ. ಸದ್ಯ ತಮಿಳಿನಲ್ಲಿ ಅಜಿತ್ ನಟನೆಯ 'ವಿದಾಮುಯಾರ್ಚಿ' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ.
ಮಾಗಿಳ್ ತಿರುಮೇನಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಿದಾಮುಯಾರ್ಚಿ' ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅಜಿತ್ ಜೊತೆ ನಾಯಕಿಯಾಗಿ ತ್ರಿಷಾ ಮಿಂಚಿದ್ದಾರೆ. ಭರ್ಜರಿ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

'ವಿದಾಮುಯಾರ್ಚಿ' ಟೀಸರ್ ನೋಡಿ ಇದು ಹಾಲಿವುಡ್ 'ಬ್ರೇಕ್ ಡೌನ್' ಚಿತ್ರದ ರೀಮೇಕ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಧಿಕೃತವಾಗಿ ಚಿತ್ರವನ್ನು ರೀಮೆಕ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಬಹಳ ಸ್ಟೈಲಿಶ್ ಆಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ.
ಗಂಡ- ಹೆಂಡತಿ ಪ್ರವಾಸಕ್ಕೆ ಹೊರಡುತ್ತಾರೆ. ಆದರೆ ಮಾರ್ಗ ಮಧ್ಯೆ ಪತ್ನಿ ಕಣ್ಮರೆ ಆಗುತ್ತಾಳೆ. ಆಕೆಯನ್ನು ಹುಡುಕುವ ಹಾದಿಯಲ್ಲಿ ನಾಯಕ ಏನೆಲ್ಲಾ ಕಷ್ಟ ಪಡುತ್ತಾನೆ, ಯಾವ ರೀತಿಯ ಸಾಹಸ ಮಾಡುತ್ತಾನೆ ಎನ್ನುವುದು 'ವಿದಾಮುಯಾರ್ಚಿ' ಚಿತ್ರದ ಒನ್‌ಲೈನ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ, ರೆಜಿನಾ ಕಸೆಂದ್ರ, ಹುಮಾ ಖುರೇಶಿ ಸಹ ನಟಿಸಿದ್ದಾರೆ.
ಕಾಲಿವುಡ್‌ನಲ್ಲಿ ರಜನಿಕಾಂತ್, ವಿಜಯ್ ಬಳಿಕ ಬಹಳ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್. ಆತನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತವೆ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ, ತನ್ನ ಸಿನಿಮಾ ಪ್ರಚಾರವನ್ನು ಮಾಡದ ಅಜಿತ್ ತೆರೆಮೇಲೆ ಮಾತ್ರ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಈ ಬಾರಿ 'ವಿದಾಮುಯಾರ್ಚಿ' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಟೀಸರ್ ನೋಡಿ ಇದು 'ಬ್ರೇಕ್ ಡೌನ್' ಚಿತ್ರದ ರೀಮೆಕ್ ಎನ್ನುತ್ತಿದ್ದಂತೆ ಸಾಕಷ್ಟು ಜನ ಆ ಚಿತ್ರ ನೋಡಲು ಆರಂಭಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಕಂಪ್ಲೀಟ್ ಸಿನಿಮಾ ಇದೆ. ಅಜೆರ್ಬೈಜಾನ್ ದೇಶದಲ್ಲಿ 'ವಿದಾಮುಯಾರ್ಚಿ' ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಕೆಲ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ಅವಘಡಗಳು ಸಂಭವಿಸಿತ್ತು. ಅದರ ಮೇಕಿಂಗ್ ವೀಡಿಯೋಗಳು ವೈರಲ್ ಆಗಿದ್ದು ಗೊತ್ತೇಯಿದೆ.
ಅಜಿತ್ ಹಾಗೂ ತ್ರಿಷಾ ಈಗಾಗಲೇ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 'ಜಿ', 'ಕಿರೀಡಂ', 'ಮಂಗಾತ' ಹಾಗೂ 'ಎನ್ನೈ ಅರಿಂದಾಲ್' ಬಳಿಕ ಇದೀಗ 'ವಿದಾಮುಯಾರ್ಚಿ' ಚಿತ್ರದಲ್ಲಿ ಜೋಡಿ ಜೊತೆಯಾಗಿದೆ. ಬಹಳ ಹಿಂದೆಯೇ ಇದು ಹಾಲಿವುಡ್ ಸಿನಿಮಾ ರೀಮೆಕ್ ಎನ್ನುವ ಗುಸುಗುಸು ಶುರುವಾಗಿತ್ತು. ಟೀಸರ್ ನೋಡಿದ ಮೇಲೆ ಅದು ನಿಜ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
1997ರಲ್ಲಿ ಬಂದಿದ್ದ ಹಾಲಿವುಡ್‌ನ 'ಬ್ರೇಕ್‌ಡೌನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಜೊನಾಥನ್ ಮೊಸ್ಟೊವ್ ನಿರ್ದೇಶನದ ಚಿತ್ರದಲ್ಲಿ ಕರ್ಟ್ ರಸ್ಸೆಲ್ ಹಾಗೂ ಕ್ಯಾಥ್ಲೀನ್ ಕ್ವಿನ್ಲಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
'ವಿದಾಮುಯಾರ್ಚಿ' ಜೊತೆಗೆ ಅಜಿತ್ ನಟನೆಯ 'ಗುಡ್‌ಬ್ಯಾಡ್ ಅಗ್ಲಿ' ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ವರ್ಷವೇ ಈ ಸಿನಿಮಾ ಕೂಡ ತೆರೆಗೆ ಬರಲಿದೆ.


Click it and Unblock the Notifications











