ರಾಕಿಂಗ್ ಸ್ಟಾರ್ ಯಶ್ ಬಗ್ಗೆ ತಮಿಳು ನಟ ಶಿವಕಾರ್ತಿಕೇಯನ್ ಮಾತಿಗೆ ಚಪ್ಪಾಳೆ
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. 'KGF' ಸರಣಿ ಸಿನಿಮಾಗಳಿಂದ ಯಶ್ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದರು. ಇವತ್ತು ಬಾಲಿವುಡ್ ಪ್ರೇಕ್ಷಕರಿಗೂ ರಾಕಿಭಾಯ್ ಚಿರಪರಿಚಿತ. ಹೊರರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದೆ.
'KGF' ಸರಣಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲಿಸಿಕೊಂಡಿದ್ದೇ ಯಶ್. ಇದನ್ನು ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದರೂ ಒಪ್ಪುತ್ತಾರೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಏನೋ ದೊಡ್ಡದಾಗಿ ಸದ್ದು ಮಾಡುತ್ತದೆ ಎನ್ನುವ ಸುಳಿವು ತಂಡಕ್ಕೆ ಸಿಕ್ಕಿತ್ತು. ಫಸ್ಟ್ ಟ್ರೈಲರ್ ನೋಡಿದ ಮೇಲೆ ಚಿತ್ರತಂಡಕ್ಕೆ ಮತ್ತಷ್ಟು ಭರವಸೆ ಬಂದಿತ್ತು. ಕೂಡಲೇ ಯಶ್ ಪ್ಯಾನ್ ಇಂಡಿಯಾ ಕನಸು ಕಂಡರು. ನನಸು ಮಾಡಿಕೊಂಡರು.

ರಾಕಿಂಗ್ ಸ್ಟಾರ್ ಪ್ರಯತ್ನದ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ತಾನು ಬೆಳೆಯುವುದರ ಜೊತೆಗೆ ಕನ್ನಡ ಚಿತ್ರರಂಗವನ್ನು ಪರಭಾಷಿಕರು ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದ್ದು ಯಶ್ ಎಂದು ಕೊಂಡಾಡಿದ್ದಾರೆ. ತಮಿಳು ನಟ ಶಿವಕಾರ್ತಿಯನ್ ಇದೇ ಮಾತನ್ನು ಹೇಳಿದ್ದಾರೆ. ಅವರ ಮಾತುಗಳು ಈಗ ವೈರಲ್ ಆಗುತ್ತಿದೆ. ಯಶ್ ನನಗೆ ಪ್ರೇರಣೆ ಎಂದು 'ಅಮರನ್' ಸಿನಿಮಾ ನಟ ಹೇಳಿರುವುದು ಗಮನ ಸೆಳೆಯುತ್ತಿದೆ.
ಗೋವಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2024ರ ವೇದಿಕೆಯಲ್ಲಿ ತಮಿಳು ನಟ ಶಿವಕಾರ್ತಿಕೇಷನ್ ಭಾಗಿ ಆಗಿದ್ದರು. ಈ ವೇಳೆ ವೇದಿಕೆ ಮೇಲೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯಶ್ ಬಗ್ಗೆ ಕೇಳಿದ ಪ್ರಶ್ನೆಗೆ "ಕನ್ನಡ ಚಿತ್ರರಂಗದಲ್ಲಿ ಯಶ್ ಮಾಡಿದ್ದು ಅಸಾಮಾನ್ಯವಾದದ್ದು. KGF-1 ಬಂದಾಗ ಅದು ಕನ್ನಡ ಚಿತ್ರರಂಗದ ಗೆಲುವಾಗಿತ್ತು. KGF-2 ಭಾರತ ಚಿತ್ರರಂಗದ ಗೆಲುವು. ಯಶ್ ತಾವು ಮಾತ್ರ ದೊಡ್ಡಮಟ್ಟಕ್ಕೆ ಬೆಳೆಯಲಿಲ್ಲ. ಇಂಡಸ್ಟ್ರಿಯನ್ನು ಕೊಂಡೊಯ್ದರು. ನಾನು ಯಶ್ ಅವರನ್ನು ಪ್ರಶಂಸಿಸುತ್ತೇನೆ. ಅವರಿಗೆ ಶುಭವಾಗಲಿ" ಎಂದು ಹೇಳಿದ್ದಾರೆ.
ಯಶ್ ಬಗ್ಗೆ ಶಿವಕಾರ್ತಿಕೇಯನ್ ಮಾತಿಗೆ ನೆರೆದಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಸದ್ಯ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನಯನತಾರ, ಹುಮಾ ಖುರೇಶಿ ಸೇರಿದಂತೆ ಘಟಾನುಘಟಿ ಕಲಾವಿದರು 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿಯಾರ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಮುಂಬೈ ಶೆಡ್ಯೂಲ್ ಚಿತ್ರೀಕರಣದಲ್ಲಿ ಆಕೆ ಕೂಡ ಭಾಗವಹಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಿದೆ.
'ಟಾಕ್ಸಿಕ್' ಸಿನಿಮಾ ಮುಹೂರ್ತದ ಬಳಿಕ ಯಾವುದೇ ಅಪ್‌ಡೇಟ್ ಸಿಗಲಿಲ್ಲ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಈ ಬಾರಿ ಬರೀ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. 'ಟಾಕ್ಸಿಕ್' ಜೊತೆಗೆ ರಾಮಾಯಣ ಚಿತ್ರವನ್ನು ಯಶ್ ನಿರ್ಮಿಸಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.


Click it and Unblock the Notifications











