Cauvery issue: "ಮುಕ್ಕಾಲು ಭಾಗ ಕಾವೇರಿ ನೀರು ತಮಿಳುನಾಡು ಪಾಲು.. ಬೆಂಗಳೂರಿಗೆ ಕಾವೇರಿ ನೀರೇ ಬೇಕಾ?": ನಟಿ ಕಸ್ತೂರಿ ಆಕ್ರೋಶ
ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದ ನೀರಿನ ಅಭಾವ ಉಂಟಾಗಿದೆ. ರಾಜ್ಯಕ್ಕೆ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವಂತಹ ಅನಿವಾರ್ಯತೆ ಎದುರಾಗಿದೆ. ನೀರು ಇಲ್ಲದಿದ್ದರು ನೀರು ಬಿಡುವಂತೆ ತಮಿಳುನಾಡು ಪಟ್ಟು ಹಿಡಿದಿದೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೀತು. ಬೆಂಗಳೂರು ಬಂದ್, ಕರ್ನಾಟಕ ಬಂದ್ ನಡೆಸಿ ಹೋರಾಟ ಮಾಡಲಾಯಿತು. ಕಾವೇರಿ ಹೋರಾಟಕ್ಕೆ ಚಿತ್ರರಂಹಗ ಕೂಡ ಬೆಂಬಲ ಸೂಚಿಸಿತ್ತು. ಕರ್ನಾಟಕ ಬಂದ್ ಪ್ರತಿಭಟನೆ ಧರಣಿಯಲ್ಲಿ ಶಿವರಾಜ್‌ಕುಮಾರ್, ದರ್ಶನ್, ಉಪೇಂದ್ರ, ಧ್ರುವ ಸರ್ಜಾ ಸೇರಿದಂತೆ ಹಲವು ಭಾಗಿ ಆಗಿದ್ದರು.

ಅಷ್ಟೆಲ್ಲಾ ಹೋರಾಟ ಮಾಡಿದರೂ ಕಾವೇರಿ ನೀರು ನಿರ್ವಹಣಾ ಸಮಿತಿ ಅಕ್ಟೋಬರ್ 31ರವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಹೇಳಿದೆ. ಇನ್ನು ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ತಮಿಳು ನಟಿ ಕಸ್ತೂರಿ ಮಾತನಾಡಿದ್ದಾರೆ. ಇದೆಲ್ಲಾ ಬರೀ ರಾಜಕೀಯ ಗಿಮಿಕ್ ಅಷ್ಟೇ ಎಂದಿದ್ದಾರೆ. ಒಪ್ಪಂದದ ಪ್ರಕಾರ ಕಾವೇರಿ ನೀರಿನ ಶೇಕಡ 75% ಪಾಲು ತಮಿಳುನಾಡಿಗೆ ಸೇರಬೇಕು ಎಂದಿದ್ದಾರೆ.
ಗಲಾಟಾ ವಾಯ್ಸ್ ಯುಟ್ಯೂಬ್ ಸಂದರ್ಶನದಲ್ಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ನಟಿ ಕಸ್ತೂರಿ ಮಾತನಾಡಿದ್ದಾರೆ. "ನನಗೆ ಗೊತ್ತಿರುವಂತೆ 200 ವರ್ಷಗಳಿಂದ ಕರ್ನಾಟಕ ಇದೇ ರೀತಿ ಮೊಂಡಾಟ ಆಡುತ್ತಿದೆ. ಇದು ಇಂದು ನಿನ್ನೆಯ ವಿಷಯವಲ್ಲ. ಮೈಸೂರು ಸಂಸ್ಥಾನ ಹಾಗೂ ಮದ್ರಾಸ್ ಪ್ರೆಸಿಡೆನ್ಸಿ ನಡುವೆಯೂ ಇಂತಹ ಚರ್ಚೆ ನಡೆದಿತ್ತು. ಆಗಲೇ ತೀರ್ಪು ಕೊಟ್ಟಿದ್ದಾರೆ. ಮೇಲ್ಭಾಗದಲ್ಲಿರುವ ರಾಜ್ಯಕ್ಕೆ ನೀರಿನ ಮೇಲೆ ಹಕ್ಕು ಕಮ್ಮಿ ಎಂದು"
"ಎಲ್ಲಿ ನದಿ ಹುಟ್ಟುತ್ತದೋ ಅಲ್ಲಿನವರಿಗೆ ಹಕ್ಕು ಕಮ್ಮಿ. ಏಕಂದರೆ ನದಿ ಒಂದೇ ಕಡೆ ಉಕ್ಕಿ ಹರಿಯುವುದಿಲ್ಲ. ಒಂದು ಕಡೆ ಹುಟ್ಟಿದ ನದಿ ಮಳೆ ನೀರನ್ನು ಸೇರಿಸಿಕೊಳ್ಳುತ್ತಾ ಸಾಗಿ ಬರುತ್ತದೆ. ಅಲ್ಲಿಂದ ಮುಂದೆ ಬೇರೆ ಬೇರೆ ನದಿಗಳು ಬಂದು ಸೇರಿ ದೊಡ್ಡದಾಗಿ ಸಮುದ್ರದ ಕಡೆ ಸಾಗುತ್ತದೆ. ನದಿ ಅನ್ನೋದು ಜೀವ ಸಂಕುಲ, ಮಣ್ಣು ಮಾತ್ರವಲ್ಲ. ಸಮುದ್ರಕ್ಕೂ ಸ್ವಂತ. ಸಮುದ್ರಕ್ಕೆ ಹೋಗಿ ಸೇರಿದಾಗಲೇ ಜೀವನದಿಯ ಜೀವ ಉಳಿಯುತ್ತದೆ"
"ಇವತ್ತು ಕಾವೇರಿ ನೀರು ಎಷ್ಟು ಕಡೆ ನಿಂತ ನೀರಾಗಿದೆ. ಅಣೆಕಟ್ಟು ಕಟ್ಟಿ ಒಂದು ನದಿಯನ್ನು ತಡೆಯುತ್ತಿರುವುದೇ ಇದಕ್ಕೆ ಕಾರಣ. ವ್ಯವಸಾಯಕ್ಕಾಗಿ ಅಣೆಕಟ್ಟು ಬೇಕು. ಆದರೆ ನಮಗೆ ಮಳೆ ಆಗಲಿಲ್ಲ ಎಂದು ಹೇಳಿ ಪದೇ ಪದೇ ಕ್ಯಾತೆ ತೆಗೆಯುವವರಿಗೆ ಇದರ ಬಗ್ಗೆ ಗೊತ್ತಾಗಬೇಕು. ಕರ್ನಾಟಕದಲ್ಲಿರುವ ರಾಜಕಾರಣಿಗಳು ಅಲ್ಲಿನ ಜನರನ್ನು ಯಾಮಾರಸುತ್ತಿದ್ದಾರೆ. ಚಿತ್ರರಂಗದವರಿಗೂ ಇದರ ಬಗ್ಗೆ ಗೊತ್ತಿಲ್ಲ ಎನಿಸುತ್ತದೆ. ಅನಂತ್‌ನಾಗ್, ಶಿವಣ್ಣ, ಉಪೇಂದ್ರ ಮಾತನಾಡಿದ್ದು ನಾನು ಹೇಳಿದೆ"
"ಕಲಾವಿದರು ಕೂಡ ಕಾವೇರಿ ನಮ್ಮ ಹಕ್ಕು ಎಂದುಕೊಂಡಿದ್ದಾರೆ. ಕಾವೇರಿ ವಿಚಾರವಾಗಿ ನಾವು ಮೊದಲಿಗೆ ಹೋದಾಗ 75% ತಮಿಳುನಾಡಿಗೆ 25% ಕರ್ನಾಟಕಕ್ಕೆ ಎಂದು ಒಪ್ಪಂದವಾಯಿತು. ಈ ರೀತಿ ಯಾಕೆ ಒಪ್ಪಂದ ಆಯಿತು ಎನ್ನುವ ಮಾಹಿತಿ ಕೂಡ ಅವರ ಬಳಿ ಇಲ್ಲ. ಕರ್ನಾಟಕದಲ್ಲಿ 36 ದೊಡ್ಡ ನದಿಗಳಿವೆ. ಆದರೆ ಕಾವೇರಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಬೇಕು ಎಂದು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಳಿದ್ದಾರೆ"
"ಯಾಕಂದರೆ ಆ ರೀತಿ ಹೇಳಿದರೆ ಮಾತ್ರ ಕೇಳೊಕೆ ಚೆನ್ನಾಗಿರುತ್ತದೆ. ಸಣ್ಣ ನದಿ ಬಗ್ಗೆ ಹೇಳದೇ ಮೆನೆ ಮನೆಗೂ ಕಾವೇರಿ ನೀರು ಬರುತ್ತದೆ ಎಂದು ಹೇಳಿ ಬಿಲ್ಡಪ್ ಕೊಟ್ಟು ಇವತ್ತು ಬೆಂಗಳೂರಿಗೆ ಕಾವೇರಿ ನೀರೇ ಆಧಾರ ಎನ್ನುವಂತಾಯಿತು. ಇದು ಎಂತಹ ಹುಚ್ಚುತನ. ಅಲ್ಲಿ ಎಷ್ಟು ನದಿ, ಹೊಳೆಗಳಿವೆ. ಅದೆಲ್ಲ ಬಿಡಿ. ಬೆಂಗಳೂರಿನಲ್ಲೇ ಎಷ್ಟು ಕೆರೆಗಳಿವೆ ಗೊತ್ತಾ?"
"ಬೆಂಗಳೂರಿನಲ್ಲಿರುವ ಕೆರೆಗಳೆಲ್ಲಾ ಇವತ್ತು ಹಾಳಾಗಿದೆ. ಅಲ್ಲಿರೋ ಕೆರೆ ನೀರಲ್ಲಿ ಬೆಂಕಿ ಹಾಕಿದರೆ ಹೊತ್ತಿ ಉರಿಯುತ್ತದೆ. ಒಂದು ನಾಲ್ಕು ಕೆರೆ ಇದೆ ಬೆಂಗಳೂರಿನಲ್ಲಿ ಅವೆಲ್ಲಾ ಈ ರೀತಿ ಇವೆ. ಒಂದು ಕೊಳಕಾಗಿದೆ. ಇನ್ನೊಂದು ಬೆಂಕಿ ಹೊತ್ತಿಕೊಳ್ಳುತ್ತೆ. ಮತ್ತೊಂದರಲ್ಲಿ ನೊರೆ ಬರುತ್ತದೆ. ಬೆಳಂದೂರು ಕೆರೆನೋ ಯಾವ್ದೋ? ಅಲ್ಲಿ ಕೆಮಿಕಲ್ ಎಲ್ಲಾ ಸೇರಿ ನೊರೆ ಬರುತ್ತದೆ. ಹಾಗಾಗಿ ಕೆರೆಗಳಿಂದ ಅವರಿಗೆ ಕುಡಿಯುವ ನೀರು ಸಿಗುತ್ತಿಲ್ಲ"
"ಬೆಂಗಳೂರಿಗೆ ಕುಡಿಯಲು ಕಾವೇರಿ ನೀರು ಕೊಟ್ಟರೆ ತಮಿಳುನಾಡಿನಲ್ಲಿ ನಾಲಿಗೆ ಚಾಚಿಕೊಂಡು ನಿಲ್ಲೋಕ್ಕಾಗುತ್ತಾ? ಎಂತಹ ಪಾಪ ಮಾಡುತ್ತಿದ್ದಾರೆ. ಕಾನೂನೂನಾತ್ಮಕವಾಗಿಯೂ ನ್ಯಾಯಯುವಾಗಿಯೂ ಇದು ಮೋಸ. ರಾಜಕೀಯ ಎನ್ನುವ ಒಂದೇ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಚಿತ್ರರಂಗದವರ ಬಗ್ಗೆ ನಾನು ಮಾತನಾಡಲ್ಲ. ಯಾಕಂದರೆ ಅವರಿಗೆ ಎಲ್ಲರೂ ಬೇಕು. ಅವರು ಬಂದು 'ಜೈಲರ್' ಚಿತ್ರದಲ್ಲಿ ನಟಿಸ್ತಾರೆ. ನಮ್ಮವರು ಹೋಗಿ ಅಲ್ಲಿ ನಟಿಸ್ತಾರೆ. ಕಲಾವಿದರು ಸರ್ಕಾರ ಹಾಗೂ ಜನರ ಪರವಾಗಿ ಯಾಮಾರುವವರು ಗುಂಪು ಎಂದು ನಾನು ಹೇಳ್ತೀನಿ. ಜನರು ಸಂಪೂರ್ಣವಾಗಿ ಯಾಮಾರುವ ಗುಂಪು. ಯಾಕಂದರೆ ಜನರ ನೀರಿನ ದಾಹವನ್ನು ತೀರಿಸುವುದು ಕಾವೇರಿ ಮಾತ್ರ ಎಂದು ನಂಬಿಸಿರುವುದು ರಾಜಕೀಯ" ಎಂದು ನಟಿ ಕಸ್ತೂರಿ ಹೇಳಿದ್ದಾರೆ.


Click it and Unblock the Notifications










