"ಬಡ್ಡಿ ಸಮೇತ ವಾಪಸ್ ಬರುತ್ತೆ"; ನಟ ಧನುಷ್‌ಗೆ ತಿವಿದ ಲೇಡಿ ಸೂಪರ್ ಸ್ಟಾರ್
ಕಾಲಿವುಡ್‌ನಲ್ಲಿ ನಯನತಾರಾ ಹಾಗೂ ಧನುಷ್ ನಡುವಿನ ಕಾಪಿರೈಟ್ ವಿವಾದ ಭಾರೀ ಸದ್ದು ಮಾಡ್ತಿದೆ. ದಿನದಿಂದ ದಿನಕ್ಕೆ ಈ ವಿಚಾರ ದೊಡ್ಡದಾಗಿ ಚರ್ಚೆ ಹುಟ್ಟಾಕುತ್ತಿದೆ. ನಯನತಾರ ವಿರುದ್ಧ ಧನುಷ್ ಸಿವಿಲ್ ಮೊಕದ್ದಮೆ ಕೂಡ ದಾಖಲಿಸಿದ್ದಾರೆ. ಇದೆಲ್ಲದರ ನಡುವೆ ಧನುಷ್ ವೈಯಕ್ತಿಕ ಜೀವನದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನಟ ಧನುಷ್ ಪತ್ನಿ ಐಶ್ವರ್ಯಗೆ ಡಿವೋರ್ಸ್ ನೀಡಿದ್ದರು. ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಎರಡು ದಿನಗಳ ಹಿಂದೆ ಅರ್ಜಿ ವಿಚಾರಣೆ ನಡೆದು ಚೆನ್ನೈ ಫ್ಯಾಮಿಲಿ ಕೋರ್ಟ್ ಡಿವೋರ್ಸ್ ಮಂಜೂರು ಮಾಡಿದೆ. ಇದೀಗ ಅಧಿಕೃತವಾಗಿ ಇಬ್ಬರೂ ದೂರಾಗಿದ್ದಾರೆ.

ಒಂದ್ಕಡೆ ನಯನತಾರ ಜೊತೆಗಿನ ವಿವಾದದ ನಡುವೆಯೇ ಧನುಷ್ ವಿಚ್ಛೇದನ ವಿಚಾರ ಸುದ್ದಿ ಆಗುತ್ತಿದೆ. ಹಾಗಾಗಿ ನಯನತಾರ ಪರೋಕ್ಷವಾಗಿ ಧನುಷ್ ಅವರನ್ನು ಕುಟುಕುವ ಪ್ರಯತ್ನ ಮಾಡಿದ್ದಾರೆ. ಕರ್ಮದ ಪಾಠ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಧನುಷ್- ಐಶ್ವರ್ಯ ಡಿವೋರ್ಸ್ ಹಿನ್ನೆಲೆಯಲ್ಲೇ ನಯನ್ ಈ ಪೋಸ್ಟ್ ಮಾಡಿದ್ದಾರೆ ಎಂದು ಚರ್ಚೆ ನಡೀತಿದೆ.
ಯಾರಿಗಾದರೂ ತಿರುಗೇಟು ನೀಡಲು ಈ ಗೂಡಾರ್ಧ ಪೋಸ್ಟ್‌ಗಳನ್ನು ಮಾಡುವುದು ಕಾಮನ್ ಆಗಿದೆ. ಸನ್ನಿವೇಶಕ್ಕೆ ತಕ್ಕಂತೆ ಕೆಲ ಕೋಟ್‌ಗಳನ್ನು ಪೋಸ್ಟ್ ಮಾಡುವುದನ್ನು ಜನ ಕಲಿತಿದ್ದಾರೆ. ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪುವಂತೆ ಮಾಡುತ್ತಾರೆ. ನಯನತಾರ ಕೂಡ ಈಗ ಅದನ್ನೇ ಮಾಡಿದ್ದಾರೆ ಎಂದು ತಮಿಳು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ.

ನಯತಾರ ಪೋಸ್ಟ್‌ನಲ್ಲಿ ಏನಿದೆ ಎನ್ನುವುದುನ್ನು ನೋಡುವುದಾದರೆ "ನೀವು ಸುಳ್ಳಿನಿಂದ ಇನ್ನೊಬ್ಬರ ಜೀವನ ಹಾಳು ಮಾಡಿದರೆ, ಅದನ್ನು ಸಾಲವಾಗಿ ತೆಗೆದುಕೊಂಡಂತೆ, ಅದು ನಿಮಗೆ ಬಡ್ಡಿ ಸಮೇತ ವಾಪಸ್ ಬರುತ್ತದೆ" ಎನ್ನುವ ಕೋಟ್ ಅನ್ನು ಹಂಚಿಕೊಂಡಿದ್ದಾರೆ. ಧನುಷ್ ನೀನು ನನಗೆ ತೊಂದರೆ ಕೊಡಲು ಬಂದೆ, ಆದರೆ ಕರ್ಮ ನೀನೆ ಅನುಭವಿಸುವಂತಾಗಿದೆ ಎಂದು ನಯನತಾರ ಹೇಳಿದಂತೆ ಕೆಲವರು ಇದನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ.
ಇನ್ನು ಧನುಷ್ ಹಾಗೂ ನಯನತಾರಾ ಕಾಪಿರೈಟ್ ವಿವಾದ ಏನು ಎನ್ನುವುದು ಗೊತ್ತೇಯಿದೆ. ಲೇಡಿ ಸೂಪರ್ ಸ್ಟಾರ್ ತಮ್ಮ ಮದುವೆಯ ಚಿತ್ರಣ ಹಾಗೂ ಪ್ರಸಾರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಿಕೊಂಡಿದ್ದರು. ನಯನ್- ವಿಘ್ನೇಶ್ ಮದುವೆಯನ್ನು ಸೆರೆಹಿಡಿದು ಅದಕ್ಕೆ ಡಾಕ್ಯುಮೆಂಟರಿ ರೂಪ ಕೊಡಲಾಗಿದೆ. ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಅದು ಸ್ಟ್ರೀಮಿಂಗ್ ಆಗುತ್ತಿದೆ.
ಅಂದಹಾಗೆ ಧನುಷ್ ನಿರ್ಮಾಣದ 'ನಾನುಂ ರೌಡಿತಾನ್' ಚಿತ್ರದಲ್ಲಿ ನಯನತಾರ ನಟಿಸಿದ್ದರು. ಆ ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಲವ್ವಾಗಿತ್ತು. ಇದೇ ವಿಚಾರವನ್ನು ನಯನತಾರಾ ಡಾಕ್ಯುಮೆಂಟರಿಯಲ್ಲಿ ಪ್ರಸ್ತಾಪಿಸಲಾಗಿದೆ. ಹಿನ್ನೆಲೆಯಲ್ಲಿ 'ನಾನುಂ ರೌಡಿತಾನ್' ಚಿತ್ರದ ಮೇಕಿಂಗ್ ವೀಡಿಯೋ ಬಳಸಿಕೊಳ್ಳಲಾಗಿದೆ. ವಿಕ್ಕಿ-ನಯನ್ ಆತ್ಮೀಯ ಕ್ಷಣಗಳನ್ನು ಅದರಲ್ಲಿ ನೋಡಬಹುದು.
ನಯನತಾರ ತಮ್ಮ ಡಾಕ್ಯುಮೆಂಟರಿಯನ್ನು 50 ಕೋಟಿ ರೂ.ಗೆ ಮಾರಿಕೊಂಡಿದ್ದಾರೆ. ಆದರೆ ನಮ್ಮ ಸಿನಿಮಾ ಮೇಕಿಂಗ್ ವೀಡಿಯೋ ಬಳಸಿಕೊಂಡಿದ್ದಾರೆ. ಅದಕ್ಕಾಗಿ ಯಾವುದೇ ಅನುಪತಿ ಪಡೆದಿಲ್ಲ ಎನ್ನುವುದು ಧನುಷ್ ಆರೋಪ. ನಾವು ಅನುಮತಿ ಕೇಳಿದೆವು. ಅವರು ಕೊಡಲಿಲ್ಲ ಎನ್ನುವುದು ನಯನ್ ಸ್ಪಷ್ಟನೆ. ಕಾಪಿರೈಟ್ ಉಲ್ಲಂಘನೆ ಆರೋಪ ಮಾಡಿ ಧನುಷ್ ಕೋರ್ಟ್ ಮೆಟ್ಟಿಲೇರಿದ್ದರು. ಲೀಗಲ್ ನೋಟಿಸ್ ನೀಡಿದ್ದರು.
ನಯನತಾರ ಸುದೀರ್ಘ ಪತ್ರ ಬರೆದು ಧನುಷ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ನಯನತಾರ ಡಾಕ್ಯುಮೆಂಟರಿ ಟ್ರೈಲರ್ ರಿಲೀಸ್ ಬೆನ್ನಲ್ಲೇ ಧನುಷ್ ಕೋರ್ಟ್ ಮೆಟ್ಟಿಲೇರಿದ್ದರು. ಟ್ರೈಲರ್‌ನಲ್ಲಿ 'ನಾನುಂ ರೌಡಿತಾನ್' ಮೇಕಿಂಗ್ ಸಣ್ಣ ಝಲಕ್ ಇತ್ತು. ಎರಡು ವರ್ಷದ ಹಿಂದೆಯೇ ನಾವು ಅನುಮತಿ ಕೇಳಿದ್ದೆವು. ಕೊಡಲಿಲ್ಲ, ಈಗ ನೋಟಿಸ್ ಕೊಡ್ತೀರಾ? ಎಂದು ಲೇಡಿ ಸೂಪರ್ ಸ್ಟಾರ್ ಪತ್ರದಲ್ಲಿ ಪ್ರಶ್ನಿಸಿದ್ದರು. ನಯನ್ ಹುಟ್ಟುಹಬ್ಬದ ದಿನ ಡಾಕ್ಯುಮೆಂಟರಿ ರಿಲೀಸ್ ಆಗಿತ್ತು. ಇದೀಗ ಕಾನೂನು ಹೋರಾಟ ನಡೀತಿದೆ.


Click it and Unblock the Notifications











