'ಕಂಗುವ' ಸೋಲಿಗೆ ಕಾಣದ ಕೈಗಳು ಕಾರಣ- ಸೂರ್ಯ ಪತ್ನಿ ಜ್ಯೋತಿಕಾ ಆರೋಪ...!
ಒಂದು ಚಿತ್ರವನ್ನು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಂಡು ಹೊರ ಬಂದ ನಂತರ ಕಥೆ-ಚಿತ್ರಕಥೆಯ ಬದಲು ಈ ಚಿತ್ರಕ್ಕೆ ನೀವು ಕೊಡುವ ಸ್ಟಾರ್ ಎಷ್ಟೆನ್ನುವ ಪರಿಪಾಠ ಹೆಚ್ಚಾಗಿದೆ. ವಿಮರ್ಶೆಯನ್ನು ಅರಗಿಸಿಕೊಳ್ಳುವ ಮನಸ್ಥತಿಯೇ ಇರದ ಅನೇಕರು, ತಮ್ಮ ಚಿತ್ರಕ್ಕೆ ಕನಿಷ್ಠ ಮೂರು ಸ್ಟಾರ್ ಆದರೂ ಕೊಡಲೇಬೇಕು ಎನ್ನುವ ಒತ್ತಡ ಹಾಕುತ್ತಾರೆ. ಎಲ್ಲವೂ ತಮ್ಮ ಪರವಾಗಿಯೇ ಬರಬೇಕು ಎಂದು ಬಯಸುತ್ತಾರೆ. ಇವರ ಈ ಬಯಕೆ ಈಡೇರದಿದ್ದರೆ ವಿಮರ್ಷಕರ ಮೇಲೆ ಕೆಂಡ ಕಾರುತ್ತಾರೆ. ಪ್ರೇಕ್ಷಕರ ಮೇಲೆಯೇ ಗೂಬೆಯನ್ನು ಕೂರಿಸುತ್ತಾರೆ. ಇದಕ್ಕೆ ಸೂರ್ಯ ಪತ್ನಿ ಮತ್ತು ಅಂದಕಾಲತ್ತಿಲ್‌ನ ಸ್ಟಾರ್ ನಾಯಕಿ ಜ್ಯೋತಿಕಾ ಸದ್ಯದ ಉದಾಹರಣೆ.
ಹೌದು, ಕೇವಲ ಪ್ರಚಾರಕ್ಕೆ ಮಾತ್ರ ಮಹತ್ವ ನೀಡಿ ಚಿತ್ರವನ್ನು ಖಿಚಡಿಯಂತೆ ಮಾಡಿದರೆ ಏನಾಗುತ್ತೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ಕಂಗುವ ಮಕಾಡೆ ಮಲಗಿದೆ. ಚಿತ್ರ ನೋಡಿದ ಪ್ರೇಕ್ಷಕರ ವರ್ಗ ಚಿತ್ರತಂಡದ ಮೇಲೆ ಕಿಡಿ ಕಾರುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಕುಸಿಯುತ್ತಿದೆ. ಕಾಲಿವುಡ್‌ನ ಬೇರೆ ಸ್ಟಾರ್ ಹೀರೋಗಳ ಅಭಿಮಾನಿ ಬಳಗ ಸೂರ್ಯ ಅವರನ್ನು ಗೇಲಿ ಮಾಡುತ್ತಿದೆ.

ಹೀಗೆ ಸಾಮಾಜಿಕ ಜಾಲತಾಣಗಳ ತುಂಬಾ ಪತಿ ದೇವರಿಗೆ ಈ ಪರಿ ಪೂಜೆ ಪುನಸ್ಕಾರ ನಡೆಯುತ್ತಿರುವುದನ್ನು ಕಂಡು ಕಂಗಾಲಾದ ಜ್ಯೋತಿಕಾ ಸದ್ಯ ಸುದೀರ್ಘವಾದ ಪತ್ರವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಗಂಡ ಸೂರ್ಯ ಅವರ ಸಾಹಸ ಮತ್ತು ಧೈರ್ಯವನ್ನು ಮೆಚ್ಚಿ ವಿಮರ್ಷಕರನ್ನು ಗುರಿಯಾಗಿಸಿದ್ದಾರೆ. ಕಂಗುವ ಚಿತ್ರವನ್ನು ಸೋಲಿಸಲು ಕಾಣದ ಕೈಗಳು ಪಣ ತೊಟ್ಟಿವೆ ಎಂದಿದ್ದಾರೆ.
ಹೌದು, ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜ್ಯೋತಿಕಾ, ತಮ್ಮ ಪತಿ ಸೂರ್ಯ ಅವರ ಸಾಹಸ ಮತ್ತು ಧೈರ್ಯವನ್ನು ಮೆಚ್ಚಿಕೊಂಡಿದ್ಧಾರೆ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ಧಾರೆ. ಇನ್ನು ನಾನು ಸೂರ್ಯ ಪತ್ನಿಯಾಗಿ ಅಲ್ಲ ಬದಲಿಗೆ ಸಾಮಾನ್ಯ ಪ್ರೇಕ್ಷಕಿಯಾಗಿ ಹೇಳುತ್ತಿದ್ದೇನೆ ಮೊದಲ ಅರ್ಧ ಘಂಟೆ ಚಿತ್ರ ಚೆನ್ನಾಗಿಲ್ಲ ಸೌಂಡ್ ತುಂಬಾ ಜಾಸ್ತಿ ಇತ್ತು ಎಂದು ಹೇಳಿರುವ ಜ್ಯೋತಿಕಾ ಪ್ರತಿಯೊಂದು ಭಾರತೀಯ ಚಿತ್ರದಲ್ಲಿ ಚಿಕ್ಕ ಪುಟ್ಟ ಲೋಪದೋಷಗಳು ಇದ್ದೇ ಇರುತ್ತವೆ ಅದೇ ರೀತಿ ಈ ತರಹದ ಪ್ರಯೋಗಾತ್ಮಕ ಚಿತ್ರದಲ್ಲಿ ಕೂಡ ತಪ್ಪಾಗಿದೆ, ಆದರೂ ಕೂಡ ನಡೆಯುತ್ತೆ ಯಾಕೆಂದರೆ ಮೂರು ಗಂಟೆಯ ಚಿತ್ರದಲ್ಲಿ ಕೇವಲ ಅರ್ಧ ಗಂಟೆ ಮಾತ್ರ ಅಸಹನೀಯವಾಗಿದೆ, ಉಳಿದಂತೆ ಚಿತ್ರ ಚೆನ್ನಾಗಿದೆ ಎಂದಿದ್ದಾರೆ. ಈ ತರಹದ ಛಾಯಾಗ್ರಹಣವನ್ನು ನಾನು ತಮಿಳು ಚಿತ್ರರಂಗದಲ್ಲಿಯೇ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕಂಗುವ ಚಿತ್ರದ ಕುರಿತು ನೆಗೆಟಿವ್ ರಿವ್ಯೂಗಳನ್ನು ಕೇಳಿ ನನಗೆ ಆಘಾತವಾಗಿದೆ ಎಂದಿರುವ ಜ್ಯೋತಿಕಾ, ಹಳೆಯ ಕಥೆಯನ್ನೊಂದಿರುವ ಚಿತ್ರಗಳಿಗೆ, ಮಹಿಳೆಯರನ್ನು ಕೀಳಾಗಿ ತೋರಿಸುವ ಚಿತ್ರಗಳಿಗೆ, ಡಬಲ್ ಮೀನಿಂಗ್ ಡೈಲಾಗ್‌ಗಳಿಂದ ತುಂಬಿ ತುಳುಕುವ ಚಿತ್ರಗಳಿಗೆ ಈ ತರಹದ ಅಭಿಪ್ರಾಯಗಳು ವ್ಯಕ್ತವಾಗಲ್ಲ ಎಂದಿದ್ದಾರೆ. ಅದ್ಧೂರಿಯಾಗಿ ನಿರ್ಮಾಣವಾದ ಕಂಗುವ ಚಿತ್ರದಲ್ಲಿ ಒಳ್ಳೆಯ ಅಂಶಗಳು ಯಾವು ಇಲ್ಲವೇ ಇಲ್ಲವಾ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಚಿತ್ರದ ದ್ವೀತಿಯಾರ್ಧದಲ್ಲಿ ಬರುವ ಮಹಿಳೆಯರ ಸಾಹಸಗಾಥೆ, ಹುಡುಗ ಮತ್ತು ಕಂಗುವ ನಡುವೆ ಇರುವ ಸ್ನೇಹ ಮತ್ತು ದ್ವೇಷ ಇದೆಲ್ಲವೂ ವಿಮರ್ಶೆ ಮಾಡುವಾಗ ನಿಮಗೆ ನೆನಪಾಗಲಿಲ್ಲ ಅನ್ಸುತ್ತೆ ಎಂದಿದ್ದಾರೆ.
ಮುಂದುವರೆದು ಈ ತರಹದ ವಿಮರ್ಶೆಗಳನ್ನು ನಂಬಬೇಕಾ, ಓದಬೇಕಾ ಎಂದು ಪ್ರಶ್ನೆ ಮಾಡಿರುವ ಜ್ಯೋತಿಕಾ, ಕಂಗುವ ಚಿತ್ರದ ಮೊದಲ ಪ್ರದರ್ಶನವೇ ಇನ್ನೂ ಮುಕ್ತಾಯವಾಗಿರಲಿಲ್ಲ ಆಗಲೇ ಚಿತ್ರ ಚೆನ್ನಾಗಿಲ್ಲ ಎಂದು ಪುಕಾರು ಹಬ್ಬಿಸಿದರು ಎಂದಿದ್ದಾರೆ. ಕಂಗುವ ಚಿತ್ರವನ್ನು ಸೋಲಿಸಲು ಹಲವು ಗುಂಪುಗಳು ಒಂದಾಗಿವೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ಧಾರೆ. ಇನ್ನು 3D ತಂತ್ರಜ್ಞಾನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಚಪ್ಪಾಳೆಗಳ ಸುರಿಮಳೆಯಾಗಬೇಕಿತ್ತು. ಚಿತ್ರತಂಡದ ಶ್ರಮಕ್ಕೆ ತಕ್ಕ ಬೆಲೆ ಸಿಗಬೇಕಿತ್ತು ಎಂದಿರುವ ಜ್ಯೋತಿಕಾ ಇಂತಹ ಅದ್ಭುತವನ್ನು ಸೃಷ್ಟಿಸಿದ್ದಕ್ಕೆ ಹೆಮ್ಮೆ ಪಡಿ ಎಂದು ಕಂಗುವ ತಂಡಕ್ಕೆ ಹೇಳಿದ್ದಾರೆ. ಕಾಲೆಳೆಯುವರು ಎಳೆಯಲಿ ಅವರಿಗೆ ಅದಷ್ಟೇ ಗೊತ್ತು, ಅವರಿಂದ ತಮಿಳು ಚಿತ್ರರಂಗ ಉದ್ಧಾರ ಆಗುವುದಿಲ್ಲ ಎಂದು ಕೂಡ ಜ್ಯೋತಿಕಾ ಹೇಳಿದ್ದಾರೆ.


Click it and Unblock the Notifications











