"ತ್ರಿಶಾಳನ್ನು ಕೆಲ ದಿನ ಮನೆಯಲ್ಲಿ ಕೂಡಿ ಹಾಕುವುದು ಒಳ್ಳೆದು"; ಬಹಿರಂಗ ವೇದಿಕೆಯಲ್ಲೇ ಪಾರ್ತಿಬನ್ ಆಕ್ರೋಶ
ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿವಾದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದೆ. ಇದೀಗ ತಮಿಳು ಸಿನಿಮಾ ತಾರೆಯರು ಈ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ನಡೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.
ವಿಜಯ್ ಹಾಗೂ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇದಕ್ಕೆ ಕಾರಣ ನಟಿ ತ್ರಿಶಾ ಎಂದು ಚರ್ಚೆ ಆಗ್ತಿದೆ. ಅದರ ಬೆನ್ನಲ್ಲೇ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ವೈರಲ್ ಆಗ್ತಿದೆ. ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ವಿಜಯ್ ಗೊತ್ತಿದ್ದು ಹೀಗೆ ಮಾಡ್ತಿದ್ದಾರಾ? ಗೊತ್ತಿಲ್ದೆ ಮಾಡ್ತಿದ್ದಾರಾ? ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಎಲ್ಲಾ ವದಂತಿಗಳಿಗೆ ತೆರೆ ಎಳೆಯಬೇಕು, ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕು ಎಂದು ವಿಜಯ್ ಹಾಗೂ ತ್ರಿಶಾ ಮದುವೆ ಸಮಾರಂಭದಕ್ಕೆ ಒಂದೇ ಕಾರ್ ಏರಿ ಬಂದು ಹೋಗಿದ್ದಾರೆ ಎನ್ನುವ ವಾದ ಕಡೆ ನಡೀತಿದೆ. ಆದರೆ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿ ಈ ರೀತಿ ಮಾಡುವುದು ಸರೀನಾ? ಇನ್ನು ಡಿವೋರ್ಸ್ ಆಗಿಲ್ಲ. ಸಂಗೀತಾ ಡಿವೋರ್ಸ್ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ವಿಚಾರಣೆ ನಡೆದಿಲ್ಲ. ಅಷ್ಟರಲ್ಲೇ ವಿಜಯ್, ತ್ರಿಶಾ ಹೀಗೆ ಮಾಡಿದ್ದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
ತಮಿಳು ನಿರ್ದೇಶಕ ಸಮುದ್ರಖನಿ ತಮ್ಮ ಆಪ್ತರ (ನಿರ್ದೇಶಕ ಬಾಲಾ) ಬಳಿ ಇದೇ ವಿಚಾರವಾಗಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗ್ತಿದೆ. "ಇದೇನು ಆಟನಾ? ಇಷ್ಟೆಲ್ಲಾ ಆಗಿರುವಾಗ ಅವರನ್ನು(ತ್ರಿಶಾ) ಹೊರಗೆ ಕರೆದುಕೊಂಡು ಹೋಗ್ತೀರಾ. ನಾಲ್ಕು ಗೋಡೆಗಳ ಮಧ್ಯೆ ಇಟ್ಟುಕೊಳ್ಳಬೇಕಿತ್ತು. ಯಾರ ಮೇಲೆ ಹೀಗೆ ಸೇಡು ತೀರಿಸಿಕೊಳ್ಳುತ್ತಿದ್ದೀಯಾ? "ಎಲ್ಲಾ ಚೆನ್ನಾಗಿ ನಡೀತ್ತಿತ್ತು. ಆದರೆ ಈಗ ಪಕ್ಷದ ಕಾರ್ಯಕರ್ತರೂ ಕೂಡ ಇದನ್ನು ಒಪ್ಪಲ್ಲ" ಎಂದು ಮಾತನಾಡಿದ್ದರು.
ಇದೀಗ ಮತ್ತೊಬ್ಬ ನಿರ್ದೇಶಕ, ನಟ ಪಾರ್ತಿಬನ್ ಬಹಿರಂಗ ವೇದಿಕೆಯಲ್ಲೇ ತ್ರಿಶಾ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ 'ಗಲಾಟ ಅವಾರ್ಡ್ಸ್' ಕಾರ್ಯಕ್ರಮ ನಡೆದಿದೆ. ಈ ವೇದಿಕೆಯಲ್ಲಿ ತ್ರಿಶಾ ಬಗ್ಗೆ ಪಾರ್ತಿಬನ್ ಅವರಿಗೆ ಪ್ರಶ್ನೆ ಎದುರಾಗಿದೆ. 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಕುಂದವೈ ಎಂಬ ಪಾತ್ರದಲ್ಲಿ ತ್ರಿಶಾ ನಟಿಸಿದ್ದರು. ಅದೇ ಚಿತ್ರದಲ್ಲಿ ಪಲುವೆಟ್ಟರಾಯರ್ ಎಂಬ ಪಾತ್ರದಲ್ಲಿ ಪಾರ್ತಿಬನ್ ಕೂಡ ಬಣ್ಣ ಹಚ್ಚಿದ್ದರು.
ವೇದಿಕೆಯಲ್ಲಿ ನಿರೂಪಕಿ "ನಿಮ್ಮ ಕುಂದವೈ ಬಗ್ಗೆ ಏನು ಹೇಳ್ತೀರಾ?" ಎಂದು ಪಾರ್ತಿಬನ್ ಅವರನ್ನು ಪ್ರಶ್ನಿಸಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿ "ಈ ಕುಂದವೈನ ಕೆಲ ದಿನ ಮನೆಯಲ್ಲಿ ಕೂಡಿ ಹಾಕಬೇಕು. ಅದೇ ಒಳ್ಳೆಯದು. ಮನೆಯಿಂದ ಹೊರಗೆ ಬರಲು ಬಿಡಬಾರದು" ಎಂದು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದೆ. ಕೆಲ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಪಾರ್ತಿಬನ್ ಇತ್ತೀಚೆಗೆ ನಟರಾಗಿ ಹೆಚ್ಚು ಗುರ್ತಿಸಿಕೊಂಡಿದ್ದಾರೆ.
'ದಾದಾ ಈಸ್ ಬ್ಯಾಕ್' ಎಂಬ ಕನ್ನಡ ಚಿತ್ರದಲ್ಲಿ ಕೂಡ ಪಾರ್ತಿಬನ್ ನಟಿಸಿದ್ದರು. ಕಳೆದ ವರ್ಷ ಬಂದ 'ಇಡ್ಲಿ ಕಡೈ' ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದರು. ಒಟ್ಟಾರೆ ಸಿನಿಮಾ ತಾರೆಯರೇ ವಿಜಯ್ ಹಾಗೂ ತ್ರಿಶಾ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದಕ್ಕೆಲ್ಲಾ ವಿಜಯ್ ಹಾಗೂ ತ್ರಿಶಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯಲಿದೆ. 250 ಕೋಟಿ ರೂ. ಜೀವನಾಂಶ ಕೊಡಲು ವಿಜಯ್ ಮುಂದಾಗಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











