ಅನ್ನಿಯನ್ ಹಿಂದಿ ರಿಮೇಕ್: ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ ರವಿಚಂದ್ರನ್
ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ 'ಅನ್ನಿಯನ್' ಹಿಂದಿ ರಿಮೇಕ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಸಿನಿಮಾ ಘೋಷಣೆ ಮಾಡಿದ ಮರುದಿನವೇ ಮೂಲ ಚಿತ್ರದ ನಿರ್ಮಾಪಕ ಹಿಂದಿ ರಿಮೇಕ್‌ಗೆ ವಿರೋಧ ವ್ಯಕ್ತಪಡಿಸಿದ್ದರು. 'ನನ್ನ ಅನುಮತಿ ಪಡೆಯದೇ ಸಿನಿಮಾ ಮಾಡಲು ಸಾಧ್ಯವಿಲ್ಲ' ಎಂದು ದೂರಿದ್ದರು.
ಆದರೆ ನಿರ್ದೇಶಕ ಶಂಕರ್, ''ಅನ್ನಿಯನ್ ಚಿತ್ರಕ್ಕೆ ಕಥೆ ರಚಿಸಿದ್ದು ನಾನು, ಬೇರೆ ಯಾರ ಒಪ್ಪಿಗೂ ಪಡೆಯುವ ಅಗತ್ಯ ನನಗಿಲ್ಲ'' ಎಂದು ವಾದಿಸಿದ್ದರು. ಇದರಿಂದ ಸಿಟ್ಟಿಗೆದ್ದಿರುವ ಅನ್ನಿಯನ್ ತಮಿಳು ಸಿನಿಮಾದ ನಿರ್ಮಾಪಕ ಆಸ್ಕರ್ ರವಿಚಂದ್ರನ್ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಿಂದಿ ರಿಮೇಕ್ ನಿರ್ಮಿಸಲು ಮುಂದಾಗಿರುವ ಜಯಂತಿಲಾಲ್ ಗಡಾ ವಿರುದ್ಧ ಕೋರ್ಟ್‌ನಲ್ಲಿ ದೂರು ನೀಡಲು ನಿರ್ಧರಿಸಿದ್ದು, ಕಾಪಿರೈಟ್ ಕಾಯಿದೆ ಅಡಿ ಚಿತ್ರಕ್ಕೆ ನಿರ್ಬಂಧ ಹೇರುವಂತೆ ಮನವಿ ಮಾಡಿದ್ದಾರೆ. ಮುಂದೆ ಓದಿ...

ಚಿತ್ರದ ಹಕ್ಕು ನನ್ನ ಬಳಿ ಇದೆ
ಈ ಕುರಿತು ಇ-ಟೈಮ್ಸ್ ಜೊತೆ ಮಾತನಾಡಿರುವ ನಿರ್ಮಾಪಕ ಆಸ್ಕರ್ ರವಿಚಂದ್ರನ್, ''ಶಂಕರ್ ಮತ್ತು ಜಯಂತಿಲಾಲ್ ಗಡಾ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ. ನನ್ನ ಒಪ್ಪಿಗೆಯಿಲ್ಲದೆ ಅವರು ಅನ್ನಿಯನ್ ರಿಮೇಕ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಆ ಚಿತ್ರದ ಹಕ್ಕನ್ನು ನಾನು ಹೊಂದಿದ್ದೇನೆ. ಮೂಲ ಚಿತ್ರಕ್ಕೆ ನಾನು ಲೇಖಕನಾಗಿರುವುದರಿಂದ ಬೇರೆ ಯಾವುದೇ ವ್ಯಕ್ತಿಗೆ ಅದರ ಮೇಲೆ ಹಕ್ಕಿಲ್ಲ." ಎಂದು ಮಾಹಿತಿ ನೀಡಿದ್ದಾರೆ.

ನಾನು ನೇಮಿಸಿಕೊಂಡ ನಿರ್ದೇಶಕ ಅವರು
ನಿರ್ಮಾಪಕ ರವಿಚಂದ್ರನ್ ಅವರ ಆರೋಪಗಳು ಆಧಾರರಹಿತ ಎಂದು ಶಂಕರ್ ಹೇಳಿದ್ದರು. ಚಿತ್ರದ ಕಥೆಗೆ ಅವರು ಹಕ್ಕುದಾದರಲ್ಲ ಎಂದು ನಿರ್ಮಾಪಕರು ಹೇಳಿಕೆಯನ್ನು ತಿರಸ್ಕರಿಸಿದರು. ಆ ಬಗ್ಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ "ಅವರು ಏನು ಬೇಕಾದರೂ ಹೇಳಬಹುದು, ಹೇಳಿಕೊಳ್ಳಲಿ. ಆದರೆ 'ಅನ್ನಿಯನ್' ನನ್ನ ಸಿನಿಮಾ ಎಂದು ಎಲ್ಲರಿಗೂ ತಿಳಿದಿದೆ. ಆ ಚಿತ್ರ ನಿರ್ದೇಶನ ಮಾಡಲಿ ಎಂದು ನಾನೇ ಶಂಕರ್ ಅವರನ್ನು ನೇಮಿಸಿಕೊಂಡೆ ಎನ್ನುವುದು ಗೊತ್ತಿರಲಿ'' ಎಂದಿದ್ದಾರೆ.

ಸೌತ್ ಫಿಲಂ ಚೇಂಬರ್‌ನಲ್ಲಿ ದೂರು
ಅನ್ನಿಯನ್ ಹಿಂದಿ ರಿಮೇಕ್ ವಿವಾದಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಆಸ್ಕರ್ ರವಿಚಂದ್ರನ್, ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಎಸ್‌ಐಎಫ್‌ಸಿಸಿ) ದೂರು ನೀಡಿದ್ದಾರೆ. "SIFCC, ನನಗೆ ಬೆಂಬಲ ನೀಡುತ್ತಿದೆ. ಮುಂಬೈನಲ್ಲಿ ಚಲನಚಿತ್ರ ಸಂಘದ ಜೊತೆ ಮಾತನಾಡಿರುವುದರಿಂದ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ನಿರ್ಮಾಪಕರು ಶಂಕರ್ ಅಲ್ಲ. ನನ್ನ ಜೊತೆ ಮಾತನಾಡಬೇಕಿರುವುದು ನಿರ್ಮಾಪಕ ಜಯಂತಿಲಾಲ್ ಗಡಾಜಿ'' ಎಂದಿದ್ದಾರೆ.

ಶಂಕರ್ ಏನು ಹೇಳಿದ್ದರು
ಆಸ್ಕರ್ ರವಿಚಂದ್ರನ್ ಆರೋಪಕ್ಕೆ ಈ ಹಿಂದೆಯೇ ಸ್ಪಷ್ಟನೆ ಕೊಟ್ಟಿದ್ದ ಶಂಕರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ''ಆಸ್ಕರ್ ರವಿಚಂದ್ರನ್ ಅವರು ಹೇಳಿರುವಂತೆ ಅನ್ನಿಯನ್ ಕಥೆ ಸುಜಾತ ಅವರದ್ದಲ್ಲ, ಅವರು ಕೇವಲ ಸಂಭಾಷಣೆ ಮಾತ್ರ ಬರೆದಿದ್ದಾರೆ. ಆ ಚಿತ್ರದ ಕಥೆ-ಚಿತ್ರಕಥೆ ನನ್ನದು. ಟೈಟಲ್ ಕಾರ್ಡ್‌ನಲ್ಲಿ ಕಥೆ-ಚಿತ್ರಕಥೆ-ನಿರ್ದೇಶಕ ಶಂಕರ್ ಎಂದು ಬರುತ್ತದೆ. ಸುಜಾತ ಅವರು ಕೇವಲ ಸಂಭಾಷಣೆ ಮಾತ್ರ ಮಾಡಿರುವುದು. ಅವರು ಮಾಡಿದ ಕೆಲಸಗಳಿಗೆ ತಕ್ಕ ಗೌರವ ಕೊಡಲಾಗಿದೆ. ಚಿತ್ರದ ಇತರೆ ಯಾವುದೇ ಕೆಲಸಗಳಲ್ಲಿಯೂ ಅವರ ಪಾತ್ರವಿಲ್ಲ. ಅನ್ನಿಯನ್ ಸಿನಿಮಾ ಆಧರಿಸಿ ಇನ್ನೊಂದು ಕಥೆ ರಚಿಸುವ ಹಕ್ಕು ನನಗಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ಯಾವುದೇ ಅಧಿಕಾರ ಇಲ್ಲ. ಅನ್ನಿಯನ್ ರಿಮೇಕ್ ಮಾಡುವ ಹಕ್ಕು ನಿಮಗೆ ಅಥವಾ ನಿಮ್ಮ ಘಟಕಕ್ಕೆ ಇಲ್ಲ. ಏಕೆಂದರೆ ಹಕ್ಕುಗಳನ್ನು ನಿಮಗೆ ಲಿಖಿತವಾಗಿ ನೀಡಿಲ್ಲ. ಸ್ಕ್ರಿಪ್ಟ್ ನಿಮ್ಮೊಂದಿಗೆ ಇದೆ ಎಂದು ಪ್ರತಿಪಾದಿಸಲು ಯಾವುದೇ ಆಧಾರಗಳಿಲ್ಲ'' ಎಂದು ಶಂಕರ್ ತಿರುಗೇಟು ಕೊಟ್ಟಿದ್ದರು.

2022ಕ್ಕೆ ಹಿಂದಿ ಸಿನಿಮಾ ಆರಂಭ
2005ರಲ್ಲಿ ಅನ್ನಿಯನ್ ಸಿನಿಮಾ ತೆರೆಕಂಡಿತ್ತು. ಶಂಕರ್ ನಿರ್ದೇಶಿಸಿದ್ದ ಈ ಚಿತ್ರವನ್ನು ವಿಶ್ವನಾಥ್ ರವಿಚಂದ್ರನ್ (ಆಸ್ಕರ್ ರವಿಚಂದ್ರನ್) ನಿರ್ಮಾಣ ಮಾಡಿದ್ದರು. ಮೂಲ ಚಿತ್ರದಲ್ಲಿ ವಿಕ್ರಂ ನಟಿಸಿದ್ದರು. ಸೈಕೋಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥೆಯಲ್ಲಿ ಅಂಬಿ, ರೆಮೋ, ಅನ್ನಿಯನ್ ಎಂಬ ಮೂರು ವಿಭಿನ್ನ ಪಾತ್ರಗಳನ್ನು ವಿಕ್ರಂ ನಿರ್ವಹಿಸಿದ್ದರು. ಈಗ ಇದೇ ಚಿತ್ರದ ಹಿಂದಿ ಅವತರಣಿಕೆ 2022ರಲ್ಲಿ ಆರಂಭವಾಗಲಿದೆ.


Click it and Unblock the Notifications











