ತಮಿಳು ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಗ್ರೀನ್ ಸಿಗ್ನಲ್: ಕಥೆ ಏನು ಗೊತ್ತಾ?
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುವ ಸುಳಿವು ಕೊಟ್ಟಿದ್ದಾರೆ. ಸದ್ಯ ನವೀನ್ ಪೊಲಿಶೆಟ್ಟಿ ಜೊತೆ ಇನ್ನು ಹೆಸರಿಡದ ಚಿತ್ರದಲ್ಲಿ ಸ್ವೀಟಿ ನಟಿಸ್ತಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಿನಿಮಾ ಶುರುವಾಗುವ ಬಗ್ಗೆ ಮಾಹಿತಿ ಸಿಕ್ಕಿದೆ.
ಒಂದ್ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದರು. 'ಬಾಹುಬಲಿ' ಸರಣಿ ನಂತರ ಸ್ವೀಟಿ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಆಗಿತ್ತು. ದೇಹದ ತೂಕ ಹೆಚ್ಚಾಗಿದ್ದೇ ಇದಕ್ಕೆ ಕಾರಣ ಎನ್ನಲಾಗತ್ತು. ಅಭಿಮಾನಿಗಳು ಮಾತ್ರ ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ. ಇದೀಗ ತೂಕ ಇಳಿಸಿಕೊಂಡು ಮತ್ತೆ ಸ್ವೀಟಿ ಮೋಡಿ ಮಾಡೋಕೆ ಬರುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ತೆಲುಗು ಜೊತೆಗೆ ತಮಿಳು ಸಿನಿಮಾಗಳಲ್ಲೂ ನಟಿಸೋಕೆ ಮುಂದಾಗಿದ್ದಾರೆ.
ತಮಿಳು ನಿರ್ದೇಶನದ ಎ. ಎಲ್ ವಿಜಯ್ ನಿರ್ದೇಶನದ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸೋದು ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕರೇ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

ವಿಜಯ್- ಅನುಷ್ಕಾ ಹ್ಯಾಟ್ರಿಕ್ ಚಿತ್ರ
ಮಂಗಳೂರಿನಲ್ಲಿ ಹುಟ್ಟಿಬೆಳೆದ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಅವಕಾಶ ಸಿಕ್ಕಾಗಲೆಲ್ಲಾ ತಮಿಳು ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ತಮಿಳು ನಿರ್ದೇಶಕ ಎ. ಎಲ್ ವಿಜಯ್ ನಿರ್ದೇಶನದಲ್ಲಿ ಅನುಷ್ಕಾ ಶೆಟ್ಟಿ ಹೊಸ ಸಿನಿಮಾ ಶುರುವಾಗಲಿದೆ. ಈ ವಿಚಾರವನ್ನು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಈ ಹಿಂದೆ ವಿಜಯ್ ನಿರ್ದೇಶನದ 'ದೈವ ತಿರುಮಗಳ್' ಹಾಗೂ 'ತಾಂಡವಂ' ಚಿತ್ರಗಳಲ್ಲಿ ಸ್ವೀಟಿ ನಟಿಸಿದ್ದರು. ಇದು ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ 3ನೇ ಸಿನಿಮಾ ಆಗಿದ್ದು ಸಂಕ್ರಾಂತಿ ವೇಳೆಗೆ ಸೆಟ್ಟೇರುವ ಸಾಧ್ಯತೆಯಿದೆ.

ಸ್ವೀಟಿ ಹೊಸ ಸಿನಿಮಾ ಕಥೆಯೇನು?
ಅನುಷ್ಕಾ ಶೆಟ್ಟಿ ನಟನೆಯ 49ನೇ ಚಿತ್ರ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎಂದು ಎ. ಎಲ್ ವಿಜಯ್ ಹೇಳಿದ್ದಾರೆ. ಸದ್ಯ ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಈ ಹಿಂದೆ 'ಅರುಂಧತಿ', 'ರುದ್ರಮ ದೇವಿ', 'ಭಾಗಮತಿ' ಸಿನಿಮಾಗಳಲ್ಲಿ ಕರಾವಳಿ ಚೆಲುವೆ ಪವರ್‌ಫುಲ್ ರೋಲ್‌ಗಳಲ್ಲಿ ಮಿಂಚಿದ್ದರು. ಈ ಚಿತ್ರದಲ್ಲೂ ಅನುಷ್ಕಾ ಶೆಟ್ಟಿ ಜಬರ್ದಸ್ತ್ ರೋಲ್‌ನಲ್ಲಿ ನಟಿಸುವ ಸುಳಿವು ಸಿಗುತ್ತಿದೆ. ತಮಿಳು ಜೊತೆಗೆ ಬೇರೆ ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ.

ಶೆಫ್ ರೋಲ್‌ನಲ್ಲಿ ಸ್ವೀಟಿ
'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ನಟಿಸುವ ಸಾಹಸ ಮಾಡಿದ್ದ ಅನುಷ್ಕಾ ಶೆಟ್ಟಿ ಮತ್ತೆ ತೂಕ ಇಳಿಸಿಕೊಳ್ಳಲು ಬಹಳ ಸರ್ಕಸ್ ಮಾಡಿದ್ದರು. ಆದರೆ ಏನೇ ಮಾಡಿದರೂ ಮೊದಲಿನ ಪಿಜಿಕ್ ವಾಪಸ್ ಪಡೆಯಲು ಸಾಧ್ಯವಾಗಿರಲಿಲ್ಲ. ಸದ್ಯ ನವೀಲ್ ಪೊಲಿಶೆಟ್ಟಿ ಜೊತೆ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸ್ವೀಟಿ ಹುಟ್ಟುಹಬ್ಬಕ್ಕೆ ಚಿತ್ರತಂಡದಿಂದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿತ್ತು. ಚಿತ್ರದಲ್ಲಿ ಶೆಫ್ ರೋಲ್‌ನಲ್ಲಿ ಅನುಷ್ಕಾ ಶೆಟ್ಟಿ ನಟಿಸ್ತಿದ್ದು, ತೂಕ ಇಳಿಸಿಕೊಂಡಂತೆ ಪೋಸ್ಟರ್‌ನಲ್ಲಿ ಕಾಣುತ್ತಿದೆ.

ಹಿಟ್ ಚಿತ್ರಗಳಲ್ಲಿ ನಟಿಸಿದ ಅನುಷ್ಕಾ
ಬೆಂಗಳೂರಿನಲ್ಲಿ ಕಾಲೇಜು ಮುಗಿಸಿ ಯೋಗ ಟೀಚರ್ ಆಗಿದ್ದ ಅನುಷ್ಕಾ ಶೆಟ್ಟಿ ನಂತರ ಚಿತ್ರರಂಗಕ್ಕೆ ಬಂದಿದ್ದರು. ಪುರಿ ಜಗನ್ನಾಥ್ ನಿರ್ದೇಶನದ 'ಸೂಪರ್' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಬಂದ ಸ್ವೀಟಿ ಹಿಂತಿರುಗಿ ನೋಡಲೇಯಿಲ್ಲ. ವಿಕ್ರಮಾರ್ಕುಡು, ಬಿಲ್ಲಾ, ಅರುಂಧರಿ, ಬಾಹುಬಲಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಸ್ವೀಟಿ ಸಿನಿಮಾ ಮಾಡಲಿ ಬಿಡಲಿ ಆಕೆಯ ಕ್ರೇಜ್ ಮಾತ್ರ ಇಂಚಿತ್ತೂ ಕಮ್ಮಿ ಆಗಿಲ್ಲ.


Click it and Unblock the Notifications











