ಮಡದಿ, ಮಕ್ಕಳ ಜೊತೆ 'ಕನ್ನಿಮಾ' ಎಂದು ಕುಣಿದ ಖ್ಯಾತ ನಿರ್ದೇಶಕ; ವೀಡಿಯೋ ವೈರಲ್
ಕೆಲವರು ಹಾಗೆ. ಸಿಕ್ಕಾಪಟ್ಟೆ ಸೈಲೆಂಟ್. ಸುಮ್ಮನೆ ಕೆಲಸ ಮಾಡುತ್ತಾರೆ. ಹೆಚ್ಚು ಪ್ರಚಾರ ಬಯಸಲ್ಲ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಎಂಬ ಜಾಯಮಾನದವರು. ಬಹಳ ಜನಪ್ರಿಯತೆ ಸಾಧಿಸಿದರೂ ಬಹಳ ಸರಳವಾಗಿ ಇದ್ದುಬಿಡುತ್ತಾರೆ. ಆದರೆ ತಮ್ಮವರಿಗಾಗಿ ಏನು ಬೇಕಾದರೂ ಮಾಡದು ಸಿದ್ಧರಿರುತ್ತಾರೆ.
ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಕೂಡ ಸಿಕ್ಕಾಪಟ್ಟೆ ಸೈಲೆಂಟ್. ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರೂ ಯಾವುದೇ ಹಮ್ಮಿ ಬಿಮ್ಮು ಇಲ್ಲ. ಸಣ್ಣ ತೆಳ್ಳಗೆ ಕುಳ್ಳಗೆ ಇರುವ ಅವರನ್ನು ನೋಡಿದರೆ ಇಂತಹ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದು ಇವರೇನಾ ಎಂದು ಅಚ್ಚರಿ ಮೂಡುತ್ತದೆ. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಇರುವ ಮುರುಗದಾಸ್ ತಮ್ಮ ಮನೆಯ ಕಾರ್ಯಕ್ರಮವೊಂದರಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಮಡದಿ ಮಕ್ಕಳ ಜೊತೆ ಅವರ ಡ್ಯಾನ್ಸ್ ಸಖತ್ ವೈರಲ್ ಆಗುತ್ತಿದೆ.

ಅಜಿತ್ ನಟನೆಯ 'ದೀನಾ' ಎಂಬ ಸಿನಿಮಾ ಮೂಲಕ ಮುರುಗದಾಸ್ ನಿರ್ದೇಶಕರಾಗಿದ್ದರು. ಮುಂದೆ 'ಗಜನಿ', 'ರಮಣ', '7th ಸೆನ್ಸ್', 'ತುಫಾಕಿ', 'ಸರ್ಕಾರ್', 'ದರ್ಬಾರ್' ರೀತಿಯ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರ ಸಿನಿಮಾಗಳು ಕನ್ನಡ ಸೇರಿದಂತೆ ಬೇರೆ ಭಾಷೆಗಳಿಗೆ ರೀಮೆಕ್ ಆಗಿದೆ. 'ರಮಣ' ಸಿನಿಮಾ ಕನ್ನಡದಲ್ಲಿ 'ವಿಷ್ಣುಸೇನಾ' ಆಗಿ ಪ್ರೇಕ್ಷಕರ ಮುಂದೆ ಬಂದಿತ್ತು.
ತಮ್ಮದೇ 'ಗಜಿನಿ' ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಿ ಗೆದ್ದಿದ್ದರು. ಆ ಸಿನಿಮಾ ಬಾಲಿವುಡ್‌ನಲ್ಲಿ ಬರೆದ ದಾಖಲೆ ಮರೆಯೋಕೆ ಸಾಧ್ಯವಿಲ್ಲ. ಹಿಂದಿಯಲ್ಲಿ 'ಜೈಹೋ', 'ಅಕಿರಾ' ಎಂಬ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದರು. ಆದರೆ ಈ ವರ್ಷ ಬಂದ 'ಸಿಕಂದರ್' ಸಿನಿಮಾ ಮಾತ್ರ ಹೀನಾಯವಾಗಿ ಸೋತಿತ್ತು. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಟಿಸಿದ್ದರು. ನಿರ್ಮಾಪಕರಾಗಿಯೂ ಒಂದಷ್ಟು ಸಿನಿಮಾಗಳನ್ನು ಎ. ಆರ್ ಮುರುಗದಾಸ್ ತೆರೆಗೆ ತಂದಿದ್ದಾರೆ.
ಶಾಲಾ, ಕಾಲೇಜು ದಿನಗಳಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದ ಮುರುಗದಾಸ್ ಬರವಣಿಗೆಯನ್ನು ರೂಢಿಸಿಕೊಂಡಿದ್ದರು. ಬಳಿಕ ಸಿನಿಮಾಗಳಿಗೆ ಸಂಭಾಷಣೆ ಬರೆಯಲು ಆರಂಭಿಸಿದ್ದರು. ನಿಧಾನವಾಗಿ ಸಹ ನಿರ್ದೇಶಕರಾಗಿದ್ದರು. ಎಸ್. ಜೆ ಸೂರ್ಯ ಸೂಚನೆ ಮೇರೆಗೆ 'ದೀನಾ' ಚಿತ್ರದ ಅವಕಾಶವನ್ನು ಅಜಿತ್ ಕೊಟ್ಟಿದ್ದರು. ಬಳಿಕ ಮುರುಗದಾಸ್ ತಿರುಗಿ ನೋಡಲೇ ಇಲ್ಲ.
'ರೆಟ್ರೋ' ಚಿತ್ರದ 'ಕನ್ನಿಮಾ' ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರೀಲ್ಸ್‌ಗಳಲ್ಲಿ ಸಖತ್ ಸದ್ದು ಮಾಡಿತ್ತು. ವೇದಿಕೆಗಳಲ್ಲಿ ಮಾತನಾಡಲು ಕೂಡ ಸಂಕೋಚಪಡುವ ಮುರುಗದಾಸ್ ಹೀಗೆ ಮಡದಿ ಮಕ್ಕಳ ಜೊತೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿರುವುದು ಗಮನ ಸೆಳೆದಿದೆ.
ಸದ್ಯ ಶಿವಕಾರ್ತಿಕೇಯನ್ ನಟನೆಯ 'ಮದರಾಸಿ' ಎಂಬ ಚಿತ್ರವನ್ನು ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್ 5ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇನ್ನು ಬಾಲಿವುಡ್‌ನಲ್ಲಿ 'ವಿಜಯ್ ಕಂದಸ್ವಾಮಿ' ಹಾಗೂ 'ಉಗ್ರಂ' ಎಂಬ 2 ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದಾರೆ.
ಸೂರ್ಯ ಹಾಗೂ ಪೂಜಾ ಹೆಗ್ಡೆ ನಟನೆಯ 'ರೆಟ್ರೋ' ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಸೋತಿತ್ತು. ಆದರೆ ಸಂತೋಷ್ ನಾರಾಯಣ್ ಸಂಗೀತ 'ಕನ್ನಿಮಾ' ಸಾಂಗ್ ಸೂಪರ್ ಹಿಟ್ ಆಗಿತ್ತು. ಪೂಜಾ ಹೆಗ್ಡೆ ಡ್ಯಾನ್ಸ್ ಅಭಿಮಾನಿಗಳಿಗೆ ಮೋಡಿ ಮಾಡಿತ್ತು.


Click it and Unblock the Notifications











