ಸನಾತನ ಬೇಡ ಅಂದ್ರೆ, ಅಪ್ಪ, ಅಮ್ಮನನ್ನು ಮನೆಯಿಂದ ಹೊರಗೆ ಹಾಕಬೇಕು; ಅರ್ಜುನ್ ಸರ್ಜಾ
ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ, ನಟ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಪದೇ ಪದೆ ಮಾತನಾಡಿ ವಿವಾದಕ್ಕೀಡಾಗುತ್ತಿದ್ದಾರೆ. 4 ವರ್ಷಗಳ ಹಿಂದೆ ಸನಾತನವನ್ನು ಡೆಂಗ್ಯು, ಮಲೇರಿಯಾಗೆ ಹೋಲಿಸಿ ಮಾತನಾಡಿದ್ದರು. ಸನಾತನವನ್ನು ನಾಶ ಮಾಡಬೇಕು ಎಂದು ಹೇಳಿದ್ದರು. ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಕೆಲವರು ಬೆದರಿಕೆ ಹಾಕಿದ್ದರು. ಈ ಬೆದರಿಕೆಗೆಲ್ಲಾ ನಾನು ಜಗ್ಗಲ್ಲ ಎಂದು ತಿರುಗೇಟು ನೀಡಿದ್ದರು.
ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಕೂಡ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದು ಚರ್ಚೆ ಹುಟ್ಟು ಹಾಕಿತ್ತು. ಭಾರೀ ವಿರೋಧಕ್ಕೂ ಕಾರಣವಾಗಿತ್ತು. ಕೆಲವರು ಅವರ ಹೇಳಿಕೆಯನ್ನು ಖಂಡಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಸೋಲುಂಡಿದೆ. ಹಾಗಾಗಿ ವಿರೋಧ ಪಕ್ಷದ ನಾಯಕನಾಗಿ ಉದಯನಿಧಿ ಆಯ್ಕೆ ಆಗಿದ್ದಾರೆ. ಸದನದಲ್ಲಿ ತಮ್ಮ ಮೊದಲ ಭಾಷಣದ ವೇಳೆ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದಿದ್ದರು.

ತಮ್ಮ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಅದಕ್ಕೆ ಸ್ಪಷ್ಟನೆ ನೀಡಿದ್ದರು. ಟ್ವೀಟ್ ಮಾಡಿದ್ದು ಮಾತ್ರವಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. "ಜನರನ್ನು ವಿಭಜಿಸುವ ಪದ್ಧತಿ(ಸನಾತನ)ಯನ್ನು ನಿರ್ಮೂಲನೆ ಮಾಡಬೇಕು" ಎಂದು ಹೇಳಿದ್ದೆ. ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ. ನಾನು ಇದಕ್ಕೆಲ್ಲಾ ಹೆದರಲ್ಲ. ಪ್ರತಿರೋಧದ ನಡುವೆ ದ್ರಾವಿಡ ಚಳುವಳಿ ಬೆಳೆದಿದೆ. ನಾನು ಒಂದು ಸಣ್ಣ ವಿವರಣೆಯನ್ನು ನೀಡಲು ಬಯಸುತ್ತೇನೆ. ಸನಾತನವನ್ನು ನಿರ್ಮೂಲನೆ ಮಾಡಬೇಕು ಅಂದ್ರೆ ಯಾರೂ ದೇವಸ್ಥಾನಕ್ಕೆ ಹೋಗಬಾರದು ಅಂತ ಅಲ್ಲ" ಎಂದು ಟ್ವೀಟ್ ಮಾಡಿದ್ದರು. ಸದ್ಯ ಸನಾತನ ಧರ್ಮದ ಬಗ್ಗೆ ನಟ, ನಿರ್ದೇಶಕ, ನಿರ್ಮಾಪಕ ಅರ್ಜುನ್ ಸರ್ಜಾ ಹೇಳಿಕೆ ವೈರಲ್ ಆಗ್ತಿದೆ.
ಅರ್ಜುನ್ ಸರ್ಜಾ ನಟನೆಯ 'ಬ್ಲಾಸ್ಟ್' ಎಂಬ ಸಿನಿಮಾ ಈ ವಾರ ತೆರೆಗೆ ಬಂದಿದೆ. ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ ಬಳಿಕ ಆಕ್ಷನ್ ಕಿಂಗ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ಸನಾತನ ಧರ್ಮದ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ಪ್ರತಿಕ್ರಿಯಿಸಿದ್ದು ಉದಯನಿಧಿ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
"ನನ್ನ ಪ್ರಕಾರ ಸನಾತನ ಎನ್ನುವುದು ಜೀವನ ಶೈಲಿ.. ನಾವು ಜೀವನದಲ್ಲಿ ಹೇಗೆ ಇರುಬೇಕು ಎಂದು ಕಲಿಸುತ್ತದೆ. ತಪ್ಪು ಮಾಡಬೇಡ, ಕಳ್ಳತನ ಮಾಡಬೇಡ, ಮತ್ತೊಬ್ಬರ ವಸ್ತುವಿಗೆ ಆಸೆ ಪಡಬೇಡ ಎಂದು ಹೇಳುತ್ತದೆ. ಚಿಕ್ಕಂದಿನಲ್ಲಿ ನಮ್ಮ ಪೋಷಕರು ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡ್ರು. ವಯಸ್ಸಾದ ಸಮಯದಲ್ಲಿ ಅವ್ರನ್ನು ನಾವು ದೇವರಂತೆ ನೋಡಿಕೊಳ್ಳಬೇಕು ಎಂದು ಸನಾತನ ಧರ್ಮ ಹೇಳುತ್ತದೆ. ಹಾಗಾಗಿ ಸನಾತನ ಧರ್ಮ ಬೇಡ ಅಂದ್ರೆ, ಅವರವರ ಅಪ್ಪ, ಅಮ್ಮನನ್ನು ಮನೆಯಿಂದ ಹೊರಗೆ ಹಾಕಬೇಕು, ಆಗುತ್ತಾ?" ಎಂದು ಅರ್ಜುನ್ ಸರ್ಜಾ ಪ್ರಶ್ನಿಸಿದ್ದಾರೆ.
ಸನಾತನ ಧರ್ಮ ಎನ್ನುವುದು ಒಂದು ಧರ್ಮ ಅಲ್ಲ. ಅದು ಜೀವನಶೈಲಿ. ನನಗೆ ಗೊತ್ತಿರುವಷ್ಟು ನಾನು ಹೇಳಿದ್ದೀನಿ. ಎಲ್ಲರೂ ಅದನ್ನು ತಿಳ್ಕೊಂಡ್ರೆ ಒಳ್ಳೆದು ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. ತಮಿಳುನಾಡಿನ ಹೊಸ ಸರ್ಕಾರದ ಬಗ್ಗೆ ಕೂಡ ಆಕ್ಷನ್ ಕಿಂಗ್ ಮಾತನಾಡಿದ್ದಾರೆ. ನಮ್ಮ ಸ್ನೇಹಿತರು ಸಿಎಂ ಆಗಿದ್ದಾರೆ ಎಂದಿದ್ದಾರೆ. ನಾನು ರೀಲ್‌ನಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದೆ. ವಿಜಯ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಸಮಾಜಕ್ಕೆ ಒಳ್ಳೆದು ಮಾಡ್ಬೇಕು ಅಂತ ಬಂದಿದ್ದಾರೆ. ಈಗ ತಾನೇ ಸರ್ಕಾರ ಶುರುವಾಗಿದೆ. ಒಳ್ಳೆ ಕೆಲಸಗಳನ್ನು ಮಾಡ್ತಾರೆ ಎನ್ನುವ ಭರವಸೆಯಿದೆ ಎಂದಿದ್ದಾರೆ.


Click it and Unblock the Notifications