ತಿರುಚ್ಚಿ ಕ್ಷೇತ್ರದಿಂದ ನಟಿ ತ್ರಿಷಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವುದು ಖಚಿತ; ಖ್ಯಾತ ಜ್ಯೋತಿಷಿ ಭವಿಷ್ಯ
ತಮಿಳುನಾಡು ವಿಧಾನಸಭೆ ಚುನಾವಣೆ ಬೆನ್ನಲ್ಲೇ ನಟಿ ತ್ರಿಷಾ ರಾಜಕೀಯರಂಗ ಪ್ರವೇಶದ ಬಗ್ಗೆ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಮಾತುಗಳು ಕೇಳಿಬರ್ತಿದೆ. ವಿಜಯ್ ಹಾಗೂ ತ್ರಿಷಾ ಬಹಳ ಆತ್ಮೀಯರು. ಹಾಗಾಗಿ ಆಕೆಯನ್ನು ದಳಪತಿ ರಾಜಕೀಯರಂಗಕ್ಕೆ ಕರೆತರುತ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಬಹಳ ವರ್ಷಗಳ ಹಿಂದೆ ನಾನು ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕು ಎಂದು ನಟಿ ತ್ರಿಷಾ ಆಸೆ ವ್ಯಕ್ತಪಡಿಸಿದ್ದರು. ಸಿಎಂ ಅಲ್ಲದೇ ಇದ್ದರೂ ವಿಜಯ್ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಅಥವಾ ಯಾವುದಾದರೂ ಸಚಿವೆ ಸ್ಥಾನ ಸಿಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚುನಾವಣೆಗೆ ತ್ರಿಷಾ ಸ್ಪರ್ಧಿಸಲಿಲ್ಲ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದ್ದಿದೆ. ಅದಕ್ಕೆ ಕೆಲವರು ತಮ್ಮದೇ ಅಭಿಪ್ರಾಯ ಮುಂದಿಡುತ್ತಿದ್ದಾರೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ಗೆದ್ದಿದ್ದಾರೆ. ಹಾಗಾಗಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಿದೆ. ಅಲ್ಲಿ ಉಪಚುನಾವಣೆ ನಡೆಯಲಿದೆ. ಆಗ ತ್ರಿಷಾ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ತ್ರಿಷಾ ಹುಟ್ಟುಹಬ್ಬದ ದಿನವೇ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿತ್ತು. ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮಧ್ಯಾಹ್ನದ ವೇಳೆಗೆ ಆಕೆ ಚೆನ್ನೈಗೆ ಬಂದಿದ್ದರು. ನೇರವಾಗಿ ವಿಜಯ್ ನಿವಾಸಕ್ಕೆ ಭೇಟಿ ನೀಡಿ ಕೆಲವೊತ್ತು ಮಾತುಕತೆ ನಡೆಸಿ ಬಂದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೆಲ್ಲಾ ಗಮನಿಸಿ ತ್ರಿಷಾ ಪೊಲಿಟಿಕಲ್ ಎಂಟ್ರಿ ಫಿಕ್ಸ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಪೆರಂಬೂರ್ ಕ್ಷೇತ್ರದಲ್ಲಿ 40 ಸಾವಿರ ಮತಗಳ ಅಂತರದಿಂದ ವಿಜಯ್ ಗೆದ್ದಿದ್ದಾರೆ. ತಿರುಚ್ಚಿ ಈಸ್ಟ್ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಮತಗಳ ಅಂತರ ಸಾಧಿಸಿದ್ದಾರೆ. ತಿರುಚ್ಚಿ ಈಸ್ಟ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ವಿಜಯ್ ರಾಜಿನಾಮೆ ನೀಡುತ್ತಾರೆ ಎನ್ನಲಾಗ್ತಿದೆ. ಅದೇ ಕ್ಷೇತ್ರದಲ್ಲಿ ತ್ರಿಷಾ ಸ್ಪರ್ಧಿಸಿ ಗೆಲ್ತಾರೆ ಎಂದು ಖ್ಯಾತ ಜ್ಯೋತಿಷ್ಯ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಶಾಂತ್ ಕಿಣಿ ನುಡಿದಿದ್ದ ಕೆಲ ಭವಿಷ್ಯವಾಣಿ ನಿಜವಾಗಿದೆ. ನಟಿ ಸಮಂತಾ 2ನೇ ಮದುವೆ ಆಗುತ್ತಾರೆ ಎಂದು ಬಹಳ ಹಿಂದೆಯೇ ಕಿಣಿ ಹೇಳಿದ್ದರು. ಮಾರ್ಚ್ 2026 ರ ನಂತರ ಭಾರತದಲ್ಲಿ ಇಂಧನ/ನೈಸರ್ಗಿಕ ಅನಿಲ ಕೊರತೆ ಉಂಟಾಗುತ್ತದೆ ಎಂದು ಕೂಡ ಅವರು ಭವಿಷ್ಯ ನುಡಿದಿದ್ದರು. ಇರಾನ್- ಇಸ್ರೇಲ್ ಯುದ್ಧದಿಂದಾಗಿ ಅನಿಲ ಕೊರತೆ ಎದುರಾಗಿದ್ದು ಗೊತ್ತೇಯಿದೆ.
ನಟಿ ತ್ರಿಷಾ ಅಲ್ಲ, ತಿರುಚ್ಚಿ ಈಸ್ಟ್ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಸಗಾಯಂ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಒಟ್ಟಾರೆ ತಿರುಚ್ಚಿ ವಿಧಾನಸಭೆ ಕ್ಷೇತ್ರ ಈಗ ಎಲ್ಲರ ಗಮನ ಸೆಳೆದಿದೆ. ವಿಜಯ್ ರಾಜಿನಾಮಿ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. ಇನ್ನೆರಡು ದಿನಗಳಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಸಿಗಬೇಕಿದೆ.
ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ 118 ಸ್ಥಾನಗಳು ಬೇಕಿದೆ. 10-11 ಸ್ಥಾನಗಳು ಕಮ್ಮಿಯಿದೆ. ಹಾಗಾಗಿ ವಿಜಯ್ ಯಾರ ಜೊತೆ ಕೈಜೋಡಿಸಿ ಸರ್ಕಾರ ರಚಿಸುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಎಡಿಎಂಕೆ ಪಕ್ಷ ಕೂಡ ಬೆಂಬಲ ಸೂಚಿಸಲು ಮುಂದಾಗಿದೆ. ಕಾಂಗ್ರೆಸ್ ಕೂಡ ವಿಜಯ್ ಕಡೆ ವಾಲಿದೆ. ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಡಿಎಂಕೆ ಪಕ್ಷ ನಿರ್ಧರಿಸಿದೆ.


Click it and Unblock the Notifications