ತನ್ನ ಕಣ್ಣೆದುರು ತಂಗಿ ವಿದ್ಯಾ ಕೊನೆಯುಸಿರು; ಅಂದಿನಿಂದ ಅಂತರ್ಮುಖಿಯಾಗಿಬಿಟ್ಟ ಟಿವಿಕೆ ವಿಜಯ್!
ತಮಿಳು ನಟ ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 108 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ವಿಜಯ್ ನೇತೃತ್ವದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ದ್ರಾವಿಡನಾಡಿನಲ್ಲಿ ದಳಪತಿ ದರ್ಬಾರ್‌ಗೆ ವೇದಿಕೆ ಸಿದ್ಧವಾಗುತ್ತಿದೆ. ಈ ನಡುವೆ ವಿಜಯ್ ಕುರಿತಾದ ಸಂಗತಿಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಮುಂದಾಗಿದ್ದಾರೆ.
ಬಾಲನಟನಾಗಿ ವಿಜಯ್ ಚಿತ್ರರಂಗ ಪ್ರವೇಶಿಸಿದ್ದರು. ತಂದೆ ಎಸ್. ಎ ಚಂದ್ರಶೇಖರ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕೆಲ ಸಿನಿಮಾಗಳನ್ನು ನಿರ್ಮಿಸಿದ್ದರು. ಹಾಗಾಗಿ ವಿಜಯ್ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಆದರೆ ವಿಜಯ್ ಸದಾ ಅಂತಮುರ್ಖಿಯಾಗಿರುತ್ತಾರೆ. ಸಿನಿಮಾಗಳಲ್ಲಿ ಕಾಣಿಸುವಂತೆ ನಿಜ ಜೀವನದಲ್ಲಿ ಬಹಳ ಹುರುಪು ಅವರಲ್ಲಿ ಕಂಡು ಬರುವುದಿಲ್ಲ. ಇತ್ತೀಚೆಗೆ ಚುನಾವಣೆ ಪ್ರಚಾರಗಳಲ್ಲಿ ಬಹಳ ಹುಮ್ಮಸ್ಸಿನಿಂದ ಭಾಷಣ ಮಾಡಿದ್ದರು. ಇನ್ನುಳಿದಂತೆ ಬಹಳ ಸೌಮ್ಯ ಸ್ವಭಾವ ಅವರದ್ದು. ಹೆಚ್ಚು ಮಾತನಾಡುವುದು, ತಮಾಷೆ ಮಾಡುವುದು, ಹರಟೆ ಹೊಡೆಯುವುದು ಕಮ್ಮಿ. ವಿಜಯ್ ಈ ಸ್ವಭಾವಕ್ಕೆ ಸಹೋದರಿ ವಿದ್ಯಾ ಅಗಲಿಕೆ ಕಾರಣ ಎನ್ನಲಾಗುತ್ತದೆ.

ಚಿಕ್ಕಂದಿನಲ್ಲೇ ವಿಜಯ್ ತಮ್ಮ ತಂಗಿ ವಿದ್ಯಾಳನ್ನು ಕಳೆದುಕೊಂಡಿದ್ದರು. ಇಬ್ಬರಿಗೂ 6 ವರ್ಷಗಳ ಅಂತರ.. ವಿದ್ಯಾಗೆ ಮೂರೂವರೆ ವರ್ಷ ವಯಸ್ಸಾಗಿದ್ದಾಗಲೇ ಆನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಕಣ್ಣೆದುರೇ ತಂಗಿ ಜೀವ ಬಿಟ್ಟಿದ್ದನ್ನು ನೋಡಿ ವಿಜಯ್ ಆಘಾತಕ್ಕೆ ಒಳಗಾಗಿದ್ದರು. ಅದು ವಿಜಯ್ ಮೇಲೆ ಬಹಳ ಪರಿಣಾಮ ಬೀರಿತ್ತು ಎಂದು ಸ್ವತಃ ತಂದೆ ಎಸ್. ಎ ಚಂದ್ರಶೇಖರ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ವಿಜಯ್ ತಾಯಿ ಶೋಭಾ ಗಾಯಕಿಯಾಗಿದ್ದರು. ಹಾಗಾಗಿ ಮಗಳಿಗೆ ಚಿಕ್ಕಂದಿನಲ್ಲೇ ಹಾಡು ಹಾಡುವುದನ್ನು ಹೇಳಿಕೊಟ್ಟಿದ್ದರು. ವಿದ್ಯಾ ಹಾಡು ಹಾಡುವುದು, ದೇವರ ನಾಮಗಳನ್ನು ಹೇಳುತ್ತಿದ್ದಳು.. ಅಣ್ಣನನ್ನು ಏಯ್, ವಿಜಯ್ ಎಂದೇ ಕರೆಯುತ್ತಿದ್ದಳು ಎಂದು ವಿದ್ಯಾ ಬಗ್ಗೆ ವಿಜಯ್ ಪೋಷಕರು Behindwoods TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಒಮ್ಮೆ ಹೇಳಿಕೊಂಡಿದ್ದರು. ಮೂರೂವರೆ ವರ್ಷಕ್ಕೆ ಅಗಲಿದ ವಿದ್ಯಾಳನನ್ನು ನಾವು, ವಿಜಯ್ ಇವತ್ತಿಗೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆಕೆ ನಮ್ಮೊಟ್ಟಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳದ ದಿನವೇ ಇಲ್ಲ ಎಂದಿದ್ದರು.

ವಿದ್ಯಾ ಹುಟ್ಟಿದ ಬಳಿಕ ನಾವು ಜೀವನದಲ್ಲಿ ಮೇಲೇರಿದೆವು.. ವಿದ್ಯಾ ಹುಟ್ಟಿದ ಬಳಿಕ ನಾನು ನಿರ್ದೇಶಿಸಿದ 'ಸಟ್ಟಂ ಒರು ಇರುತ್ತರೈ' ಎಂಬ ಸಿನಿಮಾ ಹಿಟ್ ಆಗಿತ್ತು. ಆಗಲೇ ನಾವು ಹಣ ನೋಡಲು ಆರಂಭಿಸಿದ್ದೆವು.. ನಮ್ಮ ಮನೆಯ ಅದೃಷ್ಟ ಲಕ್ಷ್ಮಿ.. ಎಲ್ಲವನ್ನು ಕೊಟ್ಟು ಹೋಗಿಬಿಟ್ಟಳು.. ಅವಳಿಗೆ ಆ ಕಾಯಿಲೆ ಇದೆ ಎಂದು ಗೊತ್ತಾದ ಬಳಿಕ ನಾನು ಯಾವುದೇ ಸಿನಿಮಾ ಚಿತ್ರೀಕರಣ ಇದ್ದರೂ ಕರೆದುಕೊಂಡು ಹೋಗಿಬಿಡ್ತಿದ್ದೆ ಎಂದು ವಿಜಯ್ ತಂದೆ ನೆನಪಿಸಿಕೊಂಡಿದ್ದರು.
ಮದ್ರಾಸ್‌ನಲ್ಲಿ ಅವತ್ತು ಸಿನಿಮಾ ಚಿತ್ರೀಕರಣ ಇತ್ತು. ಅಲ್ಲೇ ಹತ್ತಿರದಲ್ಲಿ ಮನೆ.. ಬೆಳಗ್ಗೆ ಚಿತ್ರೀಕರಣ ಮುಗಿಸಿ ಬ್ರೇಕ್ ಸಮಯದಲ್ಲಿ ಮನೆಗೆ ಹೋಗಿದ್ದೆ.. ಊಟದ ಬಳಿಕ ಹೋಗಿ ಬರ್ತೀನಿ ಮಗಳೇ ಎಂದೆ. ಅವಳು ಕೂಡಲೇ ನನ್ನ ಕೈ ಹಿಡಿದುಕೊಂಡುಬಿಟ್ಲು.. ಯಾವತ್ತು ಆ ರೀತಿ ಹೇಳುತ್ತಿರಲಿಲ್ಲ. ಅವತ್ತು ಆ ರೀತಿ ಹೇಳಿದ್ಲು.. ಕೂಡಲೇ ಬಾಯಲ್ಲಿ ರಕ್ತ ಸುರಿಯಲು ಆರಂಭವಾಯಿತು.. ಆಸ್ಪತ್ರೆಗೆ ಎತ್ತಿಕೊಂಡು ಓಡಿ ಹೋದೆ. ವೈದ್ಯರು ಕೈಚೆಲ್ಲಿದ್ರು.. ನನ್ನ ಮಡಿಲಲ್ಲೇ ವಿದ್ಯಾ ಪ್ರಾಣ ಬಿಟ್ಲು.. ಅದನ್ನು ನೋಡಿ ವಿಜಯ್ "ಅಪ್ಪಾ" ಕೂಗಿದ.. ಅಷ್ಟೇ.. ಆಗ ವಿಜಯ್ ವಯಸ್ಸು 10 ವರ್ಷ.. ಎಂದು ವಿಜಯ್ ಪೋಷಕರು ಹೇಳಿದ್ದರು.
ವಿದ್ಯಾ ನೆನಪಿನಲ್ಲೇ ವಿಜಯ್ ತನ್ನ ಮಗಳಿಗೆ ದಿವ್ಯಾ ಎಂದು(ಅದೇ ಅಕ್ಷರವನ್ನು ಅತ್ತಿತ್ತ ಮಾಡಿ) ಹೆಸರಿಟ್ಟಿದ್ದಾನೆ ಎಂದು ವಿಜಯ್ ತಾಯಿ ಹೇಳಿದ್ದರು. ವಿಜಯ್ ಹಾಗೂ ವಿದ್ಯಾ ಹೆಸರನ್ನು ಸೇರಿಸಿ ವಿವಿ ಕ್ರಿಯೇಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಚಂದ್ರಶೇಖರ್ ಆರಂಭಿಸಿದ್ದರು. ಬಾಲಕ ವಿಜಯ್ ತಂಗಿ ಭಾವಚಿತ್ರಕ್ಕೆ ಪೂಜೆ ಮಾಡಿ ಕೈ ಮುಗಿಯುವ ವಿಡಿಯೋವನ್ನು ಸಂಸ್ಥೆ ನಿರ್ಮಾಣದ ಚಿತ್ರದ ಟೈಟಲ್ ಕಾರ್ಡ್‌ಗಳಲ್ಲಿ ಹಾಕಲಾಗುತ್ತಿತ್ತು.
ತಮ್ಮ ಸಹೋದರಿ ಬಗ್ಗೆ ಸ್ವತಃ ವಿಜಯ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. "ನನ್ನ ತಂಗಿ ವಿದ್ಯಾ ಅಗಲಿಕೆ ನನ್ನ ಜೀವನದಲ್ಲಿ ಮರೆಯಲಾಗದ ಘಟನೆ.. ನಮ್ಮ ತಂಗಿ ವಿದ್ಯಾಳನ್ನು ನಾವು ಹೂತಿಲ್ಲ, ಬಿತ್ತಿದ್ದೇವೆ.. ಅದಕ್ಕೆ ಇವತ್ತು ನನಗೆ ಇಷ್ಟೊಂಡು ಸಹೋದರಿಯರು ಸಿಕ್ಕಿದ್ದಾರೆ" ಎಂದು ತಮ್ಮ ಮಹಿಳಾ ಅಭಿಮಾನಿಗಳನ್ನು ಉದ್ದೇಶಿಸಿ ವಿಜಯ್ ಹೇಳಿದ್ದರು.


Click it and Unblock the Notifications