ಅಭಿಮಾನದ ಹೆಸರಿನಲ್ಲಿ ಪಂಗನಾಮ; ಕರುಳು ಹಿಂಡುವ ಕಥೆ ಹೇಳಿ, ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್‌ಗೆ ವಂಚಿಸಿದ ಕಿರಾತಕ
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಇನ್ನೂ ಇದು 5G ಯುಗ. ಈ ಯುಗದಲ್ಲಿ ಸೈಬರ್ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಈ ವರ್ಷದ ಜನವರಿಯಲ್ಲಿಯೇ ಕೇವಲ ಬೆಂಗಳೂರಿನ ಜನ ಈ ಜಾಲಕ್ಕೆ ಸಿಲುಕಿ ₹110.50 ಕೋಟಿ ಹಣ ಕಳೆದುಕೊಂಡಿದ್ದಾರೆ. ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು...
₹1,287 ಕೋಟಿ ರೂ. ಹಣವನ್ನ ವಂಚಕರು ಕೊಳ್ಳೆ ಹೊಡೆದಿದ್ದಾರೆ. ದಿನದ ಲೆಕ್ಕದಲ್ಲಿ ₹4.6 ಕೋಟಿ ಮತ್ತು ಪ್ರತಿ ಗಂಟೆಗೆ 65 ಲಕ್ಷಕ್ಕೂ ಹಣ ಕಬಳಿಸಿದ್ದಾರೆ. ಪತ್ರಿಕೆಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಿದರೂ.. ಎಚ್ಚರ ವಹಿಸುವಂತೆ ಜಾಹೀರಾತು ನೀಡಿದರೂ ಕೂಡ ಹಲವರು ಈ ಖೆಡ್ಡಾಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ಧಾರೆ.

ಇನ್ನೂ ಶಾಕಿಂಗ್ ಸಮಾಚಾರ ಅಂದರೆ ವಂಚಕರು ಬೀಸಿದ ಜಾಲದಲ್ಲಿ ಪ್ರಜ್ಞಾವಂತರು.. ವಿದ್ಯಾವಂತರು.. ಬುದ್ದಿವಂತರು.. ಚಿತ್ರರಂಗದವರು ಕೂಡ ಸಿಲುಕಿಕೊಳ್ಳುತ್ತಿದ್ದಾರೆ. ಸುಲಭವಾಗಿ ನಂಬಿ ಯಾಮಾರುತ್ತಿದ್ದಾರೆ. ಉದಾಹರಣೆಗೆ ಜಿ.ವಿ.ಪ್ರಕಾಶ್.
ಯೆಸ್. ಜಿ.ವಿ.ಪ್ರಕಾಶ್ ಪಕ್ಕದ ತಮಿಳುನಾಡಿನ ಖ್ಯಾತ ಸಂಗೀತ ನಿರ್ದೇಶಕ. ಇಷ್ಟೇ ಅಲ್ಲ ನಟ ಕೂಡ ಹೌದು. ''ಪೊಲ್ಲಾಧವನ್''.. ''ರಾಜಾ ರಾಣಿ''.. ''ತೇರಿ''.. ''ತಲೈವಿ''.. ''ಕ್ಯಾಪ್ಟನ್ ಮಿಲ್ಲರ್'' .. ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಇವರದ್ದು.ಇಂಥಾ ಜಿ.ವಿ. ಪ್ರಕಾಶ್ ಅವರನ್ನು ಕಿರಾತಕನೊಬ್ಬ ತನ್ನ ತಾಯಿಯ ಹೆಸರೇಳಿ ಪಂಗನಾಮ ಹಾಕಿದ್ದಾನೆ. ಕರುಣಾಜನಕ ಕಥೆ ಹೇಳಿ ಹಣ ಕಿತ್ತಿದ್ದಾನೆ.
ಹೌದು, ಅಸಲಿಗೆ ಸೋಶೀಯಲ್ ಮೀಡಿಯಾದಲ್ಲಿ ಈಗೀಗ ಚಿತ್ರರಂಗದ ತಾರೆಯರನ್ನು ಗುರಿಯಾಗಿಸಿಕೊಂಡು ಸಹಾಯ ಕೇಳುವರ ಸಂಖ್ಯೆ ಹೆಚ್ಚಾಗಿದೆ. ಚಿತ್ರರಂಗದಲ್ಲಿನ ಕಥೆಗಾರರನ್ನೇ ಮೀರಿಸುವಂತೆ 'ದುಃಖದ ಕಥೆ'ಗಳನ್ನು ಹೆಣೆಯುವ ಇವರು ಹಲವರನ್ನು ತಮ್ಮ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಇದರಿಂದ ನಿಜವಾಗಿಯೂ ಕಷ್ಟದಲ್ಲಿದ್ದವರನ್ನು ಕೂಡ ನಂಬದ ಸ್ಥಿತಿ ನಿರ್ಮಾಣವಾಗುತ್ತಿದೆ.
ಸದ್ಯ ಜಿ.ವಿ.ಪ್ರಕಾಶ್ ವಿಚಾರದಲ್ಲಿ ಕೂಡ ಇದೇ ಆಗಿದ್ದು Mom Little King ಎಂಬ ಎಕ್ಸ್ ( ಟ್ವಿಟರ್ ) ಖಾತೆಯನ್ನು ಹೊಂದಿರುವ ಪ್ರಸನ್ನ ಸಾದೀಶ್ ಎಂಬ ವ್ಯಕ್ತಿ ಜಿ.ವಿ.ಪ್ರಕಾಶ್ ಅವರ ಬಳಿ ಸಹಾಯಕ್ಕೆ ಅಂಗಲಾಚಿದ್ದಾನೆ. ತನ್ನ ತಾಯಿಯ ಚಿತ್ರವನ್ನು ಹಂಚಿಕೊಂಡು ನನ್ನ ತಾಯಿ ಬದುಕಿರುವ ತನಕ ನನ್ನನ್ನೂ ಮತ್ತು ನನ್ನ ತಂಗಿಯನ್ನು ಕಷ್ಟ ಪಟ್ಟು ಸಾಕಿ ಸಲುಹಿದರು. ಆದರೆ ಇಂದು ಅವರಿಲ್ಲ. ದುರಂತ ಅಂದರೆ ಅವರ ಅಂತಿಮ ಸಂಸ್ಕಾರಕ್ಕೆ ಕೂಡ ನನ್ನ ಬಳಿ ಹಣ ಇಲ್ಲ. ನಿಮ್ಮ ಸಹಾಯ ಬೇಕಿದೆ ಎಂದು ಜಿ.ವಿ. ಪ್ರಕಾಶ್ ಅವರಿಗೆ ಟ್ಯಾಗ್ ಮಾಡಿದ್ದಾನೆ. ಅಭಿಮಾನಿಯಂತೆ ಆಕ್ಟ್ ಮಾಡಿದ್ದಾನೆ.

ಆರಂಭದಲ್ಲಿ ಜಿ.ವಿ.ಪ್ರಕಾಶ್ ಈ ಮೆಸೇಜ್‌ನ ಕಡೆಗಣಿಸಿದ್ದಾರೆ. ಆದರೆ ಮಧ್ಯಾಹ್ನ ಈ ವ್ಯಕ್ತಿ ಮತ್ತೊಮ್ಮೆ ಜಿ.ವಿ.ಪ್ರಕಾಶ್ ಅವರನ್ನು ಟ್ಯಾಗ್ ಮಾಡಿ ಅಂತಿಮ ಸಂಸ್ಕಾರಕ್ಕೆ ಸಹಾಯ ಮಾಡುವಂತೆ ಮತ್ತೆ ಕೇಳಿದ್ದಾನೆ. ಆಗ ವ್ಯಕ್ತಿಯ ಕಷ್ಟಕ್ಕೆ ಮರುಗಿದ ಜಿ.ವಿ.ಪ್ರಕಾಶ್ ಮಧ್ಯಾಹ್ನ 2-24ಕ್ಕೆ ಅಭಿಮಾನಿ ಎಂದು ನಾಟಕವಾಡಿದ ವ್ಯಕ್ತಿಯ ಬಳಿ ಗೂಗಲ್ ಪೇ ನಂಬರ್ ಕೇಳಿದ್ದಾರೆ. ತಡ ಮಾಡದೇ 2-28ಕ್ಕೆ 20,000 ಹಣ ಕಳುಹಿಸಿ ತಮ್ಮ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದಾರೆ. ಆ ನಂತರ ಹಣ ಪಡೆದ ವ್ಯಕ್ತಿ ಧನ್ಯವಾದ ಎಂದು ಹೇಳಿದ್ದಾನೆ.
ಆರಂಭದಲ್ಲಿ ಜಿ.ವಿ.ಪ್ರಕಾಶ್ ಅವರ ಈ ನಡೆಗೆ ಹಲವರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಕಷ್ಟಕ್ಕೆ ಮರುಗಿದ ನೀವು ನಿಜಕ್ಕೂ ಕರುಣಾಮಯಿ ಎಂದೆಲ್ಲಾ ಹಲವರು ಹೇಳಿದ್ದಾರೆ. ಆದರೆ, ಆ ನಂತರ ಸಾಮಾಜಿಕ ಜಾಲತಾಣದ ಪ್ರವೀಣರು ಅಸಲಿ ಸತ್ಯವನ್ನು ಹೆಕ್ಕಿ ತೆಗೆದಿದ್ದಾರೆ. ಆ ಪ್ರಕಾರ ಸಹಾಯ ಕೇಳಿದ ವ್ಯಕ್ತಿಯ ತಾಯಿ ತೀರಿಕೊಂಡು ಮೂರು ವರ್ಷಗಳಾಗಿವೆ. 2022ರಲ್ಲಿಯೇ ಆ ವ್ಯಕ್ತಿಯ ತಾಯಿ ಸಾವನ್ನಪ್ಪಿದ್ದಾರೆ. ಆದರೆ.. ತನ್ನ ತಾಯಿಯ ಸಾವನ್ನೇ ಹಣ ಗಳಿಸುವ ಮಾರ್ಗವನ್ನಾಗಿ ಈ ವ್ಯಕ್ತಿ ಮಾಡಿಕೊಂಡಿದ್ದು ಹಲವರಿಗೆ ಇದೇ ರೀತಿ ವಂಚಿಸಿದ್ದಾನೆ.
ಹೀಗಾಗಿಯೇ ಸತ್ಯ ಹೊರ ಬರುತ್ತಿದ್ದಂತೆಯೇ ಹಲವರು ಜಿ.ವಿ.ಪ್ರಕಾಶ್ ಅವರಿಗೆ ನಿಮ್ಮನ್ನು ವಂಚಿಸಲಾಗಿದೆ, ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ. ಸಹಾಯ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿ ಎಂದಿದ್ದಾರೆ. ಮತ್ತೊಬ್ಬರು ನಾನು ನಿಮ್ಮಂತೆಯೇ ಆ ವ್ಯಕ್ತಿಗೆ 1,000 ರೂಪಾಯಿ ಕಳುಹಿಸಿ ಮೋಸ ಹೋಗಿದ್ದೇನೆ ಎಂದು ಹೇಳಿದ್ದಾರೆ. ತಾವು ಮೋಸ ಹೋದ ವಿಚಾರದ ಕುರಿತು ಜಿ.ವಿ.ಪ್ರಕಾಶ್ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











