ನಿರ್ಮಾಪಕಿಯಾಗಿ ಬಡ್ತಿ ಪಡೆದ ಕನ್ನಡತಿ ನಿತ್ಯಾ ಮೆನನ್ ; ಸೆವೆನ್ ಓ ಕ್ಲಾಕ್ ಸುಂದರಿಯ ನಿರ್ಮಾಣ ಸಂಸ್ಥೆಯ ಹೆಸರೇನು ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು.
ಆದರೆ ಈಗ ಕಾಲ ಬದಲಾಗಿದೆ. ಪರಿಸ್ಥಿತಿ ಬದಲಾಗಿದೆ. ಅಲ್ಲೊಬ್ಬರು .. ಇಲ್ಲೊಬ್ಬರು .. ನಾಯಕರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ನಾಯಕರಿಗೆ ಎಣಿಸುವ ದುಡ್ಡಿಗಿಂತ ಹೆಚ್ಚಿನ ದುಡ್ಡನ್ನೂ ಎಣಿಸುತ್ತಿದ್ದಾರೆ. ಇಷ್ಟೇ ಅಲ್ಲ ಮತ್ತೂ ಕೆಲವರು ಖುದ್ದು ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ನಿರ್ಮಾಪಕಿಯಾಗಿ ಕೂಡ ಹೆಸರು ಮಾಡಿದ್ದಾರೆ. ಉದಾಹರಣೆಗೆ ಆಲಿಯಾ ಭಟ್.. ಕೃತಿ ಸನೋನ್.. ತಾಪ್ಸಿ ಪನ್ನು.. ಕಂಗನಾ ರಣಾವತ್. ಈ ಸಾಲಿಗೆ ಈಗ ನಿತ್ಯಾ ಮೆನನ್ ಕೂಡ ಸೇರಿಕೊಂಡಿದ್ಧಾರೆ.

ಹೌದು, ಕನ್ನಡದ ''ಸೆವೆನ್ ಓ ಕ್ಲಾಕ್'' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ನಿತ್ಯಾ ಮೆನನ್. ಆ ನಂತರ ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ನಿತ್ಯಾ, ''ಮಿಷನ್ ಮಂಗಲ್'' ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಕೂಡ ಪ್ರವೇಶಿಸಿದರು.
ತಮ್ಮ ಅಮೋಘ ಅಭಿನಯದಿಂದನೇ ದಕ್ಷಿಣದ ಎಲ್ಲೆಡೆ ಕೀರ್ತಿಯ ಪತಾಕೆಯನ್ನ ಹಾರಿಸಿರುವ ನಿತ್ಯಾ, ಬಣ್ಣದ ಬದುಕಿನಾಚೆ ತಮ್ಮ ನೇರ ದಿಟ್ಟ ನಡುವಳಿಕೆಗಳಿಂದ ಕೂಡ ಹೆಸರುವಾಸಿಯಾದವರು. ಇಷ್ಟೇ ಅಲ್ಲ ''ತಿರುಚಿತ್ರಂಬಲಂ'' ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದವರು ನಿತ್ಯಾ ಮೆನನ್.
ಇಂಥಾ ನಿತ್ಯಾ ಮೆನನ್ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಕೂಡ ಶುರು ಮಾಡಿದ್ದಾರೆ. ತಮ್ಮ ಈ ನಿರ್ಮಾಣ ಸಂಸ್ಥೆಗೆ ಇವರು ಇಟ್ಟಿರುವ ಹೆಸರು ''ಕೆಯೂರಿ ಪ್ರೋಡಕ್ಷನ್ಸ್''.
ತಮ್ಮ ಈ ಹೊಸ ಕನಸಿನ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ನಿತ್ಯಾ ಮೆನನ್, ಸಿನಿಮಾ ಎನ್ನುವುದು ನನ್ನ ಪಾಲಿಗೆ ಕೇವಲ ಕಥೆ ಅಲ್ಲ ಅದಕ್ಕಿಂತ ಮಿಗಿಲಾದದ್ದು ಎಂದು ಹೇಳಿದ್ದಾರೆ.ಮನುಷ್ಯನ ಅಂತರಂಗವನ್ನು ತಲುಪುವ ಒಂದು ಪ್ರಯತ್ನ.. ಬುದ್ದಿವಂತಿಕೆಯನ್ನು ಮೀರಿದ ತಾಣ.. ಆಲೋಚನೆ ಮತ್ತು ಹಾಗೂ ವಿವೇಚನೆಗಿಂತಲೂ ಮೇಲಿನ ಸ್ಥಾನ ಎಂದು ಹೇಳಿದ್ದಾರೆ.

ಸಿನಿಮಾ ಧ್ಯಾನ ಮಾಡುವ ಪ್ರಕ್ರಿಯೆಯಲ್ಲಿ ನಾನು ಮಗ್ನಳಾದಾಗ, ನನ್ನೊಳಗೆ ಮತ್ತು ಸಿನಿಮಾ ನೋಡುವವರ ಮನಸಿನಲ್ಲಿ ಒಂದು ರೂಪಾಂತರವಾಗಬೇಕೆನ್ನುವುದು ನನಗೆ ಅರಿವು ಆಯ್ತು ಎಂದು ಹೇಳಿರುವ ನಿತ್ಯಾ ಮೆನನ್ ನಿಶ್ಯಬ್ದವಾದ ಅಲೆಗಳಂತೆ ಬದಲಾವಣೆಗೆ ಮುನ್ನುಡಿ ಬರೆಯವುದು ನನ್ನ ಆಶಯ ಎಂದು ಹೇಳಿದ್ದಾರೆ.
ಈ ಬದಲಾವಣೆಗಳಿಗೆ ನಾವು ಪೂರ್ಣವಾದ ಹೆಸರಿಡಲು ಸಾಧ್ಯವಾಗಬಹುದು, ಆರಂಭದಲ್ಲಿ ಕಣ್ಣಿಗೆ ಕಾಣಿಸದೇ ಕೂಡ ಇರಬಹುದು, ಆದರೆ ಮುಂದೆಂದೂ ಅಳಿಸಲಾಗದಂತೆ ನಮ್ಮನ್ನು ಬದಲಿಸಿರುತ್ತವೆ ಎಂದು ಹೇಳಿರುವ ನಿತ್ಯಾ ಮೆನನ್ ಸಿನಿಮಾ ಅಂದರೆ ಮುಗ್ದವಾದ ಭಾವನೆಗಳನ್ನು ಸ್ಫರ್ಶಿಸುವ ಒಂದು ಅದ್ಭುತ ಎನ್ನುವುದು ನನ್ನ ನಂಬಿಕೆ ಎಂದು ಹೇಳಿದ್ದಾರೆ.
ನಾನು ಅಭಿನಯಿಸಲು ಶುರು ಮಾಡಿದ ಮೊದಲ ದಿನದಿಂದಲೂ ಇದೇ ನನ್ನ ಉದ್ದೇಶವಾಗಿತ್ತು ಎಂದು ಕೂಡ ಹೇಳಿರುವ ನಿತ್ಯಾ ಮೆನನ್, ಈಗ ನಿರ್ಮಾಣಕ್ಕೆ ಮುಂದಾಗುತ್ತಿದ್ದೇನೆ, ಈಗಲೂ ಅದೇ ಉದ್ದೇಶ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ನಿಮ್ಮೆಲ್ಲರ ಮುಂದೆ ನನ್ನ ಕೆಯೂರಿ ಪ್ರೊಡಕ್ಷನ್ಸ್‌ನ ಇಡುತ್ತಿದ್ದೇನೆ ಹರಸಿ ಹಾರೈಸಿ ಎಂದು ಹೇಳಿದ್ಧಾರೆ. ನಿತ್ಯಾ ಮೆನನ್ ಅವರ ಈ ಹೊಸ ಪ್ರಯತ್ನಕ್ಕೆ ಇವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಚಿತ್ರರಂಗದ ಹಲವು ಸ್ನೇಹಿತರು ಕೂಡ ನಿತ್ಯಾ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತಿದ್ಧಾರೆ.


Click it and Unblock the Notifications











