80 ಸೀಟ್ ಆಫರ್, ತಮಿಳುನಾಡಿಗೆ ವಿಜಯ್ ಉಪಮುಖ್ಯಮಂತ್ರಿ ; ಸಂಸಾರದ ಜಂಜಾಟದ ನಡುವೆ 'ಬಿಜೆಪಿ' ಜೊತೆ ಕೈ ಜೋಡಿಸುತ್ತಾರಾ ದಳಪತಿ ?
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಬಹುತೇಕರು ರಾಜಕೀಯಕ್ಕೆ ಇಳಿದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ ನಿಂತವರೇ. ಈಗಾಗಲೇ ತಮ್ಮ ಪಕ್ಷದ ಧ್ವಜ ಮತ್ತು ಹೆಸರನ್ನು ಬಹಿರಂಗ ಮಾಡಿರುವ ವಿಜಯ್ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ನಿಗಾ ವಹಿಸಿದ್ದಾರೆ. ರಾಜಕೀಯ ರಣರಂಗದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಆದರೆ, ಈಗ ಇವರ ವಿಶ್ವಾಸಕ್ಕೆ ಧಕ್ಕೆಯಾಗಿದೆ. ವೈಯಕ್ತಿಕ ಬದುಕಿನ ವಿವಾದ ವಿರೋಧ ಪಕ್ಷದವರಿಗೆ ಬ್ರಹ್ಮಾಸ್ತ್ರವಾಗಿದೆ. ಈ ಬಾರಿ ವಿಜಯ್ ಸೋಲು ಖಚಿತ-ನಿಶ್ಚಿತ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಆದರೆ, ಇದೆಲ್ಲದರ ನಡುವೆ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ.ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ನಟ ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ಪ್ರಸ್ತಾಪಿಸಿದೆ ಎಂದು ಮಾಧ್ಯಮಗಳು ವರದಿಯನ್ನು ಮಾಡಿವೆ.
ನಿಮಗೆ ಗೊತ್ತಿರಲಿ.. ವಿಜಯ್ ಆಗಮನದಿಂದ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಈಗಾಗಲೇ ತಲೆ ಕೆಡಿಸಿಕೊಂಡಿವೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕಳೆದ ಆರು ದಶಕಗಳಿಂದ ತಮಿಳುನಾಡಿನಲ್ಲಿ ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿ ಆಗಲಿ ಅಧಿಕಾರಕ್ಕೆ ಬಂದಿಲ್ಲ. ಎಷ್ಟೇ ಸರ್ಕಸ್ ಮಾಡಿದರೂ ಕೂಡ ತಮಿಳುನಾಡಿನ ಜನ ಕೈ ಹಿಡಿದಿಲ್ಲ. ಕಮಲವನ್ನೂ ಕೂಡ ಮುಡಿದಿಲ್ಲ. ನಿಜಾ. 2021ರ ವಿಧಾನ ಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಪ್ರಯೋಜನವಾಗಲಿಲ್ಲ.
ಹಾಗಂಥ ಎಐಎಡಿಎಂಕೆ ಮತ್ತು ಬಿಜೆಪಿ ಸಂಬಂಧ ಮುರಿದು ಬಿದ್ದಿಲ್ಲ. ಈ ಭಾರಿ ಕೂಡ ಕಾಂಗ್ರೆಸ್ ಡಿಎಂಕೆ ಜೊತೆ ಮೈತ್ರಿ ಮುಂದುವರಿಸಿದ್ದರೆ, ಬಿಜೆಪಿ ಎಐಎಡಿಎಂಕೆ ಜೊತೆಗೂಡಿ ಸ್ಪರ್ಧಿಸಲಿದೆ.

ಇನ್ನೂ ಇದೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಗಳಸ್ಯ ಕಂಠಸ್ಯ ಸ್ನೇಹಿತೆ ಶಶಿಕಲಾ ಬೇರೆ ಹೊಸ ಪಕ್ಷದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಶಶಿಕಲಾ ಅವರ ಈ ನಡೆಯಿಂದ ವಿಜಯ್‌ಗೆ ಲಾಭವಾಗುತ್ತೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಈ ಹಿನ್ನೆಲೆ ವಿಜಯ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎನ್ನುವ ಸುದ್ದಿ ಸದ್ಯ ಪಸರ್ ಆಗಿದೆ. ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ 80 ಸ್ಥಾನಗಳನ್ನು ನೀಡುವುದಾಗಿ ಬಿಜೆಪಿ ವಿಜಯ್ ಅವರ ಮುಂದೆ ಪ್ರಸ್ತಾವನೆ ಇಟ್ಟಿದ್ದು, ವಿಜಯ್ ಮಾತ್ರ ಈ ಆಫರ್ ಗೆ ಕ್ಯಾರೇ ಎನ್ನುತ್ತಿಲ್ಲ ಎಂದು ಕೂಡ ಮಾಧ್ಯಮಗಳ ವರದಿಯಲ್ಲಿ ಉಲ್ಲೇಖವಾಗಿದೆ. ವಿಜಯ್ ಕಣ್ಣು ಮುಖ್ಯಮಂತ್ರಿಯ ಕುರ್ಚಿಯ ಮೇಲೀದೆ ಹೊರತು ಉಪಮುಖ್ಯಮಂತ್ರಿಯ ಕುರ್ಚಿಯ ಮೇಲಲ್ಲ, ಹೀಗಾಗಿ ವಿಜಯ್ ಈ ಗೆಳೆತನ ಬೇಡ ಎಂದು ಹೇಳುತ್ತಾರೆ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.
ಸದ್ಯಕ್ಕೆ ಈ ಎಲ್ಲ ಬೆಳವಣಿಗೆಗಳು ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ, ದೇಶಾದ್ಯಂತ ಇರುವ ಅಭಿಮಾನಿಗಳು ವಿಜಯ್ ಅವರ ಮುಂದಿನ ರಾಜಕೀಯ ನಡೆ ಏನು ಎಂಬ ಬಗ್ಗೆ ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ.ವಿಜಯ್ ಸ್ವತಂತ್ರವಾಗಿ ಕಣಕ್ಕಿಳಿಯುತ್ತಾರಾ..? ಅಥವಾ ಬಿಜೆಪಿಯ ಆಮಿಷಕ್ಕೆ ಒಳಗಾಗುತ್ತಾರಾ..? ಕಿಂಗ್ ಮೇಕರ್ ಆಗುತ್ತಾರಾ ..? ಎನ್ನುವುದಕ್ಕೆ ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ.


Click it and Unblock the Notifications











