ಶಿವಣ್ಣನಿಗೆ ರಜನಿಕಾಂತ್ ಸವಾಲ್; ರಿಷಬ್ ಶೆಟ್ಟಿಗೆ ಎದುರಾಳಿ ಧನುಷ್
ಸಿನಿಮಾ ಬಿಡುಗಡೆಯನ್ನು ಪ್ರಸವ ವೇದನೆಗೆ ಹೋಲಿಸುವವರು ಇದ್ದಾರೆ. ಒಂದು ಸಿನಿಮಾ ಬಿಡುಗಡೆ ಎನ್ನುವುದು ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ಹುಟ್ಟಿದ ಮಗುವಿನ ಹಾಗೆ ಎಂದು ಫಿಲ್ಮ್ ಮೇಕರ್ಸ್ ಹೇಳುತ್ತಿರುತ್ತಾರೆ. ಒಂದು ಸಿನಿಮಾ ಶುರುವಾಗಿ ಚಿತ್ರೀಕರಣಗೊಂಡು ಪ್ರಚಾರ ಎಲ್ಲಾ ಮುಗಿಸಿ ಬಿಡುಗಡೆ ಆಗುವ ವೇಳೆಗೆ ನಿರ್ಮಾಪಕರು ಸುಸ್ತಾಗಿರುತ್ತಾರೆ. ಸಿನಿಮಾ ಬಿಡುಗಡೆ ದಿನಾಂಕದ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತದೆ.
ದೊಡ್ಡ ಸಿನಿಮಾಗಳ ಬಿಡುಗಡೆಗೆ ದೊಡ್ಡ ವೀಕೆಂಡ್ ಬೇಕು ಎನ್ನುವವರು ಇದ್ದಾರೆ. ಹಬ್ಬ ಹರಿದಿನಗಳ ರಜೆ ಸಮಯದಲ್ಲಿ ಸಿನಿಮಾ ತೆರೆಗೆ ಬಂದರೆ ಹೆಚ್ಚು ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರ್ತಾರೆ. ಇದು ನಿಜ ಕೂಡ ಹೌದು. ಅದೇ ಕಾರಣಕ್ಕೆ ವರ್ಷಕ್ಕೂ ಮುನ್ನ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುವವರು ಇದ್ದಾರೆ. ದೊಡ್ಡ ಸಿನಿಮಾಗಳ ಜೊತೆ ಕ್ಲ್ಯಾಶ್ ಆಗಬಾರದು ಎಂದು ಎಚ್ಚರಿಕೆ ವಹಿಸುವವರೇ ಜಾಸ್ತಿ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಬಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. 3 ಕೂಡ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳೇ. ಹಾಗಾಗಿ ಸಹಜವಾಗಿಯೇ ಬಾಕ್ಸಾಫೀಸ್ ಕ್ಲ್ಯಾಶ್ ಎನ್ನುವ ಚರ್ಚೆ ನಡೆಯುತ್ತದೆ. 2 ದೊಡ್ಡ ಸಿನಿಮಾಗಳು ಈ ಬಾರಿ ಇಂಡಿಪೆಂಡೆನ್ಸ್ ಡೇ ವೀಕೆಂಡ್ ತೆರೆಗೆ ಬರಲು ಸಜ್ಜಾಗಿದ್ದವು. ಆ ಲಿಸ್ಟ್‌ಗೆ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಸೇರಿಕೊಂಡಿದೆ.
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್-2' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸೂಪರ್ ಹಿಟ್ ಸರಣಿ ಸೀಕ್ವೆಲ್ ಆಗಿರುವುದು, ತೆಲುಗು ನಟ ತಾರಕ್ ಕೂಡ ನಟಿಸಿರುವುದು ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಬಾಲಿವುಡ್ ಮಾತ್ರವಲ್ಲ ಟಾಲಿವುಡ್ ಅಂಗಳದಲ್ಲಿ ಕೂಡ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸಾಧ್ಯತೆಯಿದೆ. ಆದರೆ ಅದೇ ದಿನ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆ ಮಾಡುವುದಾಗಿ ಇದೀಗ ಘೋಷಣೆ ಮಾಡಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ರಜನಿಕಾಂತ್ ಜೊತೆಗೆ ಉಪೇಂದ್ರ, ಆಮೀರ್ ಖಾನ್ ರೀತಿಯ ಘಟಾನುಘಟಿಗಳು ಚಿತ್ರದಲ್ಲಿ ನಟಿಸಿದ್ದಾರೆ. 'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿಯ ಹಿಟ್ ಸಿನಿಮಾಗಳ ಸರದಾರ ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ವಿಶೇಷ. ಸನ್ ಪಿಕ್ಚರ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಕೂಲಿ' ಸಿನಿಮಾ ನಿರ್ಮಾಣ ಮಾಡಿದೆ. ಅನಿರುದ್ದ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.

ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ವೀಕೆಂಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಕಳೆದ ವರ್ಷ ತಮಿಳಿನ 'ತಂಗಲಾನ್', ಬಾಲಿವುಡ್‌ನ 'ಸ್ತ್ರೀ-2' ಹಾಗೂ ಕನ್ನಡದ 'ಕೃಷ್ಣಂ ಪ್ರಣಯ ಸಖಿ' ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳು ತೆರೆಗಪ್ಪಳಿಸಿದ್ದವು. ಆದರೆ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಆಗಿರಲಿಲ್ಲ. ಆಯಾ ಭಾಷೆಗಳಲ್ಲಿ ಆಯಾ ಸಿನಿಮಾಗಳನ್ನು ನೋಡಿ ಪ್ರೇಕ್ಷಕರು ಮೆಚ್ಚಿದ್ದರು. ಈ ಬಾರಿ ಪರಿಸ್ಥಿತಿ ಆ ರೀತಿ ಇಲ್ಲ.
ವರ್ಷದ ಬಹುನಿರೀಕ್ಷಿತ ಬಾಲಿವುಡ್ ಸಿನಿಮಾ 'ವಾರ್- 2'. ಹೌದು ಈ ವರ್ಷ ಶಾರುಖ್ ಖಾನ್, ಆಮೀರ್ ಖಾನ್ ಸೇರಿದಂತೆ ಘಟಾನುಘಟಿ ಹಿಂದಿ ನಟರ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ಸಲ್ಮಾನ್ ಖಾನ್ ನಟಿಸಿದ 'ಸಿಕಂದರ್' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಅದೇ ಕಾರಣಕ್ಕೆ ಹೃತಿಕ್ ರೋಷನ್ ನಟನೆಯ 'ವಾರ್- 2' ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಅಯಾನ್ ಮುಖರ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
6 ವರ್ಷಗಳ ಹಿಂದೆ ಬಂದಿದ್ದ 'ವಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹೃತಿಕ್ ಜೊತೆ ಟೈಗರ್ ಶ್ರಾಫ್ ಅಬ್ಬರಿಸಿದ್ದರು. ಆದರೆ ಸೀಕ್ವೆಲ್‌ನಲ್ಲಿ ಹೃತಿಕ್ ಜೊತೆ ತೆಲುಗು ನಟ ತಾರಕ್ ಕೈ ಜೋಡಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ದೇಶ ವಿದೇಶಗಳಲ್ಲಿ ಸಾವಿರಾರು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

'ವಾರ್'-2 ಹಾಗೂ 'ಕೂಲಿ' ಎರಡೂ ಕೂಡ ದೊಡ್ಡ ಸಿನಿಮಾಗಳು. ಹಾಗಾಗಿ ಸ್ಕ್ರೀನ್‌ಗಳ ಸಂಖ್ಯೆ, ಬಾಕ್ಸಾಫೀಸ್ ಕಲೆಕ್ಷನ್ ಎಲ್ಲದರ ಮೇಲೆಯೂ ಇದು ಪರಿಣಾಮ ಬೀರಲಿದೆ. ಇನ್ನು ಆಗಸ್ಟ್ 15ಕ್ಕೆ ಕನ್ನಡದ '45' ಸಿನಿಮಾ ಕೂಡ ಬಿಡುಗಡೆ ಆಗಬೇಕಿದೆ. ಅರ್ಜುನ್ ಜನ್ಯಾ ನಿರ್ದೇಶನದ ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಕೂಡ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ '45' ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.
ಇತ್ತೀಚೆಗೆ ಬಿಡುಗಡೆ ಆಗಿದ್ದ '45' ಟೀಸರ್ ಸೂಪರ್ ಹಿಟ್ ಆಗಿದೆ. 'ವಾರ್-2' ಹಾಗೂ 'ಕೂಲಿ' ಚಿತ್ರಗಳಿಗೆ ಹೋಲಿಸಿದರೆ '45' ಚಿಕ್ಕ ಸಿನಿಮಾ ಇರಬಹುದು. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ತಾಖತ್ತು ಚಿತ್ರಕ್ಕಿದೆ. ಇನ್ನು 'ಕೂಲಿ' ಹಾಗೂ '45' ಎರಡೂ ಚಿತ್ರಗಳಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಒಂದೇ ದಿನ 2 ಸಿನಿಮಾ ತೆರೆಗೆ ಬರೋದು ಅನುಮಾನ ಎನ್ನುವಂತಾಗಿದೆ.
ಅಧಿಕೃತವಾಗಿ 'ಕೂಲಿ' ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ಹಾಗಾಗಿ ಆಗಸ್ಟ್ 15ರಂದು ಕನ್ನಡದ '45' ಸಿನಿಮಾ ತೆರೆಗೆ ಬರೋದು ತಡವಾಗಬಹುದು. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ. ಈ ಮೂರು ಸಿನಿಮಾಗಳು ಮಾತ್ರವಲ್ಲ ಹಿಂದಿ, ತೆಲುಗು, ತಮಿಳಿನ ಮತ್ತಷ್ಟು ಸಿನಿಮಾಗಳು ಅದೇ ವೀಕೆಂಡ್ ತೆರೆಗೆ ಬರಲು ತಯಾರಾಗುತ್ತಿವೆ. 'ವಾರ್- 2' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆದರೂ ಅಚ್ಚರಿಪಡಬೇಕಿಲ್ಲ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ: ಚಾಪ್ಟರ್-1' ಸಿನಿಮಾ ಗಾಂಧಿ ಜಯಂತಿ ವೀಕೆಂಡ್‌ನಲ್ಲಿ ಬಿಡುಗಡೆ ಆಗಲಿದೆ. ಕಳೆದ ವರ್ಷವೇ ರಿಲೀಸ್ ಡೇಟ್ ಘೋಷಣೆ ಆಗಿತ್ತು. 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಹಾಗಾಗಿ ಪ್ರೀಕ್ವೆಲ್ ಕೂಡ ನಿರೀಕ್ಷೆ ಹುಟ್ಟು ಹಾಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡದಾಗಿ ಸಿನಿಮಾ ತೆರೆಗೆ ತರ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಇದೀಗ ಅಕ್ಟೋಬರ್ 1ಕ್ಕೆ ಧನುಷ್ ನಿರ್ದೇಶಿಸಿ ನಟಿಸುವ 'ಇಡ್ಲಿ ಕಡೈ' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ನಟನೆ, ನಿರ್ದೇಶನದ ಜೊತೆ ಧನುಷ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ಒಂದು ದಿನದ ಅಂತರದಲ್ಲಿ 'ಕಾಂತಾರ: ಚಾಪ್ಟರ್-1' ಹಾಗೂ 'ಇಡ್ಲಿ ಕಡೈ' ಚಿತ್ರಗಳು ತೆರೆಗೆ ಬರುವಂತಾಗಿದೆ.
ಬಾಕ್ಸಾಫೀಸ್ ಕ್ಲ್ಯಾಶ್ ಆಗಲ್ಲ. ಎರಡೂ ಸಿನಿಮಾ ಚೆನ್ನಾಗಿದ್ದರೆ ಜನ ಎರಡನ್ನೂ ನೋಡುತ್ತಾರೆ. ಹಾಗಂತ ಫೆಸ್ಟಿವಲ್ ವೀಕೆಂಡ್ ಅವಕಾಶ ಮಿಸ್ ಮಾಡಿಕೊಳ್ಳೋಕೆ ಸಾಧ್ಯವಿಲ್ಲ ಎನ್ನುವವರು ಇದ್ದಾರೆ. ಒಟ್ಟಾರೆ ಆಗಸ್ಟ್ 15 ಹಾಗೂ ಅಕ್ಟೋಬರ್ 2ರಂದು ದೊಡ್ಡ ದೊಡ್ಡ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಎದುರುಬದುರಾಗುತ್ತಿವೆ. ಯಾರಿಗೆ ಯಾರು ಸವಾಲು ಹಾಕ್ತಾರೆ? ಯಾರು ಬಾಕ್ಸಾಫೀಸ್ ಕದನದಿಂದ ಹಿಂದೆ ಸರಿಯುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications











