ಮಾಜಿ ಅಳಿಯನ ಜೊತೆ ರಜನಿಕಾಂತ್? ಒಂದೇ ಚಿತ್ರದಲ್ಲಿ ತಲೈವಾ- ಧನುಷ್ ಜುಗಲ್ಬಂದಿ?
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ತಲೈವಾ ಅಬ್ಬರಿಸಿದ್ದಾರೆ. ಇದಕ್ಕೂ ಮುನ್ನ ರಜನಿ ನಟಿಸಿದ 'ಜೈಲರ್' ಸಿನಿಮಾ ಸೂಪರ್ ಹಿಟ್ ಆಗಿತ್ತು.
ವಯಸ್ಸು 70 ದಾಟಿದರೂ ರಜನಿಕಾಂತ್ ಸ್ಟೈಲ್, ಪರ್ಫಾರ್ಮನ್ಸ್‌ಗೆ ಇನ್ನು 20ರ ಹರೆಯ. ತಲೈವಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿವೆ. ಮುಂದೆ ಮತ್ತಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ಸೂಪರ್ ಸ್ಟಾರ್ ನಟಿಸುತ್ತಿದ್ದಾರೆ. ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.

'ಕೂಲಿ' ಬಳಿಕ ವಾಟ್ ನೆಕ್ಸ್ಟ್ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ತಲೈವಾ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಕಳೆದ ವರ್ಷ 'ಜೈಲರ್' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಶಿವಣ್ಣ ಹಾಗೂ ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಚಿತ್ರದ ಸೀಕ್ವೆಲ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಧನುಷ್ ಕೂಡ 'ಜೈಲರ್-2' ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ರಜನಿಕಾಂತ್ ಮಗಳು ಐಶ್ವರ್ಯ ಜೊತೆ ಧನುಷ್ ಮದುವೆ ಆಗಿದ್ದರು. ಎರಡು ವರ್ಷಗಳ ಹಿಂದೆ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಆದರೆ ಇನ್ನು ಅಧಿಕೃತವಾಗಿ ಇಬ್ಬರೂ ದೂರಾಗಿಲ್ಲ, ಮತ್ತೆ ಇಬ್ಬರು ಒಂದಾಗುತ್ತಾರೆ ಎನ್ನುವ ಗುಸುಗುಸು ಕೂಡ ಇದೆ. ಇದೆಲ್ಲದರ ನಡುವೆ 'ಜೈಲರ್' ಸೀಕ್ವೆಲ್‌ನಲ್ಲಿ ಧನುಷ್‌ಗಾಗಿ ನೆಲ್ಸನ್ ಒಂದು ಪಾತ್ರ ಡಿಸೈನ್ ಮಾಡಿದ್ದಾರೆ ಎನ್ನಲಾಗ್ತಿದೆ.

'ಜೈಲರ್-2' ಚಿತ್ರಕ್ಕಾಗಿ ಕಥೆ ಸಿದ್ಧಪಡಿಸುತ್ತಿರುವುದಾಗಿ ನೆಲ್ಸನ್ ಹೇಳಿಕೊಂಡಿದ್ದಾರೆ. ಕಥೆ ಸಿದ್ಧವಾದ ಬಳಿಕ ಹೋಗಿ ತಲೈವಾ ಜೊತೆ ಚರ್ಚಿಸಿ ಸಿನಿಮಾ ಘೋಷಿಸುವ ಸಾಧ್ಯತೆಯಿದೆ. ರಜನಿಕಾಂತ್ ಒಪ್ಪಿದರೆ ವಿಶೇಷ ಪಾತ್ರದಲ್ಲಿ ಧನುಷ್‌ನ ತೋರಿಸಲು ನೆಲ್ಸನ್ ಉತ್ಸುಕರಾಗಿದ್ದಾರೆ ಎಂದು ಹೇಳಲಾಗ್ತಿದೆ. ತನ್ನದೇ ಪರಿಶ್ರಮದಿಂದ ಬೆಳೆದು ಬಂದ ನಟ ಧನುಷ್. ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇದೇ ವರ್ಷ 'ರಾಯನ್' ಎನ್ನುವ ಚಿತ್ರವನ್ನು ನಿರ್ದೇಶಿಸಿ ನಟಿಸಿ ಧನುಷ್ ಗೆದ್ದಿದ್ದರು. ಸದ್ಯ 'ಕುಬೇರ' ಹಾಗೂ 'ಇಡ್ಲಿ ಕಡೈ' ಎನ್ನುವ ಮತ್ತೆರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ರಜನಿಕಾಂತ್ ಹಾಗೂ ಧನುಷ್ ಈವರೆಗೆ ಒಟ್ಟಿಗೆ ನಟಿಸಿಲ್ಲ. ಒಬ್ಬರನ್ನು ಒಂದೇ ಫ್ರೇಮ್‌ನಲ್ಲಿ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿತ್ತು. ನೆಲ್ಸನ್ ಆ ಪ್ರಯತ್ನದಲ್ಲಿ ಯಶಸ್ವಿ ಆಗುತ್ತಾರಾ? ಕಾದು ನೋಡಬೇಕಿದೆ. ತಲೈವಾ ಜೊತೆ ಮಾಜಿ ಅಳಿಯ ಕೈಜೋಡಿಸಿದರೆ ಬಾಕ್ಸಾಫೀಸ್ ಶೇಕ್ ಆಗುವುದು ಗ್ಯಾರೆಂಟಿ.
ಇನ್ನು ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಾರೆ ಎಂದು ಸಾಕಷ್ಟು ಜನ ನಿರೀಕ್ಷಿಸುತ್ತಿದ್ದಾರೆ. ತಲೈವಾ ಇಬ್ಬರ ಜೊತೆ ಮಾತನಾಡಿ ಒಪ್ಪಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಡಿವೋರ್ಸ್ ಅರ್ಜಿ ವಿಚಾರಣೆಗೆ ಧನುಷ್, ಐಶ್ವರ್ಯ ಗೈರಾಗಿದ್ದರು. ಇನ್ನು ಇತ್ತೀಚೆಗೆ 'ವೆಟ್ಟೆಯಾನ್' ಚಿತ್ರವನ್ನು ಇಬ್ಬರೂ ಒಂದೇ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದರು. ಆದರೆ ಒಟ್ಟಿಗೆ ಕೂತಿರಲಿಲ್ಲ. ಮಕ್ಕಳಿಗಾಗಿ ಆಗಾಗ್ಗೆ ಇಬ್ಬರೂ ಒಟ್ಟಿಗೆ ಸೇರುತ್ತಿರುತ್ತಾರೆ.
'ಜೈಲರ್' ಚಿತ್ರದ ಬಗ್ಗೆ ಹೇಳುವುದಾದರೆ ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಿಸಿತ್ತು. ಚಿತ್ರದಲ್ಲಿ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ತಲೈವಾ ಅಬ್ಬರಿಸಿದ್ದರು. ಅನಿರುದ್ದ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಅಂದಾಜು 200 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಅದೇ ಕಾರಣಕ್ಕೆ ಚಿತ್ರದ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ.


Click it and Unblock the Notifications











