Rajinikanth Biopic; ತಲೈವಾ ಜೀವನಾಧರಿತ ಚಿತ್ರದಲ್ಲಿ ಧನುಷ್ ಅಲ್ಲ ಈ ಯುವನಟ ಹೀರೊ?
ಬಯೋಪಿಕ್‌ಗಳ ಟ್ರೆಂಡ್ ಚಿತ್ರರಂಗಕ್ಕೆ ಹೊಸದೇನು ಅಲ್ಲ. ಈಗಾಗಲೇ ಸಾಕಷ್ಟು ಸಾಧಕರ ಸಾಧನೆಯ ಕಥೆಗಳು ದೃಶ್ಯರೂಪ ಪಡೆದಿವೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು ಹಾಗೂ ರಾಜಕೀಯ ನಾಯಕರ ಕಥೆಗಳನ್ನು ಸಿನಿಮಾ ಮಾಡಲು ಫಿಲ್ಮ್ ಮೇಕರ್ಸ್ ಸದಾ ಮುಂದೆ ಇರುತ್ತಾರೆ. ಸದ್ಯ ನಟ ರಜನಿಕಾಂತ್ ಬಯೋಪಿಕ್ ಬಗ್ಗೆ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯವಾಲ ತಮಿಳು ನಟ ರಜನಿಕಾಂತ್ ಭೇಟಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ ವೈರಲ್ ಆಗಿತ್ತು. ರಜನಿಕಾಂತ್ ಬಯೋಪಿಕ್ ಹಕ್ಕುಗಳನ್ನು ಪಡೆಯಲು ಸಾಜಿದ್ ಭೇಟಿ ಮಾಡಿದ್ದರು ಎನ್ನುವ ಗುಸುಗುಸು ಇದೀಗ ಶುರುವಾಗಿದೆ. ಈಗಾಗಲೇ ಈ ಸಂಬಂಧ ರಜನಿಕಾಂತ್ ಜೊತೆ ನಿರ್ಮಾಪಕರು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಬೆಂಗಳೂರಿನ ಬಿಟಿಎಸ್ ಬಸ್ ಕಂಡೆಕ್ಟರ್ ಶಿವಾಜಿರಾವ್ ಗಾಯಕ್‌ವಾಡ್, ಸೂಪರ್ ಸ್ಟಾರ್ ರಜನಿಕಾಂತ್ ಆಗಿ ಗೆದ್ದ ಕಥೆ ಎಲ್ಲರಿಗೂ ಗೊತ್ತೇಯಿದೆ. ಇದನ್ನು ದೊಡ್ಡಮಟ್ಟದಲ್ಲಿ ವಿಶ್ವದಾದ್ಯಂತ ಇರುವ ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನ ನಡೀತಿದೆ ಎನ್ನಲಾಗುತ್ತಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಆರಂಭವಾಗಿದ್ದು ಮುಂದಿನ ವರ್ಷ ಸಿನಿಮಾ ಶುರುವಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈಗಾಗಲೇ ಸಿಲ್ಕ್‌ಸ್ಮಿತಾ, ಎನ್‌ಟಿಆರ್, ಜಯಲಲಿತಾ, ಸಾವಿತ್ರಿ ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರ ಜೀವನ ಚರಿತ್ರೆ ಸಿನಿಮಾ ರೂಪ ಪಡೆದಿದೆ. ಇದೇ ಸಾಲಿಗೆ ರಜನಿಕಾಂತ್ ಪ್ರೇರಣದಾಯಕ ಕಥೆಯೂ ಸೇರಿಕೊಳ್ಳಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ಮಾಡೋದೇನೊ ಸರಿ, ಹೀರೊ ಯಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಸ್ಟೈಲ್ ಕಿಂಗ್ ಪಾತ್ರ ಮಾಡೋದು ಅಂದ್ರೆ ಸಾಮಾನ್ಯದ ಮಾತಲ್ಲ.
ಸದ್ಯ ತಮಿಳಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಬಯೋಪಿಕ್ ಸಿನಿಮಾ ನಿರ್ಮಾಣವಾಗುತ್ತಿದೆ. ನಟ ಧನುಷ್ ಚಿತ್ರದಲ್ಲಿ ಸಂಗೀತ ಮಾಂತ್ರಿಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ರಜನಿಕಾಂತ್ ಬಯೋಪಿಕ್‌ನಲ್ಲಿ ನಟಿಸುವ ಇಂಗಿತವನ್ನು ಧನುಷ್ ವ್ಯಕ್ತಪಡಿಸಿದ್ದರು. ಆದರೆ ಇದೀಗ ರಜನಿಕಾಂತ್ ಪಾತ್ರಕ್ಕೆ ಮತ್ತೊಬ್ಬ ಯುವ ನಟನ ಹೆಸರು ಕೇಳಿಬರುತ್ತಿದೆ.

ತಮಿಳು ನಟ ಶಿವಕಾರ್ತಿಕೇಯನ್ ತೆರೆಮೇಲೆ ಸೂಪರ್ ಸ್ಟಾರ್ ಆಗಿ ದರ್ಬಾರ್ ಮಾಡ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಶಿವ ಕಾರ್ತಿಕೇಯನ್ ಮಾತ್ರ ತಲೈವಾ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಕೆಲವರು ಕೇಳುತ್ತಿದ್ದಾರೆ. ಇದೇ ವಿಚಾರ ಇದೀಗ ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ತಮಿಳು ನಟ ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಾರಾ? ಅಥವಾ ಬೇರೆ ಯಾರಾದರೂ ಬಾಲಿವುಡ್ ನಟ ತೆರೆಮೇಲೆ ಸ್ಟೈಲ್ ಕಿಂಗ್ ಆಗಿ ಮಿಂಚುತ್ತಾರಾ? ಕಾದು ನೋಡಬೇಕಿದೆ. ಒಟ್ನಲ್ಲಿ ರಜನಿಕಾಂತ್ ಬಯೋಪಿಕ್ ಬರುತ್ತದೆ ಎನ್ನುವ ಸಂಗತಿಯೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ರಜನಿಕಾಂತ್ ಬಯೋಪಿಕ್‌ನಲ್ಲಿ ಅವರ ಸಿನಿಮಾಗಳ ಕಥೆಗಿಂತ ಹೆಚ್ಚು ಅವರ ಮಾನವೀಯ ಗುಣಗಳ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ತಲೈವಾ ಸಹಳತೆ, ಸೇವಾಗುಣದ ಬಗ್ಗೆ ಹೆಚ್ಚು ಗಮನಹರಿಸಿ ಕಥೆ, ಚಿತ್ರಕಥೆ ಮಾಡುತ್ತಾರೆ ಎನ್ನುವ ಚರ್ಚೆಯೂ ನಡೆಯುತ್ತಿದೆ. ಚಿತ್ರಕ್ಕೆ ಆಕ್ಷನ್ ಕಟ್ ಯಾರು ಹೇಳುತ್ತಾರೆ ಎನ್ನುವ ಬಗ್ಗೆಯೂ ಇನ್ನು ಮಾಹಿತಿ ಸಿಕ್ಕಿಲ್ಲ.
ತಮಿಳು ನಟ ಶಿವಕಾರ್ತಿಕೇಯನ್ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ವಜ್ರಕಾಯ' ಚಿತ್ರದ ಹಾಡೊಂದರಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದರು. ಇನ್ನು ರಜನಿಕಾಂತ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ವೆಟ್ಟೈಯಾನ್' ಸಿನಿಮಾ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ತಲೈವಾ ನಟಿಸಲಿದ್ದಾರೆ. ಇನ್ನಯ ತಲೈವಾ ಬಯೋಪಿಕ್ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.


Click it and Unblock the Notifications










