ಠುಸ್ ಆಯ್ತು ಅಭಿಮಾನಿಗಳ ಲೆಕ್ಕಾಚಾರ; 'ಜೈಲರ್'-2 ಚಿತ್ರದಿಂದ ಬೇಸರದ ಸುದ್ದಿ
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಜೈಲರ್' ಸಿನಿಮಾ ಸೀಕ್ವೆಲ್ ಇದು. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು.
ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಜೈಲರ್' ಸಿನಿರಸಿಕರಿಗೆ ಭರ್ಜರಿ ಮನರಂಜನೆ ಒದಗಿಸಿತ್ತು. ಅದರ ಬೆನ್ನಲ್ಲೇ ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ಧ್ ರವಿಚಂದರ್ ಮೂವರಿಗೆ ಲಾಭದಲ್ಲಿ ಪಾಲು, ತಲಾ ಒಂದೊಂದು ಕಾರ್ ಕೊಟ್ಟು ಸೀಕ್ವೆಲ್ ಚಿತ್ರಕ್ಕೆ ಬುಕ್ ಮಾಡಿದ್ದರು. ಕೊಂಚ ತಡವಾಗಿ 'ಜೈಲರ್'-2 ಸಿನಿಮಾ ಶುರುವಾಗಿತ್ತು. ಇದೀಗ ಬಹುತೇಕ ಚಿತ್ರೀಕರಣ ಮುಕ್ತಾಯವಾಗುತ್ತಾ ಬಂದಿದೆ.

'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಶಿವಣ್ಣ ಹಾಗು ಮ್ಯಾಥ್ಯೂ ಆಗಿ ಮೋಹನ್ ಲಾಲ್ ಖದರ್ ತೋರಿಸಿದ್ದರು. ಅತಿಥಿ ಪಾತ್ರಗಳಲ್ಲಿ ಇವರಿಬ್ಬರ ಆರ್ಭಟ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು. ಅದರಲ್ಲೂ ಸೆಂಚುರಿ ಸ್ಟಾರ್ ಅಬ್ಬರ ನೋಡಿ ಪರಭಾಷಿಕರು ಫಿದಾ ಆಗಿದ್ದರು. ಸೀಕ್ವೆಲ್‌ನಲ್ಲಿ ಕೂಡ ಇದೇ ಮ್ಯಾಜಿಕ್ ಮುಂದುವರೆಯಲಿದೆ. ಜೊತೆಗೆ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನಲಾಗ್ತಿದೆ.
ವರದಿಗಳ ಪ್ರಕಾರ ಶಾರುಖ್ ಖಾನ್ 'ಜೈಲರ್'-2 ಚಿತ್ರದಲ್ಲಿ ನಟಿಸುತ್ತಿಲ್ಲ. ಹಾಗಾಗಿ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಕಿಂಗ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ರೆ, ಹಿಂದಿ ಬೆಲ್ಟ್‌ನಲ್ಲಿ ಚಿತ್ರಕ್ಕೆ ಕ್ರೇಜ್ ಶುರುವಾಗುತ್ತದೆ ಎಂದು ಭಾವಿಸಲಾಗಿತ್ತು. ಇನ್ನು ತೆಲುಗು ನಟ ಬಾಲಯ್ಯ ಕೂಡ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಅದೆಲ್ಲವೂ ಸುಳ್ಳು ಎನ್ನುವ ಚರ್ಚೆ ಶುರುವಾಗಿದೆ.
ಈ ಹಿಂದೆ 'ರಾ-ವನ್' ಚಿತ್ರದಲ್ಲಿ ರಜನಿಕಾಂತ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಶಾರುಖ್ ಈಗ 'ಜೈಲರ್- 2' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನಲಾಗ್ತಿದೆ. ಬಾಲಯ್ಯ ಸೇರಿದಂತೆ ಬೇರೆ ಕಲಾವಿದರನ್ನು ಸೀಕ್ವೆಲ್ ಚಿತ್ರದಲ್ಲಿ ಸೇರಿಸುವ ಪ್ರಯತ್ನ ನೆಲ್ಸನ್ ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
'ಜೈಲರ್'-2 ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಸ್ವತಃ ತಮಿಳು ವಿಜಯ್ ಸೇತುಪತಿ ಹೇಳಿಕೊಂಡಿದ್ದರು. ಆದರೆ ಅದು ಕೂಡ ಸುಳ್ಳು ಎನ್ನಲಾಗ್ತಿದೆ. ಹಾಗಾಗಿ ಅಭಿಮಾನಿಗಳಿಗೆ ಬೇಸರವಾಗುವುದರಲ್ಲಿ ಅನುಮಾನವೇ ಇಲ್ಲ. ಮತ್ತೊಮ್ಮೆ ರಜನಿಕಾಂತ್ ಮಾಜಿ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ರಮ್ಯಾಕೃಷ್ಣ ಮಡದಿ ಪಾತ್ರದಲ್ಲಿ ನಟಿಸಿದ್ದಾರೆ. ಮುತ್ತುವೇಲ್ ಪಾಂಡಿಯನ್ ಮುಂದಿನ ಕಥೆಯ ಜೊತೆಗೆ ಹಿಂದಿನ ಕಥೆಯನ್ನು ಕೂಡ ಹೇಳುವ ಪ್ರಯತ್ನ ಮಾಡಲಾಗ್ತಿದೆ. ಹಾಗಾಗಿ ಇದು ಸೀಕ್ವೆಲ್ ಜೊತೆಗೆ ಪ್ರೀಕ್ವೆಲ್ ಎನ್ನಬಹುದು.
ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲೇ 'ಜೈಲರ್'-2 ಸಿನಿಮಾ ನಿರ್ಮಾಣವಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗ್ತಿದ್ದು ಭಾರೀ ಸಂಭಾವನೆಯನ್ನು ರಜನಿಕಾಂತ್ ಪಡೆಯುತ್ತಿದ್ದಾರೆ. ಅನಿರುದ್ಧ್ ಮ್ಯೂಸಿಕ್ ಮ್ಯಾಜಿಕ್ ಇರಲಿದೆ. ಯೋಗಿಬಾಬು, ಮಿರ್ನಾ, ಅನ್ನಾ ರಾಜನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಸ್. ಜೆ ಸೂರ್ಯ ವಿಲನ್ ಆಗಿ ಅಬ್ಬರಿಸಲಿದ್ದಾರೆ.
ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ. ಜೂನ್ 12ಕ್ಕೆ 'ಜೈಲರ್-2' ಸಿನಿಮಾ ರಿಲೀಸ್ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಈಗಾಗಲೇ ಕಮಲ್ ಹಾಸನ್ ಜೊತೆ ನಟಿಸೋಕೆ ರಜನಿಕಾಂತ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆಗಸ್ಟ್ ವೇಳೆಗೆ ಆ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎಂದು ರಜನಿಕಾಂತ್ ಮಾಹಿತಿ ನೀಡಿದ್ದಾರೆ. 'ಕೂಲಿ' ಸಿನಿಮಾ ನಿರೀಕ್ಷೆ ತಕ್ಕಂತೆ ಗೆಲ್ಲಲಿಲ್ಲ. ಹಾಗಾಗಿ 'ಜೈಲರ್- 2' ಸಿನಿಮಾ ಬಗ್ಗೆ ಕೆಲವರಿಗೆ ಅನುಮಾನವಿದೆ. ಶೀಘ್ರದಲ್ಲೇ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.


Click it and Unblock the Notifications











