ವಾರೆವ್ಹಾ.. ತಮಿಳಿನ ಇಬ್ಬರು ಸೂಪರ್ ಸ್ಟಾರ್‌ಗಳ ಚಿತ್ರಗಳಲ್ಲಿ ಶ್ರೀಲೀಲಾ?
ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ಅತ್ತ ಫಿಲ್ಮ್ ನಗರ್‌ನಲ್ಲಿ ಕೂಡ 'ಕಿಸ್' ಬೆಡಗಿ ಕ್ರೇಜ್ ಕಮ್ಮಿ ಆಗಿದೆ. ಕಳೆದ ವರ್ಷ ಏಳೆಂಟು ಸಿನಿಮಾಗಳು ಕೈಯಲ್ಲಿದ್ದವು. ಆದರೆ ಈಗ ಖಾಲಿ ಖಾಲಿ.
'ಪೆಳ್ಳಿ ಸಂದಡಿ' ಚಿತ್ರದಲ್ಲಿ ನಟಿಸಿ ತೆಲುಗು ಚಿತ್ರರಂಗಕ್ಕೆ ಶ್ರೀಲೀಲಾ ಪಾದಾರ್ಪಣೆ ಮಾಡಿದ್ದರು. ಬಳಿಕ 'ಧಮಾಕ' ಚಿತ್ರದಲ್ಲಿ ರವಿತೇಜಾ ಜೋಡಿಯಾಗಿ ಮೋಡಿ ಮಾಡಿದ್ದರು ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ಆಕೆಯ ಹವಾ ಶುರುವಾಯಿತು. ಬಾಲಕೃಷ್ಣ, ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆ ನಟಿಸೋ ಅವಕಾಶ ಸಿಕ್ಕಿತ್ತು.

ಟಾಲಿವುಡ್ ಅಂಗಳದಲ್ಲಿ ಶ್ರೀ ದರ್ಬಾರ್ ನೋಡಿ ಕೆಲವರು ದಂಗಾಗಿದ್ದರು. ಆದರೆ ನಟಿಸಿದ ಯಾವುದೇ ಸಿನಿಮಾ ಕೈ ಹಿಡಿಯಲಿಲ್ಲ. 'ಭಗವಂತ್ ಕೇಸರಿ' ಚಿತ್ರದಲ್ಲಿ ಬಾಲಕೃಷ್ಣ ಮಗಳಾಗಿ ಕಾಣಿಸಿಕೊಂಡಿದ್ದರು. 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಸಿನಿಮಾ ಕೂಡ ಗೆಲ್ಲಲಿಲ್ಲ. ಶ್ರೀಲೀಲಾ ಒಂದೆರಡು ಸೀನ್ಸ್ ಹಾಗೂ ಸಾಂಗ್ಸ್‌ಗೆ ಸೀಮಿತವಾಗಿಬಿಟ್ಟರು.
ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಆದರೆ ಪವನ್ ಕಲ್ಯಾಣ್ ಪಾಲಿಟಿಕ್ಸ್ ಕಡೆ ಮುಖ ಮಾಡಿರುವುದರಿಂದ ಸಿನಿಮಾ ಅರ್ಧಕ್ಕೆ ನಿಂತಿದೆ. ಸದ್ಯಕ್ಕೆ ಮತ್ತೆ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಶ್ರೀಲೀಲಾ ನಿಧಾನವಾಗಿ ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳುತ್ತಿರುವುದಾಗಿ ಹೇಳಿದ್ದಾರೆ.
ದಳಪತಿ ವಿಜಯ್ ಹಾಗೂ ಥಲಾ ಅಜಿತ್ ತಮಿಳು ಚಿತ್ರರಂಗದ ಸ್ಟಾರ್ ನಟರು. ರಜನಿಕಾಂತ್ ಬಳಿಕ ಆ ಮಟ್ಟಿಗೆ ಸ್ಟಾರ್‌ಡಮ್ ಇರುವು ಹೀರೊಗಳು. ಸದ್ಯ ಇವರಿಬ್ಬರ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. ಶ್ರೀಲೀಲಾ ಒಳ್ಳೆ ಡ್ಯಾನ್ಸರ್ ಕೂಡ ಹೌದು. ತೆಲುಗಿನ ಸ್ಟಾರ್ ನಟರು ಆಕೆಯ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಸದ್ಯ ನಟ ವಿಜಯ್ 'ಗೋಟ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಅಂದಹಾಗೆ 'ಗೋಟ್' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಶ್ರೀಲೀಲಾ ಕುಣಿಯುತ್ತಾರೆ ಎನ್ನುವ ಚರ್ಚೆ ಕಾಲಿವುಡ್‌ನಲ್ಲಿ ಶುರುವಾಗಿದೆ. ಮತ್ತೊಂದು ಕಡೆ ಥಲಾ ಅಜಿತ್ ನಟನೆಯ ಹೊಸ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಆಗುತ್ತಾರೆ ಎನ್ನುವ ಊಹಾಪೋಹ ಸಹ ಶುರುವಾಗಿದೆ.
ಅಜಿತ್ ಸದ್ಯ 'ವಿದಾಮುಯರ್ಚಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಳಿಕ 'ಗುಡ್ ಬ್ಯಾಡ್ ಅಗ್ಲಿ' ಎನ್ನುವ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಹೆಸರು ಪರಿಶೀಲನೆಯಲ್ಲಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಿಕ್ ರವಿಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.
ಇನ್ನು ಶ್ರೀಲೀಲಾ ಸದ್ಯಕ್ಕೆ ಯಾವುದೇ ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕನ್ನಡದ 'ಕಿಸ್' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. ಬಳಿಕ 'ಭರಾಟೆ' ಹಾಗೂ 'ಬೈಟು ಲವ್' ಸಿನಿಮಾಗಳಲ್ಲಿ ಮಿಂಚಿದ್ದರು. 'ಜ್ಯೂನಿಯರ್' ಎನ್ನುವ ಮತ್ತೊಂದು ಚಿತ್ರಕ್ಕೂ ಆಯ್ಕೆ ಆಗಿದ್ದರು. ಆದರೆ ಯಾಕೋ ಆ ಸಿನಿಮಾ ಸುದ್ದಿಯೇ ಇಲ್ಲದಂತಾಗಿದೆ.


Click it and Unblock the Notifications











