'ಜೈಲರ್' ಸೀಕ್ವೆಲ್ ಟೈಟಲ್ ಲೀಕ್!; ರಜನಿಕಾಂತ್ ಜೊತೆ ಶಿವಣ್ಣ ಕೂಡ ಅಬ್ಬರಿಸ್ತಾರಾ?
ನೆಲ್ಸನ್ ನಿರ್ದೇಶನದಲ್ಲಿ 'ಜೈಲರ್' ಸಿನಿಮಾ ಕಳೆದ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಕೊಟ್ಟಿತ್ತು. ಚಿತ್ರಕ್ಕೆ ಶಿವಣ್ಣ, ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಪ್ಲಸ್ ಆಗಿತ್ತು. ಸದ್ಯ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.
'ಜೈಲರ್' ಸಕ್ಸಸ್ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಗುಸುಗುಸು ಶುರುವಾಗಿತ್ತು. ಚಿತ್ರತಂಡ ಕೂಡ ಇದಕ್ಕೆ ಜೈ ಎಂದಿತ್ತು. ಆದರೆ ಸಿನಿಮಾ ಯಾವಾಗ ಶುರುವಾಗುತ್ತದೆ? ಎನ್ನುವ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. 'ಜೈಲರ್' ಬಳಿಕ ನೆಲ್ಸನ್ ಬೇರೆ ಸಿನಿಮಾಗಳನ್ನು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಯಾರೊಟ್ಟಿಗೆ ಸಿನಿಮಾ ಎನ್ನುವುದು ಪಕ್ಕಾ ಆಗಿರಲಿಲ್ಲ. ಕಾಲಿವುಡ್‌ನಲ್ಲಿ ನಡೆಯುತ್ತಿರುವ ಚರ್ಚೆ ಪ್ರಚಾರ ಶೀಘ್ರದಲ್ಲೇ 'ಜೈಲರ್-2' ಘೋಷಣೆ ಆಗಲಿದೆ.

'ಜೈಲರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದರಿಂದ ಸನ್ ಪಿಕ್ಚರ್ಸ್ ಸಂಸ್ಥೆ ಖುಷಿಯಾಗಿತ್ತು. ಚಿತ್ರದ ಲಾಭದಿಂದ ಬಂದ ಒಂದಷ್ಟು ಹಣವನ್ನು ರಜನಿಕಾಂತ್, ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್‌ಗೆ ನಿರ್ಮಾಪಕರು ನೀಡಿದ್ದರು. ಮೂವರಿಗೆ ಐಷಾರಾಮಿ ಕಾರುಗಳು ಉಡುಗೊರೆಯಾಗಿ ಸಿಕ್ಕಿತ್ತು. ಆಗಲೇ ನಿರ್ಮಾಪಕರು ಸೀಕ್ವೆಲ್‌ಗೆ ವೇದಿಕೆ ಸಿದ್ಧ ಮಾಡ್ತಿದ್ದಾರೆ ಎನ್ನಲಾಗಿತ್ತು. ಇನ್ನು ಆಸ್ಪತ್ರೆಗಳಲ್ಲಿರುವ ಬಡ ರೋಗಿಗಳಿಗೂ ನಿರ್ಮಾಪಕರು ಹಣ ಸಹಾಯ ಮಾಡಿದ್ದರು.
ಬಾಲಿವುಡ್ ಪಿಂಕ್‌ವಿಲ್ಲಾ ವರದಿ ಪ್ರಕಾರ 'ಜೈಲರ್'-2 ಚಿತ್ರಕ್ಕೆ 'ಹುಕುಂ' ಎನ್ನುವ ಟೈಟಲ್ ಪರಿಶೀಲನೆ ನಡೀತಿದೆಯಂತೆ. ಪ್ರೀಕ್ವೆಲ್‌ನಲ್ಲಿ 'ಹುಕುಂ ಟೈಗರ್ ಕಾ ಹುಕುಂ' ಸಾಂಗ್ ಹಿಟ್ ಆಗಿತ್ತು. ಈ ಸಾಲು ಸಖತ್ ಸದ್ದು ಮಾಡಿತ್ತು. ಇದೇ ಟೈಟಲ್‌ನಲ್ಲಿ ಸಿನಿಮಾ ಮಾಡಲು ನೆಲ್ಸನ್ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. 'ಜೈಲರ್'-2 ಎನ್ನುವ ಟೈಟಲ್ ಕೂಡ ಚರ್ಚೆಯಲ್ಲಿದೆಯಂತೆ.

ಈಗಾಗಲೇ 'ಜೈಲರ್' ಸೀಕ್ವೆಲ್ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿದೆ. ಇನ್ನೆರಡು ತಿಂಗಳಲ್ಲಿ ಪ್ರೀ ಪ್ರೊಡಕ್ಷನ್ ಶುರು ಎನ್ನಲಾಗ್ತಿದೆ. 'ಜೈಲರ್' ಚಿತ್ರದಲ್ಲಿ ನಿವೃತ್ತ ಜೈಲರ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದರು. ಆತನ ಹಿನ್ನೆಲೆ ಏನು? ಎನ್ನುವುದರ ಸಣ್ಣ ಝಲಕ್ ಅಷ್ಟೇ ತೋರಿಸಲಾಗಿತ್ತು. ಪ್ರೀಕ್ವೆಲ್‌ನಲ್ಲಿ ಇದನ್ನು ಮತ್ತಷ್ಟು ದೊಡ್ಡದಾಗಿ ತೋರಿಸುತ್ತಾರೆ.
ಮುತ್ತುವೇಲ್ ಪಾಂಡಿಯನ್‌ಗೆ ನರಸಿಂಹ(ಶಿವರಾಜ್‌ಕುಮಾರ್) ಹಾಗೂ ಮ್ಯಾಥ್ಯೂ(ಮೋಹನ್ ಲಾಲ್) ಪರಿಚಯ, ಸ್ನೇಹ ಹೇಗೆ ಎನ್ನುವುದರ ಬಗ್ಗೆಯೂ ಸೀಕ್ವೆಲ್‌ನಲ್ಲಿ ಹೇಳುವ ಸಾಧ್ಯತೆಯಿದೆ. ಹಾಗಾಗಿ ಶಿವಣ್ಣ ಹಾಗೂ ಮೋಹನ್ ಲಾಲ್ ಸೀಕ್ವೆಲ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಅಧಿಕೃತವಾಗಿ 'ಜೈಲರ್'-2 ಸಿನಿಮಾ ಘೋಷಣೆ ಆಗಲಿದೆ.
ಸದ್ಯ ರಜನಿಕಾಂತ್ ನಟನೆಯ 'ವೆಟ್ಟೈಯಾನ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಜ್ಞಾನವೇಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಕಿಶೋರ್, ಮಂಜು ವಾರಿಯರ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಾಜು 160 ಕೋಟಿ ರೂ. ಬಜೆಟ್‌ನಲ್ಲಿ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಿಸುತ್ತಿದೆ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಇರಲಿದೆ.
'ವೆಟ್ಟೈಯಾನ್' ಬಳಿಕ 'ತಲೈವಾ 171' ಸಿನಿಮಾ ಶುರುವಾಗಲಿದೆ. ಲೋಕೇಶ್ ಕನಕರಾಜ್ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆಯೇ ಈ ಸಿನಿಮಾ ನಿರ್ಮಿಸಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ಸದ್ಯ ಪ್ರೋವೊ ಚಿತ್ರೀಕರಣ ಕೂಡ ನಡೆದಿದ್ದು ಶೀಘ್ರದಲ್ಲೇ ಸಿನಿಮಾ ಟೈಟಲ್ ರಿವೀಲ್ ಮಾಡುವ ಸಾಧ್ಯತೆಯಿದೆ. ಚಿತ್ರದ ಟೈಟಲ್ 'ಕಳುಗು' ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು.


Click it and Unblock the Notifications










