'ಸೂರರೈ ಪೊಟ್ರು' ಸಿನಿಮಾದ ಬಗ್ಗೆ ರಿಯಲ್ ಹೀರೋ ಕ್ಯಾಪ್ಟನ್ ಗೋಪಿನಾಥ್ ಹೇಳಿದ್ದೇನು?
ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾ 'ಸೂರರೈ ಪೊಟ್ರು' ರಿಲೀಸ್ ಆಗಿದೆ. ನವೆಂಬರ್ 12ರಂದು ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸೂರರೈ ಪೊಟ್ರು ಸಿನಿಮಾ ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬಂದಿದೆ.
ಗೋಪಿನಾಥ್ ಅವರ ಸ್ಫೂರ್ತಿದಾಯಕ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದ ಗೋಪಿನಾಥ್, ಹಾಸನ ಜಿಲ್ಲೆಯ ಗೊರೂರಿನಲ್ಲಿ ಬೆಳೆದರು. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಾರೆ. ಆ ನಂತರ ಏರ್ ಡೆಕ್ಕರ್ ವಿಮಾನಯಾನ ಸಂಸ್ಥೆಯ ಹುಟ್ಟುಹಾಕುತ್ತಾರೆ. ದೇಶದಲ್ಲಿ ವಿಮಾನ ಪ್ರಯಾಣ ದುಬಾರಿ ಎನ್ನುತ್ತಿದ್ದ ಕಾಲದಲ್ಲಿ ವಿಮಾನಯಾನ ಸಂಸ್ಥೆ ಹುಟ್ಟುಹಾಕಿ ಸಾಮಾನ್ಯರಿಗೂ ವಿಮಾನಯಾನ ಸಾಧ್ಯವಾಗಿಸಿ, ಕೈಗೆಟುವ ದರಕ್ಕೆ ತಂದು ನಿಲ್ಲಿಸಿದ್ದು ಗೋಪಿನಾಥ್. ಇವರ ಜೀವನದ ಸಾದನೆ ಈಗ ಸಿನಿಮಾವಾಗಿ ರಿಲೀಸ್ ಆಗಿದೆ. ತನ್ನದೆ ಯಶೋಗಾಥೆ ಕುರಿತ ಸಿನಿಮಾ ಬಗ್ಗೆ ಗೋಪಿನಾಥ್ ಹೇಳಿದ್ದೇನು? ಮುಂದೆ ಓದಿ..

ಸಿನಿಮಾ ನೋಡಿ ಮೆಚ್ಚಿಕೊಂಡ ಗೋಪಿನಾಥ್
ರಿಯಲ್ ಹೀರೋ ಗೋಪಿನಾಥ್ ಸೂರರೈ ಪೊಟ್ರು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 'ಸೂರರೈ ಪೊಟ್ರು ನನ್ನ ಪುಸ್ತಕದ ಕಥೆಯ ನಿಜವಾದ ಸಾರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಿಜವಾದ ರೋಲರ್ ಕೋಸ್ಟರ್. ಕಳೆದ ರಾತ್ರಿ ಈ ಸಿನಿಮಾವನ್ನು ವೀಕ್ಷಿಸಿದ್ದೇನೆ' ಎಂದಿದ್ದಾರೆ.

ಸೂರ್ಯ ಶಕ್ತಿಶಾಲಿಯಾಗಿ ಕಾಣಿಸಿಕೊಂಡಿದ್ದಾರೆ
'ಸೂರ್ಯ ನಿಜಕ್ಕು ಶಕ್ತಿಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಕನಸುಗಳನ್ನು ನನಸಾಗಿಸುವ ಹುಚ್ಚುತನದ ಗೀಳನ್ನು ಹೊಂದಿರುವ ಉದ್ಯಮಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಕತ್ತಲೆಯ ಈ ಕಾಲದಲ್ಲಿ ಸಮಯೋಚಿತ ಮತ್ತು ಉತ್ತಮ ಉನ್ನತಿಗೇರಿಸುವ ಕಥೆ. ಸಿನಿಮಾ ನೋಡುವಾಗ ಹಳೆಯ ಘಟನೆಗಳೆಲ್ಲವೂ ನೆನಪಾದವು' ಎಂದು ಬರೆದುಕೊಂಡಿದ್ದಾರೆ.

ನನ್ನ ಪತ್ನಿಯ ಪಾತ್ರ ಸೊಗಸಾಗಿ ಮೂಡಿಬಂದಿದೆ
'ನನ್ನ ಪತ್ನಿ ಭಾರ್ಗವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಪರ್ಣಾ ಚಿತ್ರಣವನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಸ್ವಂತ ವಿವೇಚನೆಯುಳ್ಳ, ಬಲವಾದ ಆದರೆ ಮೃದು ಸ್ವಭಾವಿಯಾದ, ದೃಢವಾದ ಉದ್ಯಮಿಗಳಾಗಬಲ್ಲ ಮಹಿಳೆಯರಿಗೆ ಮತ್ತು ಗ್ರಾಮೀಣ ಮಹಿಳೆಯರಿಗೆ ಸ್ಫೂರ್ತಿದಾಯಕ ನಡೆಯನ್ನು ಸಮರ್ಥವಾಗಿ ಬಿಂಬಿಸಲಾಗಿದೆ' ಎಂದಿದ್ದಾರೆ.
Recommended Video

ನಿರ್ದೇಶಕಿ ಸುಧಾ ಅವರಿಗೆ ಬಿಗ್ ಸೆಲ್ಯೂಟ್
'ನಿರ್ದೇಶಕಿ ಸುಧಾ ಕೊಂಗಾರ ಅವರಿಗೆ ದೊಡ್ಡ ಸೆಲ್ಯೂಟ್. ಪುರುಷ ಕೇಂದ್ರಿತ ಕಥೆಯನ್ನು ಮುನ್ನಡೆಸುವಾಗ ಬಹಳ ನಾಜೂಕಾಗಿ ಸ್ಫೂರ್ತಿದಾಯಕ ಮತ್ತು ಹೃದಯಸ್ಪರ್ಶಿಯಾಗಿ ಬ್ಯಾಲೆನ್ಸ್ ಮಾಡಿ ಪತ್ನಿ ಪಾತ್ರವನ್ನು ಚಿತ್ರೀಕರಿಸಿದ್ದೀರಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











