'ಕಂಗುವ' ಚಿತ್ರದಲ್ಲಿ ದಿಶಾ ಹಾಟ್ ಅವತಾರಕ್ಕೆ ಸೆನ್ಸಾರ್ ಮಂಡಳಿ ಅಭ್ಯಂತರ
ತಮಿಳಿನಲ್ಲಿ ಸೂರ್ಯ ನಟನೆಯ 'ಕಂಗುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದಸರಾ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ 'ವೆಟ್ಟೆಯಾನ್' ಚಿತ್ರ ಬಂದಿದ್ದರಿಂದ ಸೂರ್ಯ ಸಿನಿಮಾ ಒಂದು ತಿಂಗಳು ಮುಂದಕ್ಕೆ ಹೋಗಿದೆ.
ನವೆಂಬರ್ 15ಕ್ಕೆ 'ಕಂಗುವ' ಸಿನಿಮಾ ತೆರೆಗಪ್ಪಳಿಸಲಿದೆ. ಶಿವ ನಿರ್ದೇಶನದ ಈ ಕಾಸ್ಟ್ಯೂಮ್ ಡ್ರಾಮಾದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಕಾಲಿವುಡ್ 'ಬಾಹುಬಲಿ' ಇಂದೇ ಈ ಫ್ಯಾಂಟಸಿ ಆಕ್ಷನ್ ಚಿತ್ರವನ್ನು ಬಿಂಬಿಸಲಾಗುತ್ತಿದೆ. ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ವರ್ತಮಾನ ಹಾಗೂ ಭೂತಕಾಲದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ.

ಚಿತ್ರದಲ್ಲಿ ಬುಡಕಟ್ಟು ಜನಾಂಗನ ನಾಯಕ ಕಂಗುವ ಪಾತ್ರದಲ್ಲಿ ಸೂರ್ಯ ಮಿಂಚಿದ್ದಾರೆ. ಪ್ರಸ್ತುತ ಕಥೆಯ ಜೊತೆಗೆ ನೂರಾರು ವರ್ಷಗಳ ಹಿಂದಿನ ಕಥೆಯನ್ನು ಸೇರಿಸಿ ನಿರ್ದೇಶಕ ಶಿವ ಚಿತ್ರ ಕಟ್ಟಿಕೊಟ್ಟಿದ್ದಾರೆ. ಆದರೆ ವರ್ತಮಾನದ ಕಥೆ ಕೇವಲ 20 ನಿಮಿಷ ಮಾತ್ರ ಇರಲಿದ್ದು ಇನ್ನುಳಿದ ಸಿನಿಮಾ ನೂರಾರು ವರ್ಷ ಹಿಂದಕ್ಕೆ ಪ್ರೇಕ್ಷಕರನ್ನು ಕರದೊಯ್ಯಲಿದೆ.
ಸದ್ಯ ಚಿತ್ರದ ಎರಡು ಹಾಡುಗಳು ಬಿಡುಗಡೆ ಆಗಿದೆ. ಇತ್ತೀಚೆಗೆ ಬಂದ 'ಯೋಲೊ' ಲಿರಿಕಲ್ ವೀಡಿಯೋ ಸಾಂಗ್ ಸಿನಿರಸಿಕರ ಗಮನ ಸೆಳೆದಿದೆ. ಸೂರ್ಯ ಜೊತೆ ನಾಯಕಿ ದಿಶಾ ಪಟಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ಹಾಡಿನ ಕೆಲ ಸನ್ನಿವೇಶಗಳ ಬಗ್ಗೆ ಸೆನ್ಸಾರ್ ಮಂಡಳಿ ಅಭ್ಯಂತರ ವ್ಯಕ್ತಪಡಿಸಿದೆ. ದಿಶಾಲ್ ಡೀಪ್ ನೆಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಕೆಲ ತುಣುಕುಗಳನ್ನು ತೆಗೆಯಲು ಅಥವಾ ಬದಲಿಸಲು ಸೂಚಿಸಲಾಗಿದೆ.
ಬಿಂದಾಸ್ ಬೆಡಗಿ ದಿಶಾ ಪಟಾನಿ ಎದೆ ಸೀಳು ಪ್ರದರ್ಶಿಸುವ ಕಾಸ್ಟ್ಯೂಮ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲೂ ಅಂತಹ ಡ್ರೆಸ್ ಹೆಚ್ಚು ತೊಟ್ಟಿದ್ದಾರೆ. ಆದರೆ ಒಂದು ಕಾಸ್ಟ್ಯೂಮ್‌ನಲ್ಲಿ ಬಹಳ ಎಕ್ಸ್‌ಪೋಸ್ ಮಾಡಿದ್ದಾರೆ ಎಂದು ಸೆನ್ಸಾರ್ ಮಂಡಳಿ ಹೇಳಿರುವುದಾಗಿ ವರದಿಯಾಗಿದೆ. 'ಯೋಲೊ' ಲಿರಿಕಲ್ ವೀಡಿಯೋ ಸಾಂಗ್ ಸೆನ್ಸಾರ್ ಸರ್ಟಿಫಿಕೆಟ್ ವೈರಲ್ ಆಗುತ್ತಿದೆ.
ಹೈದರಾಬಾದ್‌ನಲ್ಲಿ ನಡೆದ 'ಕಂಗುವ' ಸುದ್ದಿಗೋಷ್ಠಿಗೆ ಕೂಡ ದಿಶಾ ಪಟಾನಿ ಡೀಪ್ ನೆಕ್ ಕಾಸ್ಟ್ಯೂಮ್‌ನಲ್ಲಿ ಭಾಗಿ ಆಗಿದ್ದರು. ಇನ್ನು ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಜ್ಞಾನವೇಲ್ ರಾಜ, ವಂಶಿಕೃಷ್ಣ ರೆಡ್ಡಿ ಹಾಗೂ ಪ್ರಮೋದ್ ಉಪ್ಪಾಲಪಟ್ಟಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನಟರಾಜನ್, ಜಗಪತಿ ಬಾಬು, ಯೋಗಿ ಬಾಬು, ಕೋವೈ ಸರಳಾ ಸೇರಿದಂತೆ ದೊಡ್ಡ ತಾರಾಗಣ 'ಕಂಗುವ' ಚಿತ್ರದ ತಾರಾಗಣದಲ್ಲಿದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಸಿನಿಮಾ ಸೆಟ್ಟೇರಿತ್ತು. ಚೆನ್ನೈ, ಪಾಂಡಿಚೇರಿ, ಗೋವಾ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
38 ಭಾಷೆಗಳಲ್ಲಿ 'ಕಂಗುವ' ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಹಿಂದಿಯಲ್ಲಿ ಪೆನ್ ಸ್ಟುಡಿಯೋಸ್, ಕನ್ನಡದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿವೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಇನ್ನು ನವೆಂಬರ್ 15ಕ್ಕೆ ಕನ್ನಡದಲ್ಲಿ 'ಭೈರತಿ ರಣಗಲ್' ಸಿನಿಮಾ ಬಿಡುಗಡೆ ಆಗಿ ಪೈಪೋಟಿ ಕೊಡಲಿದೆ.


Click it and Unblock the Notifications











