ಆಸ್ಕರ್ ಮೇಲೆ ಕಣ್ಣಿಟ್ಟ ವಿಕ್ರಂ- ಪಾ. ರಂಜಿತ್ ತಮಿಳು KGF ಟೀಸರ್ ಹೇಗಿದೆ? ಸತ್ಯಕಥೆಗೆ ಇಟ್ಟ ಟೈಟಲ್ ಏನು?
'KGF' ಕೇಂದ್ರವಾಗಿಟ್ಟುಕೊಂಡು ಪ್ರಶಾಂತ್ ನೀಲ್ ಅಂಡ್ ಟೀಂ ಕಾಲ್ಪನಿಕ ಕಥೆ ಹೇಳಿದ್ದಾರೆ. ಚಿನ್ನದ ಮಣ್ಣಿನ ಸತ್ಯ ಕಥೆಯನ್ನು ನಾವು ಹೇಳುತ್ತೇವೆ ಎಂದು ಕೆಲ ದಿನಗಳ ಹಿಂದೆ ತಮಿಳು ನಿರ್ದೇಶಕ ಪಾ. ರಂಜಿತ್ ಹಾಗೂ ನಟ ಚಿಯಾನ್ ವಿಕ್ರಂ ಘೋಷಿಸಿದ್ದರು. ಸದ್ದಿಲ್ಲದೇ ಸಿನಿಮಾ ಶೂಟಿಂಗ್ ಶುರುವಾಗಿದ್ದು, ದೀಪಾವಳಿ ಸಂಭ್ರಮದಲ್ಲಿ ಟೈಟಲ್ ಟೀಸರ್ ರಿಲೀಸ್ ಮಾಡಿದ್ದಾರೆ. ಚಿತ್ರದಲ್ಲಿ 19ನೇ ಶತಮಾನದ ಕಥೆ ಹೇಳಲಾಗ್ತಿದ್ದು, ಪಾತ್ರಕ್ಕಾಗಿ ವಿಕ್ರಂ ಮೇಕ್ ಓವರ್ ಗಮನ ಸೆಳೀತಿದೆ.
'ಕಬಾಲಿ', 'ಕಾಲಾ' ರೀತಿಯ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಪಾ. ರಂಜಿತ್ ಬಹಳ ಹಿಂದೆಯೇ ಕೋಲಾರದ ಚಿನ್ನದ ಗಣಿಯ ಕಥೆಯನ್ನು ತೆರೆಗೆ ತರುವ ಮನಸ್ಸು ಮಾಡಿದ್ದರು. ಅದಕ್ಕಾಗಿ ಸಾಕಷ್ಟು ಪುಸ್ತಕಗಳನ್ನು ಓದಿ, ರೀಸರ್ಚ್ ಮಾಡಿ ಕಥೆ ಸಿದ್ಧಪಡಿಸಿಕೊಂಡಿದ್ದರು. ಅಷ್ಟರಲ್ಲೇ ಕನ್ನಡದಲ್ಲಿ 'KGF' ಸಿನಿಮಾ ನಿರ್ಮಾಣವಾಗುವ ವಿಷಯ ತಿಳಿದು ಸುಮ್ಮನಾಗಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಮೇಲೆ ಇದು ಕಾಲ್ಪನಿಕ ಕಥೆ ಎಂದು ಗೊತ್ತಾಗಿತ್ತು. ತಮ್ಮ ಪ್ರೀ ಪ್ರೊಡಕ್ಷನ್ ವರ್ಕ್ ಮುಂದುವರೆಸಿದ ನಿರ್ದೇಶಕರು ಈಗ ಚಿತ್ರಕರಣ ಪ್ರಾರಂಭಿಸಿದ್ದಾರೆ. ಕಳೆದೊಂದು ವಾರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ.

ಪಾ. ರಂಜಿತ್ ತಮ್ಮ 'KGF' ಸಿನಿಮಾ ಕಥೆಗೆ 'ತಂಗಲಾನ್' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ. ಚಿತ್ರದಲ್ಲಿ ವಿಕ್ರಂ ಜೊತೆಗೆ ಪಾರ್ವತಿ ಮೆನನ್, ಮಾಳವಿಕಾ ಮೋಹನನ್ ಲೀಡ್ ರೋಲ್‌ಗಳಲ್ಲಿ ನಟಿಸ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಲಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ತಂಗಲಾನ್' ಸಿನಿಮಾ ಸಿದ್ಧವಾಗಲಿದೆ. ಇತ್ತೀಚೆಗೆ ಚಿತ್ರದ ಲುಕ್ ಟೆಸ್ಟ್ ನಡೀತಿದೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಚಿತ್ರತಂಡ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣವನ್ನೇ ಆರಂಭಿಸಿಬಿಟ್ಟಿದೆ. ಚಿತ್ರದಲ್ಲಿ ಸ್ವಾತಂತ್ರ್ಯಪೂರ್ವ ಕಾಲದ KGF ಕಥೆಯನ್ನು ಹೇಳುತ್ತಿರುವಂತೆ ಕಾಣುತ್ತಿದೆ. ನಟ ಪಶುಪತಿ ನೆಗೆಟೀವ್ ರೋಲ್‌ನಲ್ಲಿ ಮಿಂಚಿದ್ದಾರೆ.
ಬ್ರಿಟೀಷರು ಕೋಲಾರದಲ್ಲಿ ಪತ್ತೆಯಾದ ಚಿನ್ನದ ನಿಕ್ಷೇಪವನ್ನು ಹುಡುಕಿ ಬಂದಿದ್ದು,ಆ ಸಮಯದಲ್ಲಿ ಆ ಭಾಗದಲ್ಲಿ ಇದ್ದ ಬುಡಕಟ್ಟು ಜನರ ಸುತ್ತಾ 'ತಂಗಲಾನ್' ಸಿನಿಮಾ ಕಥೆ ಸುತ್ತುತ್ತದೆ ಎನ್ನುವುದು ಗೊತ್ತಾಗುತ್ತಿದೆ. ಚಿನ್ನಕ್ಕಾಗಿ ಬ್ರಿಟೀಷರು ಅಲ್ಲಿಗೆ ಬಂದ ಮೇಲೆ ಏನೆಲ್ಲಾ ಆಯ್ತು ಎನ್ನುವುದನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಬುಡಕಟ್ಟು ಜನರ ನಾಯಕನಾಗಿ ವಿಕ್ರಂ ಬಣ್ಣ ಹಚ್ಚಿದ್ದಾರೆ. ಪಾತ್ರಕ್ಕಾಗಿ ಗಡ್ಡಬಿಟ್ಟು ವಿಚಿತ್ರ ಮ್ಯಾನರಿಸಂ ಹಾಗೂ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಕತ್ತಿ, ದೊಣ್ಣೆ ಹಿಡಿದರು ತುಂಡು ಬಟ್ಟೆ ಸುತ್ತಿಕೊಂಡು ದರ್ಶನ ಕೊಟ್ಟಿದ್ದಾರೆ. ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕೆಲ ದಿನಗಳ ಹಿಂದೆ ಈ ಸಿನಿಮಾ ಬಗ್ಗೆ ಮಾತನಾಡುತ್ತಾ ಅಂದುಕೊಂಡಂತೆ ಈ ಸಿನಿಮಾ ಬಂದರೆ ಆಸ್ಕರ್ ಪ್ರಶಸ್ತಿ ಗ್ಯಾರೆಂಟಿ ಎಂದು ವಿಕ್ರಂ ಹೇಳಿದ್ದರು.

ವಿಕ್ರಂ ಹಾಗೂ ಪಾ. ರಂಜಿತ್ ಸಿನಿಮಾ ಬಗ್ಗೆ ಬಹಳ ಕಾನ್ಫಿಡೆಂಟ್ ಆಗಿ ಇದ್ದಾರೆ. ಸಾಕಷ್ಟು ತಯಾರಿ ನಡೆಸಿ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಇನ್ನು ವಿಕ್ರಂ ನಟನೆಯ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ವಿಕ್ರಂ ಲೀಡ್ ರೋಲ್‌ನಲ್ಲಿ ನಟಿಸಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾ 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ದೀಪಾವಳಿ ಸಂಭ್ರಮದಲ್ಲಿ ಟೀಸರ್ ಸಮೇತ ಸಿನಿಮಾ ಘೋಷಿಸಿರುವ ತಂಡ ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದೆ. ದಶಕಗಳ ಹಿಂದೆ KGFನಲ್ಲಿ ಸತ್ಯ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿಯ ಕನ್ನಡದ 'KGF' ಸಿನಿಮಾವನ್ನು 'ತಂಗಲಾನ್' ಮೀರಿಸುತ್ತಾ ಕಾದು ನೋಡಬೇಕು.


Click it and Unblock the Notifications











