ವಿಜಯ್ ಪ್ರಾಣಕ್ಕೆ ಅಪಾಯ ಇದೆ, ಭದ್ರತೆ ಹೆಚ್ಚಿಸಿ ; ಡಿಜಿಪಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕ
ವಿಜಯ್ ಈಗ ಕೇವಲ ಆಕ್ಟರ್ ಮಾತ್ರ ಅಲ್ಲ. ಬದಲಿಗೆ ಜನ ಮೆಚ್ಚಿದ ಜನನಾಯಕ. ಮುಖ್ಯಮಂತ್ರಿಯ ಗದ್ದುಗೆ ಏರಲು ಇನ್ನೇನು ಎರಡೇ ಹೆಜ್ಜೆ ಬಾಕಿ ಇದೆ. ನಿನ್ನೆ ( ಮೇ6) 6 ಶಾಸಕರ ಬೆಂಬಲಕ್ಕೆ ಹಾತೊರೆಯುತ್ತಿದ್ದ ವಿಜಯ್ ಪಾಲಿಗೆ ವಿದುತಲೈ ಚಿರುತೈಗಲ್ ಕಚ್ಚಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೆರವಿನ ಹಸ್ತವನ್ನು ಚಾಚಿವೆ. ಈ ಮೂಲಕ ಸಂಖ್ಯಾಬಲ 116ಕ್ಕೆ ಬಂದು ತಲುಪಿದೆ. ಮ್ಯಾಜಿಕ್ ನಂಬರ್ 118. ಈ ಹಿನ್ನೆಲೆ ಇನ್ನು ಇಬ್ಬರಿಗೆ ವಿಜಯ್ ಸದ್ಯ ಗಾಳ ಹಾಕುತ್ತಿದ್ದಾರೆ.
ಮತ್ತೊಂದೆಡೆ ದಳಪತಿಯ ಪ್ರಮಾಣ ವಚನ ಸಮಾರಂಭಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಆದರೆ .. ಇದೇ ಸಮಯದಲ್ಲಿ ವಿಜಯ್ ಪ್ರಾಣಕ್ಕೆ ಬೆದರಿಕೆ ಇದೆ ಎನ್ನುವ ಆತಂಕ ಕಾಂಗ್ರೆಸ್ ಪಾಳಯವನ್ನು ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳುನಾಡಿನ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯ್ ಪ್ರಾಣಕ್ಕೆ ಅಪಾಯ ಇದೆ, ಭದ್ರತೆ ಹೆಚ್ಚಿಸಿ ಎಂದು ಡಿಜಿಪಿಗೆ ಪತ್ರ ಬರೆದಿದ್ದಾರೆ ಎಂದು ''ಟೈಮ್ಸ್ ನೌ'' ವರದಿ ಮಾಡಿದೆ.

ವಿಜಯ್ ಅವರಿಗೆ ನೀಡಲಾಗಿದ್ದ ಪೊಲೀಸ್ ರಕ್ಷಣೆಯನ್ನು ಹಿಂಪಡೆಯಲಾಗಿದೆ ಎಂದು ನನಗೆ ಗೊತ್ತಾಗಿದೆ, ಪ್ರಮಾಣ ವಚನಕ್ಕೆ ಇನ್ನೇನು ಕೆಲ ಗಂಟೆಗಳು ಬಾಕಿ ಇರುವ ಈ ಸಮಯದಲ್ಲಿ ಇಂತಹದ್ದೊಂದು ಅಚಾತುರ್ಯ ಎಸಗಿದ್ದು ಬಹುದೊಡ್ಡ ತಪ್ಪು ಎಂದು ಹೇಳಿರುವ ಕಾಂಗ್ರೆಸ್ ನಾಯಕರೊಬ್ಬರು ಕೂಡಲೇ ವಿಜಯ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಕೇವಲ ವಿಜಯ್ ಮಾತ್ರವಲ್ಲ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಕೂಡ ಭದ್ರತೆ ಒದಗಿಸುವಂತೆ ಮನವಿಯನ್ನು ಮಾಡಿದ್ಧಾರೆ.
ಈ ಪತ್ರಕ್ಕೆ ಪೊಲೀಸ್ ಅಧಿಕಾರಿಗಳು ಸದ್ಯ ಸ್ಪಷ್ಟನೆ ನೀಡಿದ್ದು ಚುನಾವಣೆಯ ಫಲಿತಾಂಶದ ನಂತರ ಶಿಷ್ಟಾಚಾರದ ಪ್ರಕಾರ ವಿಜಯ್ ಅವರಿಗೆ ಭದ್ರತೆ ಒದಗಿಸಲಾಗಿತ್ತು ಎಂದು ಹೇಳಿದ್ದಾರೆ.ಆದರೆ ವಿಜಯ್ ಸ್ವಯಂಪ್ರೇರಿತರಾಗಿ ಭದ್ರತೆಯನ್ನು ನಿರಾಕರಿಸಿದ್ದಾರೆ, ನಾಲ್ಕು ಬೆಂಗಾವಲು ವಾಹನ ಬೇಡ ಎಂದು ಹೇಳಿ ಹಿಂದಿರುಗಿಸಿದ್ದಾರೆ ಹೊರತು ಇಲಾಖೆ ಭದ್ರತೆಯನ್ನು ಹಿಂಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಮಾಣ ವಚನಕ್ಕೆ ಬೇಕಾದ ಸಿದ್ದತೆ ಪೂರ್ಣಗೊಂಡಿವೆ ಎಂದಿದ್ದಾರೆ.
ಇದೇ ವಿಚಾರದಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷ ಕೂಡ ಸ್ಪಷ್ಟೀಕರಣ ನೀಡಿದ್ದು ನಿರ್ಣಾಯಕ ಜನಾದೇಶದೊಂದಿಗೆ ಸರ್ಕಾರ ರಚಿಸಿದ ನಂತರವೇ ಭದ್ರತೆ ಸ್ವೀಕರಿಸುವುದಾಗಿ ವಿಜಯ್ ಹೇಳಿದ್ದಾರೆ ಎಂದು ಹೇಳಿದೆ. ಈ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಎಂದು ಕೂಡ ಹೇಳಿರುವ ಟಿವಿಕೆ ಪಕ್ಷ ಸರ್ಕಾರಿ ಕಚೇರಿಯ ಮೇಲೆ ಅವರ ನಿಲುವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಬೆಂಗಾವಲು ವಾಹನಗಳನ್ನು ವಿಜಯ್ ಹಿಂದಿರುಗಿಸಿದ್ದರೂ ಕೂಡ ಪನೈಯೂರಿನಲ್ಲಿರುವ ವಿಜಯ್ ನಿವಾಸದ ಸುತ್ತಮುತ್ತ ಪೊಲೀಸರು ಭದ್ರತೆಯನ್ನು ಮುಂದುವರೆಸಿದ್ದಾರೆ.
ಇನ್ನು ಸರ್ಕಾರದ ರಚನೆಗೆ ಹಕ್ಕು ಮಂಡಿಲು ನಿನ್ನೆ (ಮೇ 6 ) ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ಕೂಡ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಈ ವಿಜಯ್ ಈ ಭೇಟಿಯ ಸಮಯದಲ್ಲಿಯೂ ಸರ್ಕಾರದ ಅಧಿಕೃತ ವಾಹನಗಳನ್ನು ಬಳಸಲು ನಿರಾಕರಿಸಿದರು.

ಇನ್ನುಳಿದಂತೆ ರಾಜ್ಯಪಾಲರು ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡುವ ಮುನ್ನವೇ ಚೆನ್ನೈನ ನೆಹರು ಮೈದಾನದಲ್ಲಿ ಪದಗ್ರಹಣಕ್ಕೆ ಸಿದ್ಧತೆ ನಡೆದಿದೆ. ಮತ್ತೊಂದು ಕಡೆ ಲೋಕ ಭವನದಲ್ಲಿ ಪೋಸ್ಟರ್ ಹಿಡಿದ ಟಿವಿಕೆ ಬೆಂಬಲಿಗರು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಘೋಷಣೆ ಕೂಗಿದ್ದಾರೆ. ಬಹುಮತ ಬಂದರು, ಬೆಂಬಲಿಗರ ಲಿಸ್ಟ್ ನಿಡಿದರು ಕೂಡ ಸರ್ಕಾರ ರಚನೆಗೆ ಅವಕಾಶ ಕೊಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ


Click it and Unblock the Notifications