ಎಲ್ಲೆಲ್ಲೂ ರಜಿನಿಕಾಂತ್ ಅಬ್ಬರ, ''ಕೂಲಿ'' ಚಿತ್ರ ನೋಡಲು ಉದ್ಯೋಗಿಗಳಿಗೆ ರಜೆ ಘೋಷಿಸಿದ ಸಂಸ್ಥೆ
ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾಗಳೆಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತೆ. ಅಭಿಮಾನದ ಜಾತ್ರೆ ನಡೆಯುತ್ತೆ. ಟಿಕೆಟ್ ಬೆಲೆ ಗಗನಕ್ಕೇರಿರುತ್ತೆ. ಇನ್ನೂ ರಜಿನಿಕಾಂತ್ ಸಿನಿಮಾ ಅಂದರೆ ವ್ಯಾಪಾರ - ವ್ಯವಹಾರ ಎಲ್ಲವೂ ಮೊದಲೇ ನಡೆದಿರುತ್ತೆ. ದಾಖಲೆಯ ಮೊತ್ತಕ್ಕೆ ಚಿತ್ರದ ಹಕ್ಕುಗಳು ಬಿಡುಗಡೆಗೆ ಮುನ್ನವೇ ಬಿಕರಿಯೂ ಆಗಿರುತ್ತವೆ. ಇಷ್ಟೇ ಅಲ್ಲ ರಜಿನಿಕಾಂತ್ ಚಿತ್ರ ನೋಡಲು ಬಹುದೊಡ್ಡ ವರ್ಗವೇ ಕಾತುರದಿಂದ ಕಾದು ಕುಳಿತಿರುತ್ತೆ.
ಅದರಲ್ಲಿಯೂ ಮೊದಲ ದಿನದ ಮೊದಲ ಪ್ರದರ್ಶನದಲ್ಲಿಯೇ ತಲೈವಾ ಅಬ್ಬರ ಕಣ್ತುಂಬಿಕೊಳ್ಳುವ ಹಪಾಹಪಿ ಅನೇಕರಲ್ಲಿರುತ್ತೆ. ಹೀಗಾಗಿಯೇ ತಾವು ಕೆಲಸ ಮಾಡುವ ಸ್ಥಳದಲ್ಲಿ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ, ಕುಂಟು ನೆಪವೊಡ್ಡಿ ಹಲವರು ಕೆಲಸಕ್ಕೆ ಗೈರಾಗುತ್ತಾರೆ. ಚಿತ್ರಮಂದಿರದಲ್ಲಿ ಹಾಜರಾಗುತ್ತಾರೆ.

ಈ ಕಾರಣಕ್ಕಾಗಿಯೇ ರಜಿನಿ ಚಿತ್ರ ಬರುತ್ತಿದೆ ಅಂದರೆ ಅನೇಕ ಕಡೆ ಅನೇಕ ಸಂಸ್ಥೆಗಳು ತಮ್ಮ ಕೆಲಸಗಾರರಿಗೆ ರಜೆ ಘೋಷಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿವೆ. ಇದಕ್ಕೆ ಇನ್ನೊಂದು ತಾಜಾ ಉದಾಹರಣೆ ಎನ್ನುವಂತೆ ಮಧುರೈನ ''ಯುಎನ್ ಅಕ್ವಾ ಕೇರ್- ಆರ್ ಒ ಸಿಸ್ಟಮ್ ಮತ್ತು ಸೇಲ್ಸ್'' ಕಂಪನಿ ಆಗಸ್ಟ್ 14ರಂದು ''ಕೂಲಿ'' ಬಿಡುಗಡೆಯಾಗುತ್ತಿರುವ ಹಿನ್ನೆಲೆ, ತನ್ನೆಲ್ಲಾ ಉದ್ಯೋಗಿಗಳಿಗೆ ರಜೆಯನ್ನು ಘೋಷಿಸಿದೆ. ಇಷ್ಟೇ ಅಲ್ಲ ಉಚಿತ ಟಿಕೆಟ್‌ಗಳನ್ನು ಕೂಡ ಒದಗಿಸಲು ಮುಂದಾಗಿದೆ.
ಹೆಚ್.ಆರ್ ವಿಭಾಗಕ್ಕೆ ಬರುವ ರಾಶಿ ರಾಶಿ ರಜೆಯ ಮನವಿಗಳನ್ನು ತಪ್ಪಿಸಲು ರಜೆ ಘೋಷಿಸಲಾಗಿದೆ ಎಂದು ಹೇಳಿರುವ ಈ ಸಂಸ್ಥೆ ರಜಿನಿಕಾಂತ್ ಅವರ 50 ವರ್ಷಗಳ ಕಲಾಸೇವೆಯನ್ನು ಶ್ಲಾಘಿಸಿದೆ. ಚಿತ್ರರಂಗದಲ್ಲಿ ರಜಿನಿಕಾಂತ್ 50 ವರ್ಷ ಪೂರೈಸಿರುವ ಹಿನ್ನೆಲೆ ಅನಾಥಾಶ್ರಮ ಮತ್ತು ವೃದ್ದಾಶ್ರಮಗಳಲ್ಲಿ ಅನ್ನದಾನವನ್ನು ಕೂಡ ''ಯುಎನ್ ಅಕ್ವಾ ಕೇರ್- ಆರ್ ಒ ಸಿಸ್ಟಮ್ ಮತ್ತು ಸೇಲ್ಸ್'' ಕಂಪನಿ ಮಾಡಲಿದೆ. ಸಾರ್ವಜನಿಕರಿಗೆ ಸಿಹಿ ತಿಂಡಿಗಳನ್ನು ಕೂಡ ವಿತರಿಸುವುದಾಗಿ ಹೇಳಿದೆ.
ಇನ್ನು ಈ ರಜೆ ಕೇವಲ ಮಧುರೈಗೆ ಮಾತ್ರವಲ್ಲ ಚೆನ್ನೈ.. ಬೆಂಗಳೂರು.. ತಿರುಚ್ಚಿ.. ತಿರುನಲ್ವೇಲಿ.. ಚೆಂಗಲ್ಪಟ್ಟು.. ಮಟ್ಟುತವಾನಿ.. ಮತ್ತು ಅರಪಾಲಯಂ.. ಸೇರಿದಂತೆ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ ಎಂದು ಕಂಪನಿ ತನ್ನ ಸುತ್ತೋಲೆಯಲ್ಲಿ ಹೇಳಿದೆ.
ಇನ್ನು ''ಕೂಲಿ'' ಚಿತ್ರದ ಕ್ರೇಜ್ ಒಂದು ಕಡೆಯಾದರೆ. ರಜಿನಿಕಾಂತ್ ಚಿತ್ರರಂಗಕ್ಕೆ ಬಂದು 50 ವರ್ಷಗಳಾಗಿವೆ. ಇದು ಅಭಿಮಾನಿಗಳ ಸಂಭ್ರಮವನ್ನು ಇನ್ನು ಹೆಚ್ಚಿಸಿದೆ. ಹೀಗಾಗಿಯೇ ಕೂಲಿ ಚಿತ್ರದ ಬಿಡುಗಡೆಯನ್ನು ಅವಿಸ್ಮರಣಿಯವಾಗಿಸಲು ಪ್ರಯತ್ನ ಮಾಡುತ್ತಿರುವ ಅನೇಕರು ಹಲವು ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅನ್ನದಾನ ಸೇರಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಾನಾ ಭಾಗಗಳಲ್ಲಿ ಆಯೋಜಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ತಲೈವಾಗೆ ಗೌರವವನ್ನು ಸಲ್ಲಿಸಲು ಮುಂದಾಗಿದ್ದಾರೆ.
ಇನ್ನೂ ರಜಿನಿಕಾಂತ್ ಅಬ್ಬರಕ್ಕೆ ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಹಣದ ಸದ್ದು ಕೇಳಿ ಬರುತ್ತಿದೆ. ಜನ ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದು ಮೊದಲ ದಿನವೇ ಚಿತ್ರದ ಗಳಿಕೆ ನೂರು ಕೋಟಿಯ ಗಡಿಯನ್ನು ದಾಟಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ ಹೊರದೇಶಗಳಲ್ಲಿ ಕೂಡ ''ಕೂಲಿ'' ಜ್ವರ ಆವರಿಸಿಕೊಂಡಿದೆ.
''ಸನ್ ಪಿಕ್ಚರ್ಸ್'' ನಿರ್ಮಾಣ ಮಾಡಿರುವ ''ಕೂಲಿ'' ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಇದ್ದು, ರಜಿನಿಕಾಂತ್ ಜೊತೆಗೆ ಚಿತ್ರದಲ್ಲಿ ಆಮಿರ್ ಖಾನ್.. ಉಪೇಂದ್ರ..ಅಕ್ಕಿನೇನಿ ನಾಗಾರ್ಜುನ.. ಶೋಭಿನ್.. ಶ್ರುತಿ ಹಾಸನ್.. ರಚಿತಾ ರಾಮ್.. ಸೇರಿ ಹಲವರು ಇದ್ದಾರೆ. ಪೂಜಾ ಹೆಗ್ಡೆ ಚಿತ್ರದಲ್ಲಿ ಮೋನಿಕಾ ಹಾಡಿಗೆ ಹೆಜ್ಜೆ ಹಾಕಿದ್ದು ಈ ಹಾಡು ಈಗಾಗಲೇ ಚಾರ್ಟ್‌ಬಸ್ಟರ್ ಲಿಸ್ಟ್‌ಗೆ ಸೇರಿಕೊಂಡಿದೆ. ಅನಿರುದ್ಧ್ ರವಿಚಂದ್ರನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.


Click it and Unblock the Notifications











