ಬೆಳಗ್ಗೆ ಬಿಡುಗಡೆಗೆ ಆದೇಶ, ಮಧ್ಯಾಹ್ನ ತಡೆ ; ವಿಜಯ್‌ಗೆ ಮತ್ತೆ ಶಾಕ್ ಕೊಟ್ಟ ಕೋರ್ಟ್-ಜನನಾಯಗನ್ ರಿಲೀಸ್ ಯಾವಾಗ ?
ಚಿತ್ರರಂಗದವರಿಗೆ ''ಸೆನ್ಸಾರ್'' ಮಂಡಳಿ ಯಾವತ್ತು ಮಗ್ಗಲದ ಮುಳ್ಳು. ಯಾಕೆಂದರೆ.. ಒಂದು ಚಿತ್ರವನ್ನು ತಮ್ಮ ಕಲ್ಪನೆಗೆ ಅನುಗುಣವಾಗಿ ನಿರ್ದೇಶಕರು ರೆಡಿ ಮಾಡಿರುತ್ತಾರೆ. ಆದರೆ.. ಈ ಸೆನ್ಸಾರ್ ಅಂಗಳಕ್ಕೆ ಬಂದಾಗ ಅಲ್ಲಿ ಬರೆ ಹಾಕಲಾಗುತ್ತೆ. ಕೆಲ ಒಮ್ಮೆ ಬೇಕು ಬೇಕಂತಲೇ ಕತ್ತರಿಯನ್ನು ಹಾಕಲಾಗುತ್ತೆ. ಮತ್ತೂ ಕೆಲ ಒಮ್ಮೆ ಕತ್ತರಿ ಹಾಕಬೇಕಾದ ಜಾಗದ ಮೇಲೆ ಇವರ ಕಣ್ಣೇ ಬೀಳುವುದಿಲ್ಲ.
ಸೆನ್ಸಾರ್‌ನ ಈ ನಡೆಯಿಂದ ಚೆಂದದ ಚಿತ್ರಗಳು ಅಂದ ಕಳೆದುಕೊಳ್ಳುತ್ತಾವೆ. ಆದರೆ, ''ಜನನಾಯಗನ್'' ತಂಡ ಮಾತ್ರ ನೆಮ್ಮದಿಯನ್ನೇ ಕಳೆದುಕೊಂಡಿದೆ. ಹೌದು, ಬಹುತೇಕರಿಗೆ ಗೊತ್ತಿರುವಂತೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ''ಜನನಾಯಗನ್'' ಕ್ರಾಂತಿ ಈ ಸಂಕ್ರಾಂತಿಯಿಂದ ಶುರುವಾಗಬೇಕಿತ್ತು. ಚಿತ್ರತಂಡ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿತ್ತು. ಪ್ರಚಾರವನ್ನು ಮಾಡಿತ್ತು. ವಿಜಯ್ ಕೊನೆಯ ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತ ವಿಜಯ್ ಅಭಿಮಾನಿ ಬಳಗ ಚಿತ್ರದ ಟಿಕೆಟ್‌ಗಳನ್ನು ಕೂಡ ಖರೀದಿ ಮಾಡಿತ್ತು.

ಆದರೆ.. ''ಜನನಾಯಗನ್'' ಮೇಲೆ ಸೆನ್ಸಾರ್ ಮಂಡಳಿಗೆ ಕರುಣೆ ಬರಲೇ ಇಲ್ಲ. ಬದಲಿಗೆ ''ಜನನಾಯಗನ್'' ವಿರುದ್ಧ ಸೆನ್ಸಾರ್ ಸಮರ ಶುರು ಮಾಡಿತ್ತು. ''ಜನನಾಯಗನ್'' ಮತ್ತು ಸೆನ್ಸಾರ್ ನಡುವೆ ಹಗ್ಗ ಜಗ್ಗಾಟ ಶುರುವಾಯ್ತು. ಹೀಗಾಗಿಯೇ ''ಜನನಾಯಗನ್'' ತಂಡ ಹೈಕೋರ್ಟ್ ಮೊರೆ ಹೋಗಿತ್ತು.
ಇಂದು (ಜನವರಿ 9 ) ಈ ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ಸಿನಿಮಾಕ್ಕೆ ''ಯು/ಎ'' ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್ಸಿಗೆ ಆದೇಶಿಸಿತ್ತು. ಈ ಹಿನ್ನೆಲೆ ವಿಜಯ್ ಅವರ ಅಭಿಮಾನಿಗಳು ಕುಣಿದಾಡಿದ್ದರು. ಚಿತ್ರತಂಡದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಆದರೆ ಈಗ ತನ್ನದೇ ಮದ್ರಾಸ್ ಹೈಕೋರ್ಟ್, ತನ್ನದೇ ಆದೇಶಕ್ಕೆ ತಡೆ ನೀಡಿದೆ. ಪ್ರಮಾಣ ಪತ್ರವನ್ನು ಸದ್ಯಕ್ಕೆ ನೀಡುವುದು ಬೇಡ ಎಂದು ಹೇಳಿದೆ. ಹೌದು, ಅಸಲಿಗೆ ಮದ್ರಾಸ್ ಹೈಕೋರ್ಟ್ ಇಂದು (ಜನವರಿ 9) ಆದೇಶ ನೀಡುತ್ತಿದ್ದಂತೆಯೇ ನ್ಯಾಯಾಲಯದ ಆದೇಶವನ್ನು ಸಿಬಿಎಫ್‌ಸಿ ಪ್ರಶ್ನಿಸಿತ್ತು. ತುರ್ತು ವಿಚಾರಣೆ ನಡೆಸಬೇಕು ಮತ್ತು ಪರಿಷ್ಕರಣಾ ಸಮಿತಿಯು ಚಿತ್ರವನ್ನು ಪರಿಶೀಲಿಸಬೇಕು ಎಂದು ಮಂಡಳಿ ಕೋರಿತ್ತು. ''ಜನನಾಯಗನ್'' ನಿರ್ಮಾಪಕರ ಪರ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಹಾಜರಾಗಿದ್ದರೆ ಸೆನ್ಸಾರ್ ಮಂಡಳಿಯ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎ.ಆರ್.ಎಲ್.ಸುಂದರೇಶನ್ ವಾದ ಮಂಡಿಸಲು ಬಂದಿದ್ದರು.
ಪ್ರಮಾಣಪತ್ರ ಆದೇಶದ ಪ್ರಕರಣದಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಲು ಸೆನ್ಸಾರ್ ಮಂಡಳಿಗೆ ಅವಕಾಶ ಸಿಕ್ಕಿಲ್ಲ ಎಂದು ಸುಂದರೇಶನ್ ವಾದಿಸಿದರು. ಕೌಂಟರ್ ಅಫಿಡವಿಟ್ ಇಲ್ಲದೆ ಏಕಸದಸ್ಯ ನ್ಯಾಯಾಧೀಶರು ಆದೇಶವನ್ನು ನೀಡಿದ್ದಾರೆ ಎಂದು ಹೇಳಿದರು. ಇಷ್ಟೇ ಅಲ್ಲ ಚಿತ್ರವನ್ನು ಪರಿಷ್ಕೃತ ಸಮಿತಿಗೆ (Revising Committee) ಕಳುಹಿಸುವ ಹಕ್ಕು ಮಂಡಳಿಗೆ ಇದೆ ಎಂದು ವಾದವನ್ನು ಮಾಡಿದರು. ''ಜನನಾಯಗನ್'' ಚಿತ್ರದಲ್ಲಿ ಸಶಸ್ತ್ರ ಪಡೆಗಳ ಲಾಂಛನಗಳಿದ್ದು, ಅದನ್ನು ತಜ್ಞರು ಪರಿಶೀಲಿಸಬೇಕು ಎಂದು ಕೂಡ ವಾದ ಮಂಡಿಸಿದರು.
ಈ ಹಿನ್ನೆಲೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಹೈಕೋಟ್,ಸಂಕ್ರಾತಿಯ ರಜಾದಿನಗಳು ಮುಕ್ತಾಯವಾದ ನಂತರ ಜನವರಿ 21ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ. ಚಿತ್ರದ ಬಿಡುಗಡೆಯ ನೆಪ ನೀಡಿ ನ್ಯಾಯಾಲಯದ ಮೇಲೆ ಒತ್ತಡ ಹೇರಲಾಗಿದೆ, ಪ್ರಕರಣ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಸದ್ಯ ಜನವರಿ 21ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ಅಂದು ಮತ್ತೆ ಆದೇಶವನ್ನು ಕಾಯ್ದಿರಿಸಿದರೆ ಚಿತ್ರದ ಬಿಡುಗಡೆ ಇನ್ನೂ ವಿಳಂಬವಾಗಲಿದೆ.
ಜನವರಿ 21ರವರೆಗೆ ಬಿಡುಗಡೆ ಮಾಡುವಂತೆ ಇಲ್ಲ ಎಂದು ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲಿಯೇ, ವಿಜಯ್ ಅವರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯಕ್ಕೆ ಬರುತ್ತಿರುವ ವಿಜಯ್ ಅವರನ್ನು ಬೇಕಂತೆಲೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











