Puneeth Rajkumar Fans: ಅಪ್ಪು ವ್ಯಕ್ತಿಯಲ್ಲ ದೈವ: ಅಭಿಮಾನಿಗಳ ಪ್ರೀತಿ, ಕರಗದ ಬೆಟ್ಟ, ಇಲ್ಲಿದೆ ಸಾಕ್ಷಿ
ದೇಹಕ್ಕೆ ಇಕ್ಕಳಗಳನ್ನು ಸಿಕ್ಕಿಸಿಕೊಂಡು ನೆಲದಿಂದ ಸುಮಾರು 50-60 ಮೇಲೆ ನೇತಾಡುತ್ತಿರುವ ವ್ಯಕ್ತಿ, ಇಕ್ಕಳುಗಳು ಸಾಲದೆಂಬಂತೆ ಬಾಯಿಗೆ ಸುಮಾರು 10 ಅಡಿ ಉದ್ದದ ಕಂಬಿಯನ್ನು ಚುಚ್ಚಿಕೊಂಡಿದ್ದಾನೆ. ಕಾಲುಗಳು, ಬೆನ್ನು, ಭುಜದ ಚರ್ಮ ಸೀಳಿ ಹೊರಬಂದಿರುವ ಇಕ್ಕಳಗಳ ಸಹಾಯದಿಂದಷ್ಟೆ ನೇತುಬಿದ್ದವನ ದೇಹಕ್ಕೆ ಮೂಟೆಯೊಂದನ್ನು ನೇತು ಹಾಕಿ ಭಾರವನ್ನು ಇನ್ನಷ್ಟು ಹೆಚ್ಚು ಮಾಡಲಾಗಿದೆ. ಇಷ್ಟೆಲ್ಲಾ ನೋವಿನಲ್ಲಿರುವ ಆ ವ್ಯಕ್ತಿಯ ಕೈಯಲ್ಲಿ ನಗುತ್ತಿರುವ ಪುನೀತ್ ರಾಜ್‌ಕುಮಾರ್ ಚಿತ್ರ!
ಸಾಮಾನ್ಯ ಜನರಿಗೆ ಊಹಿಸಲೂ ಆಗದ ನೋವಿನ ಸ್ಥಿತಿಯಲ್ಲಿರುವ ವ್ಯಕ್ತಿ, ಅಂಥಹಾ ನೋವಿನಲ್ಲೂ ಪುನೀತ್ ರಾಜ್‌ಕುಮಾರ್ ಚಿತ್ರವನ್ನು ಹಿಡಿದುಕೊಂಡು ತನ್ನ ಅಭಿಮಾನ, ಪ್ರೀತಿಯನ್ನು ಸಾರುತ್ತಿದ್ದಾನೆ. ಈ ದೃಶ್ಯ ಕಂಡು ಬಂದಿದ್ದು ಕರ್ನಾಟಕದಲ್ಲಿ ಅಲ್ಲ ಬದಲಿಗೆ ನೆರೆಯ ತಮಿಳುನಾಡಿನಲ್ಲಿ. ಪುನೀತ್ ವ್ಯಕ್ತಿತ್ವದ ಘನತೆಯ ಅರಿವಾಗುವುದೇ ಇಂಥಹಾ ಘಟನೆಗಳಿಂದ.
ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮುಗುರ ದೇವರಿಗೆ ನಡೆದುಕೊಳ್ಳುವುದು ಸಾಮಾನ್ಯ. ಮುರುಗನಿಗೆ ಹೀಗೆ ಸಿಡಿ ಮಾದರಿಯಲ್ಲಿ ದೇಹಕ್ಕೆ ಇಕ್ಕಳಗಳನ್ನು ಸಿಕ್ಕಿಕೊಂಡು ದೇವರ ಆಭರಣಗಳನ್ನು ಹೊತ್ತು ಬರುವುದು ಸಂಪ್ರದಾಯ. ಈ ಬಾರಿಯೂ ಮುರುಗ ದೇವರ ಪೂಜಾರಿ ದೇಹಕ್ಕೆ ಇಕ್ಕಳ ಚುಚ್ಚಿಸಿಕೊಂಡು ಸಿಡಿ ಏರಿ, ದೇವರ ಬಹು ತೂಕದ ಆಭರಣಗಳ ಗಂಟನ್ನು ನೇತು ಹಾಕಿಕೊಂಡು ಜೊತೆಗೆ ಪುನೀತ್ ರಾಜ್‌ಕುಮಾರ್ ಚಿತ್ರವನ್ನೂ ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಬಹಳ ವೈರಲ್ ಆಗಿದೆ.

ಜಾತ್ರೆಯಲ್ಲಿ ಭಾಗವಹಿಸಿದ್ದ ಬಹುತೇಕರ ಕೈಯಲ್ಲಿ ಅಪ್ಪು ಚಿತ್ರ!
ವಿಡಿಯೋ ಹಂಚಿಕೊಂಡಿರುವ ಒಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವಂತೆ ಸುಮಾರು 100 ಹಳ್ಳಿಯ ಜನ ಈ ಮುರುಗ ದೇವರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಪ್ರತಿ ಹಳ್ಳಿಯ ಜನರು ಕೈಯಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರ ಹಿಡಿದುಕೊಂಡು ಬರುವ ನಿಶ್ಚಯ ಮಾಡಿದ್ದರಂತೆ. ಅಂತೆಯೇ ಜಾತ್ರೆಯ ತುಂಬೆಲ್ಲ ಪುನೀತ್ ರಾಜ್‌ಕುಮಾರ್ ಚಿತ್ರಗಳು ರಾರಾಜಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

ದೇವಾಲಯಕ್ಕೆ ಸಹಾಯ ಮಾಡಿದ್ದ ಪುನೀತ್
ಪುನೀತ್ ರಾಜ್‌ಕುಮಾರ್ ಆರು ವರ್ಷಗಳ ಹಿಂದೆ ಈ ಮುರುಗ ದೇವಾಲಯಕ್ಕೆ ಭೇಟಿ ನೀಡಿದ್ದರಂತೆ. ಆಗ ದೇವಸ್ಥಾನದ ಆಡಳಿತ ಮಂಡಳಿಯವರು, ದೇವಾಲಯದ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ದೊಡ್ಡ ಮೊತ್ತದ ನೆರವನ್ನೇ ಆಗ ಪುನೀತ್ ರಾಜ್‌ಕುಮಾರ್ ಅವರು ನೀಡಿದ್ದರಂತೆ. ಆ ಗೌರವದಿಂದ ದೇವಾಲಯದ ಮಂದಿ, ಭಕ್ತಾಧಿಗಳು ಪುನೀತ್ ರಾಜ್‌ಕುಮಾರ್ ಅವರಿಗೆ ಹೀಗೆ ಗೌರವ ಸಲ್ಲಿಸಿದ್ದಾರೆ.

ಅಪ್ಪು ಚಿತ್ರ ಹಿಡಿದು ಕೆಂಡ ಹಾಯ್ದಿದ್ದ ತಮಿಳುನಾಡು ಅಭಿಮಾನಿಗಳು
ತಮಿಳುನಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪುನೀತ್ ಹುಟ್ಟೂರು ತಮಿಳುನಾಡಿನ ಗಡಿಯಲ್ಲಿಯೇ ಇದ್ದು, ಪುನೀತ್ ಅಗಲಿದ ಸಮಯದಲ್ಲಿ ಪುನೀತ್ ಫೋಟೊ ಹಿಡಿದುಕೊಂಡು ಕೆಂಡ ಹಾಯ್ದು ತಮ್ಮ ಅಭಿಮಾನ ಪ್ರದರ್ಶಿಸಿದ್ದರು. ಅಷ್ಟು ಮಾತ್ರವೇ ಅಲ್ಲದೆ ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪುನೀತ್ ಹೆಸರಲ್ಲಿ ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಸಹ ಅಲ್ಲಿನ ಅಭಿಮಾನಿಗಳು ಮಾಡಿದ್ದಾರೆ.

ಕರಗಿಲ್ಲ, ಕರಗುವುದಿಲ್ಲ ಅಪ್ಪು ಮೇಲಿನ ಪ್ರೀತಿ
ಪುನೀತ್ ರಾಜ್‌ಕುಮಾರ್ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರೇ ಆಗಿದ್ದರು ಅವರ ಅಭಿಮಾನಿಗಳು ದೇಶದಾದ್ಯಂತ, ವಿದೇಶಗಳಲ್ಲೂ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆದ 'ಜೇಮ್ಸ್' ಸಿನಿಮಾವನ್ನು ಅಭಿಮಾನಿಗಳು ಮುಗಿಬಿದ್ದು ನೋಡಿದ್ದಾರೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ವಿದೇಶಗಳಲ್ಲೂ 'ಜೇಮ್ಸ್' ಜಾತ್ರೆ ಆಚರಣೆ ಮಾಡಿದ್ದಾರೆ. ಅಮೆರಿಕದಲ್ಲಿ ಬೈಕ್, ಕಾರ್ ರ್ಯಾಲಿಗಳನ್ನು 'ಜೇಮ್ಸ್' ಬಿಡುಗಡೆ ದಿನ ಮಾಡಲಾಗಿದೆ. ಅಪ್ಪು ಇಲ್ಲವಾಗಿ ತಿಂಗಳುಗಳೇ ಕಳೆದು ಹೋಗಿದೆ ಆದರೆ ಅವರ ಮೇಲಿನ ಅಭಿಮಾನ ಇಂತಿಷ್ಟೂ ಕಡಿಮೆ ಆಗಿಲ್ಲ.


Click it and Unblock the Notifications











