ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಧನುಷ್- ಐಶ್ವರ್ಯ ರಜನಿಕಾಂತ್
ತಮಿಳು ನಟ ಧನುಷ್ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಇತ್ತೀಚೆಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಜನವರಿ 2022 ರಲ್ಲಿ ಬೇರೆಯಾಗುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಇದೀಗ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ - ಸೆಕ್ಷನ್ 13 ಬಿ ಅಡಿಯಲ್ಲಿ ದಂಪತಿ ಅರ್ಜಿ ಸಲ್ಲಿಸಿರುವುದಾಗಿ ಆಪ್ತರಿಂದ ಇಂಡಿಯಾ ಟುಡೇಗೆ ಮಾಹಿತಿ ಲಭ್ಯವಾಗಿದೆ.
ಧನುಷ್ ಹಾಗೂ ಐಶ್ವರ್ಯ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾಗಿ ಬರೋಬ್ಬರಿ 18 ವರ್ಷಗಳ ಬಳಿಕ ದೂರಾಗುತ್ತಿರುವುದಾಗಿ ಹೇಳಿದ್ದರು. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದರು. ಒಂದೂವರೆ ವರ್ಷದ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಶೀಘ್ರದಲ್ಲೇ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಕಳೆದ 2 ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ವಿಚ್ಛೇದನ ವಿಚಾರ ಘೋಷಣೆ ಬಳಿಕ ಇಬ್ಬರು ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಶಾಲೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಅನಿರುದ್ಧ್ ರವಿಚಂದರ್ ವಿಚಾರದ ಬಗ್ಗೆ ಮಾತನಾಡುತ್ತಾ ಧನುಷ್ ಹೆಸರನ್ನು ಐಶ್ವರ್ಯ ಪ್ರಸ್ತಾಪಿಸಿದ್ದರು. ಇಬ್ಬರೂ ಮತ್ತೆ ಒಂದಾಗಬೇಕು ಎಂದು ಆಪ್ತರು, ಅಭಿಮಾನಿಗಳು ಬಯಸಿದ್ದರು. ಆದರೆ ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಮಾಹಿತಿ ಬಹಿರಂಗವಾಗಿದೆ.
ಧನುಷ್- ಐಶ್ವರ್ಯ ದೂರಾಗಲ್ಲ. ರಜನಿಕಾಂತ್ ಇಬ್ಬರನ್ನು ಒಂದು ಮಾಡಲು ಯತ್ನಿಸುತ್ತಿದ್ದಾರೆ. ಇಬ್ಬರೂ ಸದ್ಯಕ್ಕೆ ಬೇರೆ ಬೇರೆ ವಾಸಿಸುತ್ತಿದ್ದಾರೆ. ಇನ್ನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ. ಇಬ್ಬರೂ ಮತ್ತೆ ಒಂದಾಗುತ್ತಾರೆ ಅಂತೆಲ್ಲಾ ಪದೇ ಪದೇ ಕಾಲಿವುಡ್‌ನಲ್ಲಿ ಚರ್ಚೆ ಆಗಿತ್ತು. ಆದರೆ ಇದೀಗ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
"18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಪರಸ್ಪರ ಹಿತೈಷಿಗಳಾಗಿ ಬಾಳ್ವೆ ನಡೆಸಿದ್ದೆವು. ಈ ಪಯಣ ನಮ್ಮಿಬ್ಬರ ಪ್ರಗತಿ, ತಿಳಿವಳಿಕೆ, ಹೊಂದಾಣಿಕೆ ಮತ್ತು ಪರಸ್ಪರ ಸ್ವೀಕಾರದ ಹಾದಿಯಾಗಿತ್ತು. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಅಗತ್ಯವಿರುವ ಖಾಸಗಿತನ ನೀಡಿ. ಓಂ ನಮಶಿವಾಯ" ಎಂದು ಒಂದೂವರೆ ವರ್ಷದ ಹಿಂದೆ ಧನುಷ್ ಟ್ವೀಟ್ ಮಾಡಿದ್ದರು.

ಧನುಷ್ ಮಾಡಿದ್ದ ಅದೇ ಪೋಸ್ಟ್ ಅನ್ನು ಐಶ್ವರ್ಯ ರಜನಿಕಾಂತ್ ಕೂಡ ಹಂಚಿಕೊಂಡಿದ್ದರು. ಇದಕ್ಕೆ ಯಾವುದೇ ಕ್ಯಾಪ್ಷನ್ ಬೇಡ. ನೀವು ಅರ್ಥ ಮಾಡಿಕೊಂಡರೆ ಅಷ್ಟೇ ಸಾಕು ಎಂದು ಬರೆದುಕೊಂಡಿದ್ದರು. ಇನ್ನು ವಿಚ್ಛೇದನ್ ಬಳಿಕ ಐಶ್ವರ್ಯ 'ಲಾಲ್ ಸಲಾಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ತಂದೆ ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು.
ಮತ್ತೊಂದು ಕಡೆ ನಟ ಧನುಷ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಬಿಡುಗಡೆ ಆಗಿತ್ತು. ಸದ್ಯ 'ರಾಯನ್' ಎನ್ನುವ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. 'ಕುಬೇರ' ಎನ್ನುವ ಮತ್ತೊಂದು ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.


Click it and Unblock the Notifications











