ಧನುಶ್-ಐಶ್ವರ್ಯಾ ವಿಚ್ಛೇದನದ ಬೆನ್ನಲ್ಲೆ ವೈರಲ್ ಆಗುತ್ತಿದೆ ವಿಡಿಯೋ
ತಮಿಳು ಸ್ಟಾರ್ ನಟ ಧನುಶ್ ಹಾಗೂ ಐಶ್ವರ್ಯ ತಮ್ಮ 18 ವರ್ಷದ ವೈವಾಹಿಕ ಜೀವನಕ್ಕೆ ಇಂದು ಅಂತ್ಯ ಹಾಡಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ.
ಸತತ 18 ವರ್ಷ ಒಟ್ಟಿಗಿದ್ದ ಈ ಜೋಡಿ ಕಾಲಿವುಡ್‌ನ ಮಾದರಿ ಜೋಡಿಗಳಲ್ಲಿ ಒಂದಾಗಿತ್ತು. ರಜನೀಕಾಂತ್ ಪುತ್ರಿಯೂ ಆಗಿರುವ ಧನುಶ್ ಪತ್ನಿ ಐಶ್ವರ್ಯಾ ನಿರ್ಮಾಪಕಿಯೂ ಆಗಿ ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದರು. ಈ ನಡುವೆ ಹಠಾತ್ತನೆ ವಿಚ್ಛೇಧನ ಘೋಷಿಸಿರುವುದು ಆಶ್ಚರ್ಯ ತಂದಿದೆ.
ಈ ಜೋಡಿ ವಿಚ್ಛೇದನ ಘೋಷಿಸಿದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ವಿಡಿಯೋ ಧನುಷ್ ಅಭಿಮಾನಿಗಳನ್ನು ಗೊಂದಲಕ್ಕೆ ದೂಡಿದೆ.

ಈ ವಿಡಿಯೋವನ್ನು ಚಿತ್ರೀಕರಿಸಿ ಹೆಚ್ಚು ದಿನವಾಗಿಲ್ಲ ಎನ್ನಲಾಗುತ್ತಿದೆ. ಇಷ್ಟೋಂದು ಅನ್ಯೋನ್ಯತೆಯಿಂದ ಇದ್ದ ಜೋಡಿ ಹೀಗೆ ಹಠಾತ್ತನೆ ದೂರಾಗಿದ್ದು ಎಲ್ಲರಿಗೂ ಆಶ್ಚರ್ಯ ತಂದಿದೆ. ಧನುಶ್ ಹಾಗೂ ಐಶ್ವರ್ಯಾರ ಈ ರೊಮ್ಯಾಂಟಿಕ್ ವಿಡಿಯೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ ವಿಡಿಯೋದಲ್ಲಿ ಚಿಕ್ಕ ಮಕ್ಕಳು ಸಹ ಇದ್ದು ಯಾರೂ ಮಾಸ್ಕ್ ಹಾಕಿಲ್ಲ, ಹಾಗಾಗಿ ಇದು 2020ಕ್ಕಿಂತಲೂ ಮುಂಚಿನ ವಿಡಿಯೋ ಎಂದು ಕೆಲವರು ಅಂದಾಜಿಸಿದ್ದಾರೆ. ವಿಡಿಯೋದಲ್ಲಿ 'ಧನುಶ್' ಹಾಡುತ್ತಿರುವ ಹಾಡು 'ಪೆಟ್ಟಾ' ಸಿನಿಮಾದ್ದಾಗಿದ್ದು, ಆ ಸಿನಿಮಾ 2019 ರ ಜನವರಿಯಲ್ಲಿ ಬಿಡುಗಡೆ ಆಗಿತ್ತು.
ನಟ ಧನುಶ್ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಐಶಾರಾಮಿ ಮನೆ ಕಟ್ಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಮನೆ ಕಟ್ಟಲು ಭೂಮಿ ಪೂಜೆಯನ್ನು ಧನುಶ್ ಹಾಗೂ ಐಶ್ವರ್ಯಾ ಜೋಡಿ ನೆರವೇರಿಸಿತ್ತು. ನಟ ರಜನೀಕಾಂತ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಾದ ಮಾಡಿದ್ದರು. ಮನೆ ನಿರ್ಮಾಣ ಇನ್ನೂ ಪೂರ್ಣವಾಗುವ ಮುನ್ನವೇ 'ಮನ ಒಡೆದು'ಕೊಂಡಿದ್ದಾರೆ ಈ ದಂಪತಿ.
ಎರಡು ತಿಂಗಳ ಹಿಂದೆ ಅಕ್ಟೋಬರ್‌ನಲ್ಲಿ ನಟ ರಜನೀಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು, ನಟ ಧನುಶ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಏಕಕಾಲದಲ್ಲಿ ಬಂದಿತ್ತು. ಇಬ್ಬರು ಒಟ್ಟಿಗೆ ತಮ್ಮ ಪ್ರಶಸ್ತಿಯನ್ನು ಪ್ರದರ್ಶಿಸುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಐಶ್ವರ್ಯ, ''ಈ ಇಬ್ಬರೂ ನನಗೆ ಸೇರಿದವರು, ಇದು ಇತಿಹಾಸ'' ಎಂದು ಬರೆದುಕೊಂಡಿದ್ದರು. ಇದಾದ ಎರಡೇ ತಿಂಗಳಲ್ಲಿ ಈಗ ವಿಚ್ಛೇದನ ಪಡೆದುಕೊಂಡಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದ ಬಳಿಕ ಅತಿ ದೊಡ್ಡ ತಾರಾ ವಿಚ್ಛೇದನ ಧನುಶ್ ಹಾಗೂ ಐಶ್ವರ್ಯಾ ಅವರದ್ದಾಗಿದೆ. ಮಗಳು-ಅಳಿಯನ ವಿಚ್ಛೇಧನದ ಬಗ್ಗೆ ನಟ ರಜನೀಕಾಂತ್ ಈ ವರೆಗೆ ಮಾತನಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಲವರು ರಜನೀಕಾಂತ್‌ಗೆ ಸಮಾಧಾನದ ಮಾತುಗಳನ್ನು ಹೇಳುತ್ತಿದ್ದಾರೆ. ರಜನೀಕಾಂತ್ ಎರಡನೇ ಮಗಳು ಸೌಂದರ್ಯ ಸಹ ವಿಚ್ಛೇದನ ಪಡೆದುಕೊಂಡು ಮರು ವಿವಾಹ ಆಗಿದ್ದಾರೆ.
ಧನುಶ್ ಹಾಗೂ ಐಶ್ವರ್ಯಾ 2004ರ ನವೆಂಬರ್ 18ರಂದು ವಿವಾಹವಾಗಿದ್ದರು. ಈ ದಂಪತಿಗೆ ಯಾತ್ರಾ ಹಾಗೂ ಲಿಂತ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಧನುಶ್ ಹಾಗೂ ಶ್ರುತಿ ಹಾಸನ್ ನಟಿಸಿದ್ದ ಹಿಟ್ ಸಿನಿಮಾ '3' ಅನ್ನು ಐಶ್ವರ್ಯಾ ನಿರ್ದೇಶನ ಮಾಡಿದ್ದರು. ಬಳಿಕ 'ವೈ ರಾಜಾ ವೈ' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಬಳಿಕ 'ಸಿನಿಮಾ ವೀರನ್' ಎಂಬ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದರು.


Click it and Unblock the Notifications











