ರಜನಿಕಾಂತ್ ಮೊಮ್ಮಗ ಯಾತ್ರಾ ಚಿತ್ರರಂಗ ಪ್ರವೇಶ; ತಂದೆ ಧನುಷ್ ಪ್ರತಿಕ್ರಿಯೆ
ಸ್ಟಾರ್ ನಟರ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗಕ್ಕೆ ಬರುವುದು ಹೊಸದೇನು ಅಲ್ಲ. ಕೆಲವರು ನೆಪೊಟಿಸಂ ಎಂದರೂ ಪ್ರತಿಭೆ ಇದ್ದವರು ಮಾತ್ರ ಬಣ್ಣದ ಲೋಕದಲ್ಲಿ ಉಳಿಯಲು ಸಾಧ್ಯ ಎನ್ನುವ ವಾದವೂ ಇದೆ. ರಜನಿಕಾಂತ್ ಇಬ್ಬರೂ ಹೆಣ್ಣು ಮಕ್ಕಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ನಿರ್ದೇಶಕಿಯರಾಗಿ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ಚಿತ್ರ ನಟ ಧನುಷ್‌ಗೆ ಮಗಳು ಐಶ್ವರ್ಯಳನ್ನು ತಲೈವಾ ಮದುವೆ ಮಾಡಿ ಕೊಟ್ಟಿದ್ದರು.
ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಮದುವೆಯಾಗಿ 20 ವರ್ಷಗಳ ಬಳಿಕ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ತಾವಿಬ್ಬರು ದೂರಾದರೂ ಮಕ್ಕಳ ವಿಚಾರದಲ್ಲಿ ಇಬ್ಬರೂ ಪೋಷಕರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ. ತಾಯಿ ಜೊತೆ ಮಕ್ಕಳು ಇದ್ದರೂ ಆಗಾಗ್ಗೆ ತಂದೆಯನ್ನು ಭೇಟಿ ಮಾಡುತ್ತಾರೆ.

ತಮ್ಮ ಮಗ ಚಿತ್ರರಂಗಕ್ಕೆ ಬರುವ ಬಗ್ಗೆ ಧನುಷ್ ಪ್ರತಿಕ್ರಿಯಿಸಿದ್ದಾರೆ. ಈ ವಾರ ಧನುಷ್ ನಟನೆಯ 'ಕಾರ' ಸಿನಿಮಾ ಬಿಡುಗಡೆ ಆಗ್ತಿದೆ. ತಮಿಳು ಹಾಗೂ ತೆಲುಗಿನಲ್ಲಿ ಸಿನಿಮಾ ತೆರೆಗೆ ಬರ್ತಿದ್ದು ಭರ್ಜರಿ ಪ್ರಚಾರ ಮಾಡಲಾಗ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ- ರಿಲೀಸ್ ಈವೆಂಟ್ ನಡೀತು. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ.
ಧನುಷ್ ಹಿರಿಯ ಮಗ ಯಾತ್ರಾ ಚಿತ್ರರಂಗ ಪ್ರವೇಶಿಸುತ್ತಾರೆ. ಸ್ವತಃ ತಂದೆ ಮಗನನ್ನು ಹೀರೊ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. "ನಾನು 16ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದೆ. ಅದಕ್ಕೆ ಕಾರಣ ನಮ್ಮ ಕುಟುಂಬದ ಪರಿಸ್ಥಿತಿ. ಸದ್ಯ ಯಾತ್ರಾ ವಯಸ್ಸು 19 ವರ್ಷ. ಆದರೂ ನನಗೆ ಅವನು ಇನ್ನು ಚಿಕ್ಕಮಗು ರೀತಿ ಕಾಣ್ತಾನೆ. ಮುಂದಿನ ದಿನಗಳಲ್ಲಿ ಯಾವ ಹಾದಿ ಹಿಡಿತ್ತಾನೆ ಗೊತ್ತಿಲ್ಲ. ಚಿತ್ರರಂಗಕ್ಕೆ ಬರ್ತಾನಾ? ಅನ್ನುವುದನ್ನು ಹೇಳೋಕೆ ಸಾಧ್ಯವಿಲ್ಲ. ಇನ್ನು ಸಮಯ ಇದೆ. ಅವನು ಯಾವ ಕರಿಯರ್ ಆಯ್ಕೆ ಮಾಡಿಕೊಳ್ತಾನೋ, ಅದಕ್ಕೆ ನನ್ನ ಒಪ್ಪಿಗೆಯಿದೆ" ಎಂದಿದ್ದಾರೆ.
ಶಿವನ ಭಕ್ತನಾಗಿರುವ ಧನುಷ್ ಮಕ್ಕಳಿಗೆ ಯಾತ್ರಾ ಹಾಗೂ ಲಿಂಗಾ ಎಂದು ಹೆಸರಿಟ್ಟಿದ್ದಾರೆ. ಡಿವೋರ್ಸ್ ಬಳಿಕ ಕೂಡ ಯಾತ್ರಾ ಸ್ಕೂಲ್ ಗ್ರಾಜುಯೇಷನ್ ಕಾರ್ಯಕ್ರಮದಲ್ಲಿ ಧನುಷ್ ಹಾಗೂ ಐಶ್ವರ್ಯ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗಿತ್ತು. ಯಾತ್ರಾ ತನ್ನ ಅಪ್ಪ, ಅಮ್ಮನ ಜೊತೆಗಿರುವ ಫೋಟೊವನ್ನು ರಜನಿಕಾಂತ್ ಹಂಚಿಕೊಂಡು ಅಭಿನಂದನೆ ತಿಳಿಸಿದ್ದರು.
"ಹೆಮ್ಮೆಯ ಪೋಷಕರು" ಎಂದು ಬರೆದು ಧನುಷ್ ಕೂಡ ಮಗ ಹಾಗೂ ಐಶ್ವರ್ಯ ಜೊತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದರು. ಕಳೆದ ವರ್ಷ ಧನುಷ್ ನಿರ್ದೇಶಿಸಿ ನಟಿಸಿದ್ದ 'ಇಡ್ಲಿ ಕಡೆ' ಸಿನಿಮಾ ತೆರೆಗೆ ಬಂದಿತ್ತು. ತಕ್ಕಮಟ್ಟಿಗೆ ಸಕ್ಸಸ್ ಕಂಡಿತ್ತು. ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿ ಹೆಚ್ಚು ಜನರನ್ನು ತಲುಪಿತ್ತು. ಸದ್ಯ 'ಕಾರ' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ತಮ್ಮ 55ನೇ ಸಿನಿಮಾ ಚಿತ್ರೀಕರಣವನ್ನು ಆರಂಭಿಸಿದ್ದಾರೆ.
ಐಶ್ವರ್ಯ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಹೀನಾಯವಾಗಿ ಸೋತಿತ್ತು. ಚಿತ್ರದಲ್ಲಿ ತಲೈವಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಯಾತ್ರಾ ಹಾಗೂ ಲಿಂಗಾ ಕೂಡ ತಾತ, ಅಪ್ಪನ ರೀತಿ ಬಣ್ಣ ಹಚ್ಚಿ ತೆರೆಮೇಲೆ ಮಿಂಚುತ್ತಾರಾ? ಅಥವಾ ತೆರೆ ಹಿಂದೆ ತಂತ್ರಜ್ಞರಾಗಿ ಗುರ್ತಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಸಿನಿಮಾ ಬಿಟ್ಟು ಬೇರೆ ಕ್ಷೇತ್ರದಲ್ಲಿ ಕರಿಯರ್ ಕಟ್ಟಿಕೊಂಡರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications