ಧನುಷ್ ಬೇಕಿತ್ತಾ ಇದೆಲ್ಲ, 'ನಾನು ಬೀದಿಯಲ್ಲಿ ಇದ್ದೆ’ ಎಂದ ಕಾಲಿವುಡ್ ಸ್ಟಾರ್‌ಗೆ ತಲೆ ಕೆಟ್ಟಿದ್ಯಾ..?
ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವುದು.. ಉಳಿಯುವುದು.. ಬೆಳೆಯುವುದು.. ಅವರ ಅವರ ಟ್ಯಾಲೆಂಟ್ ಮೇಲೆ ನಿರ್ಧಾರವಾಗುತ್ತೆ ಆದರೂ.. ಇವರ ಹಾದಿ ಸರಾಗವಾಗಲು ಅವರ ಹೆತ್ತವರು ಕಾರಣವೆನ್ನುವುದನ್ನು ಅಲ್ಲಗೆಳೆಯಲು ಸಾಧ್ಯ ಇಲ್ಲ. ಆದರೆ.. ಇಲ್ಲೊಬ್ಬರು ಸಿನಿಮಾ ಫ್ಯಾಮಿಲಿಯಿಂದನೇ ಬಂದು ಸೂಪರ್ ಸ್ಟಾರ್ ಆದರೂ, ತಾವು ಬೀದಿಯಿಂದ ಬಂದು ಈ ಪಟ್ಟಕ್ಕೇರಿದ್ದು ಅನ್ನುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ. ಅವರು ಬೇರೆ ಯಾರು ಅಲ್ಲ ಬದಲಿಗೆ ತಲೈವಾ ರಜಿನಿಕಾಂತ್ ಅವರ ಮಾಜಿ ಅಳಿಯ ಧನುಷ್ ಅನ್ನುವುದು ದುರಂತ
ಹೌದು, ಧನುಷ್.. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ಹೀರೋ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಜನಸಾಮಾನ್ಯರನ್ನ ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಧನುಷ್ ಸದ್ಯ ತಮ್ಮ ''ರಾಯನ್'' ಚಿತ್ರದ ಬಿಡುಗಡೆಯ ದಿನವನ್ನು ಎದುರು ನೋಡುತ್ತಿದ್ಧಾರೆ. ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಬಾಲಿಶವಾಗಿ ಮಾತನಾಡಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ ಧನುಷ್.

ಹೌದು, ''ರಾಯನ್'' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಧನುಷ್, ತಮ್ಮ ಮನೆಯಲ್ಲಿ ಯಾರು ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹೊರಗಡೆಯಿಂದ ಬಂದು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿರುವುದಾಗಿ ಹೇಳಿದ್ದಾರೆ. ತಾವು ''ಸೆಲ್ಫ್ ಮೇಡ್ ಸೂಪರ್ ಸ್ಟಾರ್'' ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಧನುಷ್ ಹೇಳಿದ್ದೆಲ್ಲವೂ ಸುಳ್ಳು. ಯಾಕೆಂದರೆ.. ಧನುಷ್ ತಂದೆ 'ಕಸ್ತೂರಿ ರಾಜ' ತಮಿಳು ಚಿತ್ರರಂಗದ ದೊಡ್ಡ ಹೆಸರು. ನಿರ್ದೇಶಕರಾಗಿ-ನಿರ್ಮಾಪಕರಾಗಿ ಹೆಸರು ಮಾಡಿದವರು. ಧನುಷ್ ಅಭಿನಯದ ಮೊದಲ ಚಿತ್ರವನ್ನು ನಿರ್ದೇಶಿಸಿದ್ದು ಕೂಡ ಇವರೇ. ಆದರೆ.. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದು ಚಿತ್ರರಂಗಕ್ಕೆ ಬಂದ ಧನುಷ್ ನಾನು ಬೀದಿಯಿಂದ ಎದ್ದು ಬಂದಿರುವ ವ್ಯಕ್ತಿ ಎಂದಿದ್ದಾರೆ.
ಇಷ್ಟೇ ಅಲ್ಲ ಸುಳ್ಳು ಅನ್ನೋದು ಮನುಷ್ಯನ ವ್ಯಕ್ತಿತ್ವವನ್ನು ತಿಂದು ಬಿಸಾಕುವ ಗೆದ್ದಲಿದ್ದಂತೆ ಅನ್ನುವುದನ್ನು ಮರೆತ ಧನುಷ್, ಇದೇ ಸಮಯದಲ್ಲಿ ತಮ್ಮ ಮಾಜಿ ಮಾವ ರಜಿನಿಕಾಂತ್ ವಾಸ ಇರುವ ಪ್ರತಿಷ್ಠಿತ ಪೋಯಸ್ ಗಾರ್ಡನ್‌ನಲ್ಲಿ ಮನೆ ಕಟ್ಟಿಸಿದ್ದೇಕೆ ಎನ್ನುವುದನ್ನೂ ಹೇಳಿದ್ದಾರೆ. ಒಂದು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೋಗಿ ಮತ್ತೊಂದು ಸುಳ್ಳು ಹೇಳಿದ್ಧಾರೆ.
ನಾನು 16ನೇ ವಯಸ್ಸಿನಲ್ಲಿದ್ದಾಗ ಪೋಯಸ್ ಗಾರ್ಡನ್‌ನಲ್ಲಿ ಓಡಾಡುತ್ತಿದ್ದೆ. ಇದು ರಜನಿಕಾಂತ್ ಮನೆ, ಇದು ಜಯಲಲಿತಾ ಮನೆ ಎಂದು ಜನರು ಹೇಳುತ್ತಿದ್ದರು. ಮುಂದೊಂದು ದಿನ ನಾನು ಕೂಡ ಈ ಏರಿಯಾದಲ್ಲಿ ಒಂದು ಚಿಕ್ಕ ಮನೆಯನ್ನಾದರೂ ಕೊಂಡುಕೊಳ್ಳಬೇಕು ಅಂತ ತೀರ್ಮಾನಿಸಿದೆ. ಹೀಗಾಗಿಯೇ ನಾನು ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಿದೆ ಎಂದಿರುವ ಧನುಷ್ ನಾನು ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸಿದ್ದು ಇಷ್ಟೆಲ್ಲ ಚರ್ಚೆ ಆಗುತ್ತದೆ ಎಂಬುದು ನನಗೆ ಮೊದಲೇ ಗೊತ್ತಿದ್ದರೆ, ಯಾವುದಾದರೂ ಒಂದು ಅಪಾರ್ಟ್ಮೆಂಟ್ನಲ್ಲಿ ಒಂದು ಚಿಕ್ಕ ಮನೆ ಖರೀದಿಸುತ್ತಿದ್ದೆ ಎಂದಿದ್ದಾರೆ. ಪೋಯಸ್ ಗಾರ್ಡನ್‌ನಲ್ಲಿ ನಾನು ಮನೆ ಖರೀದಿಸಬಾರದೇ..? ಬೀದಿಯಲ್ಲಿ ಇದ್ದ ನಾನು ಬೀದಿಯಲ್ಲೇ ಇರಬೇಕಾ' ಎಂದು ಕಿಡಿ ಕಾರಿದ್ದಾರೆ.
ಧನುಷ್ ಅವರ ಈ ಮಾತುಗಳು ಈಗ ಅನೇಕರನ್ನು ಕೆರಳಿಸಿವೆ. ಹೀಗಾಗಿಯೇ.. ಬೀದಿಯಲ್ಲಿ ಇದ್ದೆ ಅಂತ ಹೇಳ್ತಿದ್ದೀರಾ, ಕೊನೆ ಪಕ್ಷ ಬೀದಿ ಹೇಗಿರುತ್ತೆ ಅನ್ನುವುದಾದರೂ ನಿಮಗೆ ಗೊತ್ತಾ ಎಂದು ಕೆಂಡ ಕಾರುತ್ತಿದ್ದಾರೆ. ಧನುಷ್‌ಗೆ ತಲೆಗಿಲೆ ಕೆಟ್ಟಿದ್ಯಾ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಎಲ್ಲವನ್ನೂ ಸಲೀಸಾಗಿ ಪಡೆದು ಈಗ ಬಡ ಕುಟುಂಬದಿಂದ ಬಂದವರಂತೆ ಮಾತನಾಡಲು ನಾಚಿಕೆಯಾಗಲ್ವಾ ಎಂದು ತಪರಾಕಿಯನ್ನೂ ಹಾಕುತ್ತಿದ್ದಾರೆ. ಕಷ್ಟ ಅಂದರೆ ಏನೆಂದು ತಿಳಿಯದ ವ್ಯಕ್ತಿ, ಕಷ್ಟದ ಬಗ್ಗೆ ಪ್ರವಚನ ಕೊಡ್ತಿರುವುದು ಹಾಸ್ಯಾಸ್ಪದ ಎಂದು ಕೂಡ ಅನೇಕರು ಧನುಷ್ ಕಾಲೆಳೆಯುತ್ತಿದ್ದಾರೆ. ಪೋಯಸ್ ಗಾರ್ಡನ್ನಲ್ಲಿನ ಮನೆ ವಿಚಾರ ಪ್ರಸ್ತಾಪಿಸಿ, ಮಾಜಿ ಮಾವ ರಜಿನಿಯ ಜೊತೆ ತಮ್ಮನ್ನು ತಾವು ಧನುಷ್ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಧನುಷ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











