9 ಗಂಟೆಗೆ ಸಿನ್ಮಾ ಬಿಡುಗಡೆ ಆದ್ರೆ 8 ಗಂಟೆಗೆ ಬರುವ ವಿಮರ್ಶೆ ನಂಬಬೇಡಿ- ನಟ ಧನುಷ್
ತಮಿಳಿನ 'ಇಡ್ಲಿ ಕಡೇ' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ನಟ ಧನುಷ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಸಿನಿಮಾ ಇದು. ಅಕ್ಟೋಬರ್ 1ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಸದ್ಯ ಬಿಡುಗಡೆ ಆಗಿರುವ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಸಿನಿಮಾ ಗೆಲ್ಲುವ ನಿರೀಕ್ಷೆ ಹುಟ್ಟಾಕ್ಕಿದೆ. ಇದೆಲ್ಲದರ ನಡುವೆ ಧನುಷ್ ಹೇಳಿಕೆವೊಂದು ವೈರಲ್ ಆಗ್ತಿದೆ.
ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಬಹಳ ಅದ್ಧೂರಿಯಾಗಿ 'ಇಡ್ಲಿ ಕಡೇ' ಸಿನಿಮಾ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ಎಂದಿನಂತೆ ದರ್ಶನ್ ಬಿಳಿ ಅಂಗಿ, ಬಿಳಿ ಪಂಚೆಯಲ್ಲಿ ದರ್ಶನ ಕೊಟ್ಟರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ನೋಡಲು ಜಮಾಯಿಸಿದ್ದರು. ಕೆಲವರು ವೇದಿಕೆ ಏರಿ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫೇಕ್ ಸುದ್ದಿ, ಫೇಕ್ ರಿವ್ಯೂ, ನೆಗೆಟಿವ್ ರಿವ್ಯೂ ಹೆಚ್ಚಾಗುತ್ತಿದೆ. ಯಾವುದೇ ಸಿನಿಮಾ ಬಂದರೂ ನೆಗೆಟಿವ್ ಹಬ್ಬಿಸುವವರ ಸಂಖ್ಯೆ ಅತಿಯಾಗುತ್ತಿದೆ. ಒಬ್ಬ ನಟನ ಚಿತ್ರದ ಬಗ್ಗೆ ಬೇರೆ ನಟನ ಅಭಿಮಾನಿಗಳು ಅಪಪ್ರಚಾರ ಮಾಡುವುದು ಇದೆ. ಸಿನಿಮಾ ಬಿಡುಗಡೆಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ರಿವ್ಯೂ ಹಾಕುತ್ತಾರೆ. ಯೂಟ್ಯೂಬ್‌ನಲ್ಲಿ ಫೇಕ್ ರಿವ್ಯೂ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಇದೇ ವಿಚಾರದ ಬಗ್ಗೆ ನಟ ಧನುಷ್ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.
"9 ಗಂಟೆಗೆ ಸಿನ್ಮಾ ಪ್ರದರ್ಶನ ಶುರುವಾದ್ರು, 8 ಗಂಟೆಗೆ ಕೆಲ ರಿವ್ಯೂ ಬರುತ್ತೆ. ಅದನ್ನೆಲ್ಲಾ ನಂಬಬೇಡಿ. 9 ಗಂಟೆಗೆ ಸಿನ್ಮಾ ಶುರುವಾದರೆ 12.30ಕ್ಕೆ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಅದಕ್ಕೂ ಮುನ್ನ ಬರುವ ವಿಮರ್ಶೆಗಳನ್ನು ನಂಬಬೇಡಿ. ನೀವೇ ಸಿನ್ಮಾ ನೋಡಿ ನಿರ್ಧರಿಸಿ. ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಸಿನಿಮಾ ನೋಡಿ ಹೇಳಿದ್ರೆ ಕೇಳಿ. ಸಿನ್ಮಾ ನೋಡಬೇಕೋ ಬೇಡ್ವೋ ನಿರ್ಧರಿಸಿ. ಅದು ಈಗ ಬಹಳ ಮುಖ್ಯ. ಸಿನ್ಮಾ ಆರೋಗ್ಯವಾಗಿರಬೇಕು, ಎಲ್ಲಾ ಸಿನ್ಮಾಗಳು ಗೆಲ್ಲಬೇಕು. ಸಿನ್ಮಾ ನಂಬಿಕೊಂಡಿರುವವರು ಬದುಕಬೇಕು, ಅದು ನಿಮ್ಮ ಕೈಯಲ್ಲಿದೆ. ಸಿನ್ಮಾ ಹೇಗಿದೆ ಎಂದು ನೀವೇ ನಿರ್ಧರಿಸಿ" ಎಂದು ಧನುಷ್ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ರಿವ್ಯೂಗಳಿಂದಲೇ ಕೆಲ ಸಿನಿಮಾಗಳು ಸೋಲುತ್ತಿವೆ ಎನ್ನುವ ಆರೋಪವೂ ಇದೆ. ಚಿತ್ರಮಂದಿರಗಳ ಮುಂದೆ ಯೂಟ್ಯೂಬ್ ವಾಹಿನಿಗಳು ನೀಡುವ ರಿವ್ಯೂ, ಪ್ರೇಕ್ಷಕರ ರಿಯಾಕ್ಷನ್ ಸಿನಿಮಾಗಳ ಭವಿಷ್ಯ ನಿರ್ಧರಿಸುತ್ತಿದೆ. ಕೆಲ ಒಳ್ಳೆ ಸಿನಿಮಾಗಳನ್ನು ಅವರು ಸಾಯಿಸುತ್ತಿದ್ದಾರೆ ಎಂದು ತಮಿಳು ಚಿತ್ರ ನಿರ್ಮಾಪಕರು, ವಿತರಕರು, ಪ್ರದರ್ಶಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರಮಂದಿರಗಳ ಮುಂದೆ ಯೂಟ್ಯೂಬ್ ಚಾನಲ್‌ನವರು ಬರಲು ಅವಕಾಶ ಕೊಡಬಾರದು ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು 'ಇಡ್ಲಿ ಕಡೇ' ಸಿನಿಮಾ ತೆಲುಗಿಗೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕನ್ನಡದ 'ಕಾಂತಾರ-1' ಚಿತ್ರದ ಪೈಪೋಟಿ ಎದುರಿಸಲಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಿದೆ. ಚಿತ್ರದಲ್ಲಿ ನಿತ್ಯಾ ಮೆನನ್ ನಾಯಕಿಯಾಗಿ ಮಿಂಚಿದ್ದಾರೆ. ರಾಜ್‌ಕಿರಣ್, ಸತ್ಯರಾಜ್, ಅರುಣ್ ವಿಜಯ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಹಳ್ಳಿಯಲ್ಲಿ ಇಡ್ಲಿ ಅಂಗಡಿ ನಡೆಸುವ ತಂದೆ. ಆತನನ್ನು ನೋಡುತ್ತಾ ಬೆಳೆದ ಮಗ. ಮುಂದೆ ದೊಡ್ಡ ಫುಡ್ ಕಂಪನಿಯಲ್ಲಿ ಕೆಲಸ ಸಿಕ್ಕರೂ ಅಂತಿಮವಾಗಿ ತನ್ನೂರಿಗೆ ಬಂದು ತಂದೆಯ ಇಡ್ಲಿ ಅಂಗಡಿಯನ್ನೇ ಮುನ್ನಡೆಸಲು ತೀರ್ಮಾನಿಸುತ್ತಾನೆ. ಅದಕ್ಕೆ ಕಾರಣ ಏನು ಎನ್ನುವ ಕಥೆ ಚಿತ್ರದಲ್ಲಿದೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ.


Click it and Unblock the Notifications











