ಬಾಕ್ಸಾಫೀಸ್‌ನಲ್ಲಿ ಧನುಷ್ 'ವಾತಿ' ಆರ್ಭಟ: ಸೈಲೆಂಟ್ ಆಗಿ ಬಂದು ₹100 ಕೋಟಿ ಬಾಚಿದ ಸಿನಿಮಾ
ತಮಿಳು ನಟ ಧನುಷ್ ನಟನೆಯ 'ವಾತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಕಾಲಿವುಡ್, ಟಾಲಿವುಡ್ ಸಿನಿರಸಿಕರು ಗಮನ ಸೆಳೆದಿದೆ. ತಮಿಳು- ತೆಲುಗಿನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಇದೀಗ ₹100 ಕೋಟಿ ಕ್ಲಬ್ ಸೇರಿದೆ. ಈ ವಿಚಾರವನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಧನುಷ್ ಸಿನಿಮಾಗಳ ಲಿಸ್ಟ್‌ನಲ್ಲಿ ₹100 ಕೋಟಿ ಕ್ಲಬ್ ಸೇರಿದ 2ನೇ ಸಿನಿಮಾ ಇದು.
ವೆಂಕಿ ಅಟ್ಲೂರಿ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಡ್ರಾಮಾ ಸಿನಿಮಾದಲ್ಲಿ ಧನುಷ್ ಜೋಡಿಯಾಗಿ ಸಂಯುಕ್ತಾ ಮೆನನ್ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್, ತಣಿಕೇಲ ಭರಣಿ, ಸಮುದ್ರ ಖನಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಕಳೆದ ವರ್ಷ ಧನುಷ್ ನಟನೆಯ 'ತಿರುಚಿತ್ರಾಂಬಲಂ' ಸಿನಿಮಾ ಕೂಡ ₹100 ಕೋಟಿ ಗಳಿಕೆ ಕಂಡು ಬಾಕ್ಸಾಫೀಸ್ ದೋಚಿತ್ತು. ಶಿಕ್ಷಣ ವ್ಯವಸ್ಥೆಯ ಕುರಿತಾದ ಕಥೆ ಚಿತ್ರದಲ್ಲಿದೆ. ಧನುಷ್ ಚಿತ್ರದಲ್ಲಿ ಕಾಲೇಜ್ ಲೆಕ್ಚರರ್ ಆಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

90ರ ದಶಕದ ಕೊನೆ ಕೊನೆಗೆ ಇಂಜಿನಿಯರ್ ಪದವಿಗೆ ಡಿಮ್ಯಾಂಡ್ ಹೆಚ್ಚುತ್ತಿದ್ದ ಸಮಯದಲ್ಲಿ ಕೆಲವರು ವಿದ್ಯೆಯನ್ನು ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಳ್ಳುತ್ತಾರೆ. ಅದರಲ್ಲಿ ಒಬ್ಬ ತ್ರಿಪಾಠಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ತ್ರಿಪಾಠಿ. ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರನ್ನು ಹೆಚ್ಚಿನ ಸಂಬಳ ಕೊಟ್ಟು ತನ್ನ ಕಾಲೇಜಿನ ಕಡೆ ತಿರುಗಿಸಿಕೊಳ್ಳುತ್ತಾನೆ. ಇದರಿಂದ ಬಡವರು, ಮಧ್ಯಮ ವರ್ಗದ ಮಕ್ಕಳಕ್ಕೆ ಆಧಾರವಾಗಿದ್ದ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ.
ಖಾಸಗಿ ಕಾಲೇಜುಗಳಲ್ಲಿ ಓದಲು ಸಾಧ್ಯವಿಲ್ಲ ಅಂತ ಸಾಕಷ್ಟು ಜನ ಹೊರ ಬರುತ್ತಾರೆ. ಆಗ ತ್ರಿಪಾಠಿ ಒಂದು ಐಡಿಯಾ ಮಾಡ್ತಾನೆ. ಸರ್ಕಾರಿ ಕಾಲೇಜುಗಳನ್ನು ನಾವೇ ದತ್ತು ತೆಗೆದುಕೊಳ್ಳುತ್ತೇವೆ ಎನ್ನುತ್ತಾನೆ. ಅಲ್ಲಿಗೆ ತಮ್ಮ ಕಾಲೇಜುಗಳಲ್ಲಿ ಕೆಲಸ ಮಾಡುವ ಅಷ್ಟೇನು ಅನುಭವ ಇಲ್ಲದ ಜ್ಯೂನಿಯರ್ ಶಿಕ್ಷಕರನ್ನು ಕಳುಹಿಸುತ್ತಾನೆ. ಸರ್ಕಾರಿ ಕಾಲೇಜುಗಳನ್ನು ಸರಿಯಾಗಿ ಶಿಕ್ಷಣ ಕೊಡಲ್ಲ ಎನ್ನುವುದನ್ನು ಸಾಬೀತು ಮಾಡಲು ಹೊರಡುತ್ತಾನೆ. ಆ ರೀತಿ ಸರ್ಕಾರಿ ಕಾಲೇಜಿಗೆ ಅಪಾಯಿಂಟ್ ಆದ ಬಾಲು ಸಾರ್, ತ್ರಿಪಾಠಿ ಏಟಿಗೆ ಹೇಗೆ ಎದುರೇಟು ಕೊಡುತ್ತಾನೆ? ಮುಂದೇನಾಗುತ್ತೆ? ಎನ್ನುವುದೇ 'ವಾತಿ' ಸಿನಿಮಾ ಕಥೆ.

ಆಂಧ್ರ, ತೆಲಂಗಾಣದಲ್ಲೂ ಧನುಷ್‌ಗೆ ಒಳ್ಳೆ ಅಭಿಮಾನಿ ಬಳಗ ಇದೆ. ಫೆಬ್ರವರಿ 17ಕ್ಕೆ ಸಿನಿಮಾ ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿತ್ತು. 15 ದಿನಗಳಲ್ಲೇ ಸಿನಿಮಾ ₹100 ಕೋಟಿ ಕಲೆಕ್ಷನ್ ಮಾಡಿ ಸದ್ದು ಮಾಡಿದೆ. ಚಿತ್ರದ ಹಾಡೊಂದನ್ನು ಧನುಷ್ ತೆಲುಗು, ತಮಿಳಿನಲ್ಲಿ ಹಾಡಿ ಗಮನ ಸೆಳೆದಿದ್ದರು. ಹಾಡು ಸೂಪರ್ ಹಿಟ್ ಆಗಿತ್ತು. ಅದು ಚಿತ್ರಕ್ಕೆ ಪ್ಲಸ್ ಆಗಿದೆ.


Click it and Unblock the Notifications











